ಲತಾ ಧರಣೇಶ್ ಕವಿತೆ-ದತ್ತಪದ :”ಇರಬೇಕು ಇರುವಂತೆ”

ಇರಬೇಕು ಇರುವಂತೆ ಸ್ನೇಹ ಪ್ರೀತಿಯ ಹೆಗಲ ಕೂಡಿ
ಇಳೆಯ ಒಡಲಲಿ ಕಲ್ಲು ಕಣ ಕಣ ಮಣ್ಣಿನೊಳಗೆ//
ಇರುವುದು ಇರುವಂತೆ ಇರಲಿ ಬಿಡು ನಮ್ಮೊಳಗೆ
ಇಲ್ಲೇ,,, ಹುಟ್ಟುವ ಬೀಜ ಪ್ರೀತಿ ಮೊಳಕೆಯೊಳಗೆ//

ಬಲು ಪ್ರೀತಿ ನಿಜವೇ ಬಯಸಿದ ಬದುಕಲಿ
ಆಸೆ ದುರಾಸೆ ಯಾತನೆಯೆ ನಾಕ ನರಕದೊಳಗೆ//
ಮಾನವೀಯ ಸಂಬಂಧ ಆನಂದ ಅಳಿದು ಹೋಗಿದೆಯೆ
ಆಸೆ ಕಟ್ಟಿದ ಬದುಕು ಸಾವಿನ ದವಡೆಯೊಳಗೆ //

ಯುದ್ಧ ಹೂಡಿ ದೇಹ ಗೆದ್ದಿದೆಯೇ ಮನುಜ
ಎಲ್ಲೋ ಹುಟ್ಟಿ ಎಲ್ಲೋ ಹರಿವ ನದಿ ಕಡಲೊಳಗೆ//
ಸಾಕು ಮಾಡು ನಿನ್ನ ನಡೆ ಆತಂಕ ತಂದಿದೆ
ತಾಳಿನಿಂತ ಇಳೆಯಲಿ ಜೀವ ಸಂಕುಲ ದುಗುಡದೊಳಗೆ //

ಭಯಭೀತಿ ನೋವು ದುಃಖಗಳ ಪರಿವೇ ಇಲ್ಲದೆ
ಬಾನ ಕೆಳಗಿನ ಯುದ್ಧದಾಟಕೆ ಮಳೆಯು ಮೌನದೊಳಗೆ//
ಹಸಿರು ಉಸಿರಿಲ್ಲದ ಗಾಳಿ ಕಾರ್ಮೋಡಗಳ ಹೊಗೆಯಲಿ
ತಿರುಗುವ ಧರೆಯು ತಿರುಗುತಿದೆ ಅತಿ ವೇಗದೊಳಗೆ //


Leave a Reply

Back To Top