ಕಾವ್ಯ ಸಂಗಾತಿ
ವಸಂತ್. ಕೆ. ಹೆಚ್.
“ಮರದ ಅಳಲು”
ಬೀರು ಬೇಸಿಗೆಯಲ್ಲಿ,
ಹೆಮ್ಮರವೊಂದು ಕಣ್ಣೀರಿ
ಡುತಿದೆ ಬಟ್ಟ ಬಯಲಿನಲಿ
ನಿಂತು, ತನ್ನ ಸಂತತಿಯ ನೆನೆದು||
ಮೋಡ ಕಣ್ಣೀರಿಡಲು’,
ಕಾತರದಿ ಕಾದಿದೆ
ಭೂರಮೆಯೆಡೆಗೆ,
ಖಗ ಮಿಗಗಳು
ಬದುಕುಳಿಯಲು
ಮರ ಮರವ,
ಹುಡುಕುತಿವೆ
ಜಲ ನೆರಳಿಲ್ಲದೆ||
ಜಳ ಝಳಪಿಸಿದೆ,
ಭೂ ಕಾವೇರಿದೆ
ಮರವೊಂದು ನೆರಳಾಯ್ತು,
ಹಣ್ಣು ಹಂಪಲು ,
ಸೀಗಾಳಿಯ ಬೀಸಾಯ್ತು,ಆದರೆ
ನರನು ಮರವ ಮದಿಸಿದನು||
ನಾಗರೀಕತೆಯ ಅಮಲಿನಲಿ,
ನಗರ ಪಟ್ಟಣ
ಸೃಷ್ಟಿಸಿ, ಪ್ರಕೃತಿಯೆದೆಗೆ
ಅನಾಗರೀಕನಂತೆ,
ಪೆಟ್ಟು ಕೊಟ್ಟನು
ಮಚ್ಚು ಕೊಡಲಿಯಿಂದ,
ಕೊಚ್ಚಿ ಹೋಯ್ತು
ಹಚ್ಚ ಹಸಿರು,ಆದರೆ
ಮನುಜನಿಗೆಲ್ಲಿ
ಸ್ವಚ್ಛ ಉಸಿರು…?||
ವಸಂತ್. ಕೆ. ಹೆಚ್.