ಡಾ.ಬಸಮ್ಮ ಗಂಗನಳ್ಳಿ ಕವಿತೆ “ಪುಟ್ಟ ತತ್ತಿಯ ಕನಸು”

Four eggs of paradise flycatcher

ಪುಟ್ಟ ತತ್ತಿಯೊಂದು
ಕನಸು ಕಾಣುತಿತ್ತು
ಬಂಧನದ ಗೂಡಿಂದ
ಹೊರಗೆ ಬಂದು
ಗರಿಯು ಮೂಡಿ
ಮೋಡದಾಚೆಗೆ
ಸ್ವಚ್ಛಂದ ಹಾರಾಟವು..

ಆಹಾ ಏನು! ಸೊಗಸು
ಎಂಥ !ಸುಂದರ ಈ ಸೃಷ್ಟಿ
ರೆಕ್ಕೆ ಅಗಲವಾಗಿಸಿ
ಹಿಗ್ಗಿ ತಾ ನಲಿಯುತಾ
ಆಗಸವೆಲ್ಲ ನನ್ನದು
ಭೂರಮೆಯ ಸಿರಿಗೆ
ನಾನೇ ಒಡತಿ..

ನನ್ನ ಅಂದಕೆ ಯಾರಿಲ್ಲ
ಸರಿಸಾಟಿ, ಜೋಡಿಯೂ
ಇಂಪು ದನಿಗೆ ಹೋಲಿಕೆ
ಇಲ್ಲ ಮತ್ತೆಲ್ಲಿಯೂ
ನನ್ನ ಅಮ್ಮನಿಗಿಂತ
ಒಂದು ಹೆಜ್ಜೆ ಮುಂದೆ
ಅಪ್ಪನಿಗಿಂತ ಧೈರ್ಯವು..

ಚತುರಳು ನಾ ಬಲು
ಹುಳಹುಪ್ಪಟೆ ಬೇಟೆಯಲಿ
ಸುಂದರ ಮನೆಯ ಕಟ್ಟಿ
ಕಾಳು ತಂದು ಒಟ್ಟಿ
ಸಖನೊಡನೆಯ
ಸುಖದ ಸುಪ್ಪತ್ತಿಗೆಯಲಿ
ಹೊತ್ತೆ ನಾನು ತತ್ತಿ ಗರ್ಭದಿ..

ಬದುಕು ಸವಿಜೇನು
ಉದರದಿ ಜನಿಸಿದ
ಮುದ್ದು ತತ್ತಿಗಳು
ಸಾಕಿ ಸಲಹುವ
ಹೊಣೆಯು ಕೊರಳಿಗೆ
ಬೆಳೆಸುವಾಗ ಪೊರೆಯೊಡೆದ
ಮರಿಗಳು ಬಾಯ್ದೆರೆದು..

ಸರತಿಯಂತೆ ತುತ್ತು ನೀಡಿ
ಸಾಕಿ ಬೆಳೆಸುತಿರಲೊಂದು
ದಿನ, ಮರದ ಮೇಲಿನ ಮನೆ
ನಡುಗಿತು,ಹೌಹಾರಿದೆ
ಏನೋ ದೊಡ್ಡ ಸದ್ದು
ಝಲ್ಲೆಂದಿತು ನನ್ನೆದೆ
ಕಂದಮ್ಮಗಳು ಬೆಚ್ಚಿದವು..

ಗಟ್ಟಿಯಾಗಿ ತಬ್ಬಿಕೊಂಡೆ
ಸಖನು ಅನ್ನವ ಹುಡುಕುತ
ಬಲುದೂರ ಹೋದನು
ಕೂಗಿದರೂ ಕೇಳಲಿಲ್ಲ
ನೆರೆಯವರು ಬಂದು
ರಂಪಾಟ ಮಾಡಿದರೂ
ಬಿಡಲಿಲ್ಲ ಸ್ವಾರ್ಥಿ ಮಾನವ..

ಗರಗಸದಿ ಕೊಯ್ದನು ಮರವ
ನಮ್ಮ ಕುಲಕೆ ಕೊಡಲಿಯು
ಬೇಕಿತ್ತೇ ಮನುಜ ನಿನಗೆ ?
ಸರಳ ಜೀವನಕೆ ಈ ಹಿಂಸೆ?
ಕೇಳಿದೆ ಜೋರಾಗಿ ಕಿರುಚಿ
ಆವೇಶಕೆ ತತ್ತಿಯ ಪೊರೆ
ಹರಿಯಿತು ಹೊರಬಂದೆ..

ಅಬ್ಬಾ! ಎಂಥ ಕನಸಿದು
ಇದು ನಿಜವೇ? ಎಂದೆ
ಒಂದು ಕ್ಷಣದ ಯೋಚನೆ
ಈ ಹೊರ ಜಗತ್ತು ಹೀಗಿದೆಯಾ?
ಒಳಗೇ ನಾ ಸುರಕ್ಷಿತಳಿದ್ದೆ
ಅಲ್ಲಿಯೂ ಇರಲಾಗದು
ಹೋರಾಟವೇ ಬದುಕು..

Leave a Reply

Back To Top