ಕಾವ್ಯ ಸಂಗಾತಿ
“ಕೊನೆಯ ವಿದಾಯ”
ಪ್ರೊ. ಸಿದ್ದು ಸಾವಳಸಂಗ”
ಗೆಳೆಯಾ…
ಕಾಲೇಜು ದಿನಗಳಲ್ಲಿ
ಕಣ್ಣು ಸನ್ನೆಯಿಂದಲೇ ಅಂಕುರಿಸಿದ
ನಮ್ಮಿಬ್ಬರ ಮಧುರ ಪ್ರೇಮ !
ನಂತರದ ದಿನಗಳಲ್ಲಿ
ಕೈಕೈ ಹಿಡಿದು ತಿರುಗಾಡಿದ್ದು ಮರೆತುಹೋಯಿತೆ ?
ಜೀವಕ್ಕೆ ಜೀವ, ಪ್ರಾಣಕ್ಕೆ ಪ್ರಾಣ ಎಂದಿದ್ದ
ನಿನ್ನದು ಬರೀ ಬೂಟಾಟಿಕೆಯೆ ?
ಜಗತ್ತಿನ ಯಾವ ಶಕ್ತಿಯೂ ನಮ್ಮನ್ನು ಅಗಲಿಸಲು
ಸಾಧ್ಯವಿಲ್ಲವೆಂದು ಹೇಳಿದ್ದು ಬರೀ ಹುಸಿ ಸುಳ್ಳೆ ?
ನಾವಿಬ್ಬರು ಬದುಕಿನುದ್ದಕ್ಕೂ ಬೆಚ್ಚನೆಯ ಕೈಹಿಡಿದು
ಹೆಜ್ಜೆಹಾಕೋಣವೆಂದು ಆಣೆ ಪ್ರಮಾಣ
ಮಾಡಿದ್ದು ಸಹ ನಾಟಕವೇ ?
ನಾನು ಬಡವಿ, ನನ್ನ ಹತ್ತಿರ ಏನೂಯಿಲ್ಲ !
ಎಂದರಿತು ನನ್ನ ಕೈಬಿಟ್ಟೆಯಾ ?
ಸಿರಿವಂತ ಮನೆತನದ ವಧು ಸಿಕ್ಕ ಕೂಡಲೇ
ನಮ್ಮ ಸುಂದರ ಸಂಬಂಧಗಳು ಸತ್ತು ಹೋದುವೆ ?
ಇರಲಿ ಗೆಳೆಯ
ನೀನಾದರೂ ಸುಖವಾಗಿರು !
ನಿನ್ನ ಹೆಸರಲ್ಲಿ ಉಸಿರು ಹೋಗುವವರೆಗೂ
ಏಕಾಂಗಿಯಾಗಿಯೇ ಬದುಕಿ ತೋರಿಸುವೆ !
ಹೆಣ್ಣು ಅಬಲೆಯಲ್ಲ, ಸಬಲೆಯೆಂದು
ಒಂಟಿಯಾಗಿ ಸಮಾಜದ ಮುಂದೆ
ಧೈರ್ಯದಿಂದ ಬಾಳಿ ತೋರಿಸುವೆ !
ನೀನು ಮಾತ್ರ ಹೆಂಡತಿ, ಮಕ್ಕಳೆಂದು ಸುಖವಾಗಿರು
ನಿನ್ನ ಹಾದಿಗೆ ನಾನು ಮುಳ್ಳಾಗಲಾರೆ !!
ಪಾಲಿಗೆ ಬಂದದ್ದು ಪಂಚಾಮೃತವೆಂದು
ಬದುಕು ಬಂದಂತೆ ಸ್ವೀಕರಿಸಿ, ಚೆನ್ನಾಗಿಯೇ ಬಾಳುವೆ !
ನಿನ್ನ ದಾರಿ ನಿನಗೆ, ನನ್ನ ದಾರಿ ನನಗೆ !
ನಿನಗಾಗಿ ಇನ್ನು ಮುಂದೆ
ಒಂದು ತೊಟ್ಟು ಕಣ್ಣೀರು ವ್ಯರ್ಥಮಾಡಲಾರೆ !
ನಿನಗಿದೋ ಕೊನೆಯ ವಿದಾಯ !!
ಪ್ರೊ. ಸಿದ್ದು ಸಾವಳಸಂಗ