ಕಾವ್ಯ ಸಂಗಾತಿ
ನಾಗರಾಜ ಜಿ. ಎನ್. ಬಾಡ
ಮಾಯೆ
ಮನಸು ಮನಸು ಬೆರೆತಾಗ
ಕನಸುಗಳು ನನಸಾದಾಗ
ದಿನವೆಲ್ಲ ಕ್ಷಣದಂತೆ ಕಳೆಯುವುದು
ಸುಡುವ ಸೂರ್ಯನ ಕಿರಣವು ಬೆಳದಿಂಗಳಂತೆ ಎನಿಸುವುದು
ಬದುಕು ಸಂಭ್ರಮದಿ ಸಾಗುವುದು ಮಲ್ಲಿಗೆಯ ಕಂಪು ಮನದಿ
ಸುಳಿದಾಡುವುದು
ಖುಷಿಯ ಹೊಂಗಿರಣ ಎಲ್ಲೆಲ್ಲೂ ತೋರುವುದು
ಬದುಕೊಂದು ಜಾತ್ರೆಯಂತೆ ಕಳೆದು ಹೋಗುವುದು
ದಿನ ದಿನವು ವಸಂತ ಕಾಲದಂತೆ
ಕೋಗಿಲೆಯ ಗಾನ ಕಿವಿಯ
ತುಂಬುವುದು
ಕೇಳುವ ಮಾತೆಲ್ಲ ಇಂಪಾದ ಹಾಡಂತೆ ಮನವ ಪುಳಕಿತಗೊಳಿಸುವುದು
ಮನಸ್ಸಿನ ಮಾಯೆಗೆ ಜಗ ಹೂವಿನ ತೋಟದಂತೆ ತೋರುವುದು
ತಂಪಾದ ತಂಗಾಳಿ ಎಲ್ಲೆಲ್ಲೂ ಬೀಸುವುದು
ಮನದಿ ಖುಷಿಯ ಚಿಲುಮೆ ಚಿಮ್ಮುವುದು
ಜಗದ ತುಂಬೆಲ್ಲ ಕಾಂತಿ ಹೊಮ್ಮುವುದು
ಕಾಮನ ಬಿಲ್ಲು ಎಲ್ಲೆಲ್ಲೂ ತೋರುವುದು
ನಾಗರಾಜ ಜಿ. ಎನ್. ಬಾಡ
ಬದುಕು ಒಂದು ಸುಂದರ ಸಂಭ್ರಮ. ಅದು ಎಲ್ಲರ ಅನುಭವದ ಪರಿ.ದಿನದ ಆರಾಧನೆಯೂ ಬದುಕೇ. ಅಂದುಕೊಂಡಂತೆ ಸಾಗಿದರೆ ಅದು ಸಂತಸವಾಗಿ ಕಳೆದು ಹೋಗುವುದು.ವಸಂತದ ಚಿಗುರಲಿ ಕೋಗಿಲೆ ಹಾಡಲಿ ಮಾತು ಇಂಪಾಗುವುದು. ಮನ ತಂಪಾಗುವುದು. ಕಾಣುವ ಜಗ ಸುಂದರವಾಗುವುದು.ನೋಡುವ ನೋಟ ಆಪ್ತವಾಗಬಲ್ಲದು. ಒಂದು ಸಾರ್ಥಕತೆಯ ಅನುಭೂತಿಯಾಗಿ ಖುಷಿಯಾಗಿ ಉಳಿಯಬಲ್ಲದು. ಬದುಕೆಂದರೆ ಎಲ್ಲವೂ ಹೌದು ಎನ್ನುವ ಸಾಲುಗಳು ಈ ಕವನದ ವಿಶಿಷ್ಟತೆ.
ನಾಗರಾಜ ಬಿ.ನಾಯ್ಕ
ಹುಬ್ಬಣಗೇರಿ.
ಕುಮಟಾ.