ಅನುರಾಧಾ ರಾಜೀವ್ ಸುರತ್ಕಲ್-ಗಜಲ್

ಕಂಗಳಲಿ ಅಶ್ರುಧಾರೆಯ ಸುರಿಸುತ
ನೊಂದಿಹಳು ಹೆಣ್ಣು
ಸಂಗವದು ಬೇಡವನುತ ದೂರವಾಗಿ
ಬೆಂದಿಹಳು ಹೆಣ್ಣು

ವಿಲಕ್ಷಣ ಭಾವನೆಗಳು ಮೊಗದಲಿ
ಕಾರಣವ ಹೇಳಬಾರದೇ
ಬಲವಂತ ಮಾಘಸ್ನಾನಕೆ ನಿರ್ಲಕ್ಷ್ಯದಿ
ನಿಂದಿಹಳು ಹೆಣ್ಣು

ಒಂದೇ ನಾಣ್ಯದ ಎರಡು ಮುಖದಂತೆ
ಭಾಸವಾಗುತಿದೆ
ಕಂದಿರುವ ನಗುವಿನಲಿ ಕೃತಕತೆಯನು
ತಂದಿಹಳು ಹೆಣ್ಣು

ನಿಶ್ಚಲ ನೋಟದಲಿ ಸಂಘರ್ಷಗಳ
ತಾಕಲಾಟ ಕಾಣುತಿದೆ
ಗೀಚಿರುವ ಕಲಾವಿದನ ಕುಂಚದಿಂದ
ಬಂದಿಹಳು ಹೆಣ್ಣು

ಹೃದಯದ ನೋವುಗಳ ಅನಾವರಣ
ಸಹಿಸಳು ರಾಧೆ
ವೇದನೆಯ ಆವಾಹನೆ ಮಾಡಿಕೊಂಡು
ಸಂದಿಹಳು ಹೆಣ್ಣು


Leave a Reply

Back To Top