“ನೆನಪುಗಳೆ ಹಾಗೆ” ಕಿರಣ ಗಣಾಚಾರಿಯವರ ಕವಿತೆ

ನೆನಪುಗಳೆ ಹಾಗೆ!
ಬಿರುಬಿಸಿನಲ್ಲಿ ಹಾಯ್ ಎನ್ನಿಸಿ
ತಂಗಾಳಿ ಸೂಸಿ ಸೆಳೆದಂತೆ
ಚಳಿಯ ಮುಂಜಾವಿನಲಿ
ಬಿಸಿ ಕಿರಣಗಳಿಗೆ ಮೈ ಒಡ್ಡಿದಂತೆ

ನೆನಪುಗಳೆ ಹಾಗೆ!
ಯಾರೂ ಬರದಿದ್ದರೂ
ಬಿಕ್ಕಳಿಕೆಯ ಬಿಕ್ಕಾಗಿ ಕಾಡಿದಂತೆ
ಗಾಢ ನಿದ್ರೆಯೊಳಗೂ
ತುಟಿ ಬಿರಿದು ನಗುವ ಕನಸುಗಳಂತೆ

ನೆನಪುಗಳೆ ಹಾಗೆ!
ನಿಂತಲ್ಲಿ ಕುಂತಲ್ಲಿ ಹೆಗಲೇರಿ
ಎದ್ದಲ್ಲಿ ಬಿದ್ದಲ್ಲಿ ಬಳಿಸಾರಿ
ನಡೆದಾರಿಯೊಳಗೂ ಹೂ ಸುರಿದು
ಹೆಜ್ಜೆಗಳು ಮೆಲ್ಲ ನಗೆ ಬೀರಿದಂತೆ

ನೆನಪುಗಳೇ ಹಾಗೆ!
ದು:ಖವನು ಉಮ್ಮಳಿಸಿ
ಉಲ್ಲಾಸವ ಉಕ್ಕಿಸಿ
ಭಾವನೆಗಳ ಅಲಮಾರುವಿನಿಂದ
ಅನುಭವಗಳ ಪುಟ ತೆರೆದಂತೆ

ನೆನಪುಗಳೆ ಹಾಗೆ!
ಕಣ್ಣೆವೆ ಮುಚ್ಚಿ ತೆರೆದು
ಹೃದಯ ವೀಣೆಯು ಮಿಡಿದು
ಉನ್ಮಾದದ ಉತ್ತುಂಗದಲಿ ಅಲೆಸಿ
ಸಮ್ಮೋಹಿತ ಆನಂದದಲಿ ತೇಲಿಸಿದಂತೆ


5 thoughts on ““ನೆನಪುಗಳೆ ಹಾಗೆ” ಕಿರಣ ಗಣಾಚಾರಿಯವರ ಕವಿತೆ

  1. ಈ ನೆನಪುಗಳೇ ಹಾಗೆ ಹಳೆಯ ಬಟ್ಟೆಗಳನ್ನ ಆಯ್ದು ಸುಂದರ ಕವದಿಯಂತೆ…. ಒಮ್ಮೊಮ್ಮೆ ಹಾಸಿಗೆ… ಒಮ್ಮೆಮ್ಮೆ ಹೊದಿಕೆ… ಒಮ್ಮೆಮ್ಮೆ ಮನೆಮಂದಿಯಲ್ಲರ ಪ್ರತಿನಿಧಿ…. ಒಮ್ಮೊಮ್ಮೆ ದಿಂಬು….. ನೆನಪು ಇಲ್ಲದಿದ್ದರೆ ಜೇವನದಲ್ಲಿ ಹೊಳಪು ಕಡಿಮೆ ಆಗತಿತ್ತು ಅನಸುತ್ತೆ….

  2. ಮಳೆ ಬಂದು ನಿಂತಾಗ
    ನನ್ನೆದೆಯು ತೊಯ್ದಾಗ
    ತಂಗಾಳಿ ಬೀಸಿ ಬಂತು
    ಮುಚ್ಚಿ ಮಲಗಿದ್ದ ಭಾವನೆ
    ಗರಿಗೆದರಿ ನಿಂತು
    ನಿನ್ನಯ ನೆನಪನು ಹೊತ್ತು ತಂತು!

    ಮೈ ನಡುಕವಿದ್ದರೂ
    ಮನ ಮಾತ್ರ ಬೆಚ್ಚಗಿತ್ತು
    ಅದರುತಿದ್ದರು ಅಧರ
    ತಿಳಿನಗೆಯ ಬೀರಿತ್ತು!
    ಮೊದಲ ಸ್ಪರ್ಶದ ಆ ನೆನಪು
    ಮನದಲಿ ಪುಳಕ ತಂತು
    ರಂಗೇರಿದ ಸಂಜೆಯಲಿ
    ಕಣ್ಣಿಗೆ ಮಂಜು ಕವಿದಿತ್ತು
    ಮೈತನ್ನ ಇರುವನ್ನೆ ಮರೆತಿತ್ತು
    ಕಿವಿಯಲಿ ನಿನ್ನದೇ ದನಿಯ ಗುಂಜನವಿತ್ತುತಂಗಾಳಿ ನಿನ್ನಯ ನೆನಪನು
    ಹೊತ್ತು ತಂತು
    ನನ್ನಲಿ ಹೊಸ ಹುರುಪು
    ಉಕ್ಕಿ ಬಂತು !!

Leave a Reply

Back To Top