ಅನುರಾಧಾ ರಾಜೀವ್ ಸುರತ್ಕಲ್-ಗಜಲ್

ಎದೆಯ ಭಾಷೆಗೆ ಬಲವ ನೀಡಲು
ಕವಿತೆ ರೂಪದಿ ಬಂದೆಯಾ
ಮಧುರ ಭಾವಕೆ ಸ್ವರವ ಸೇರಿಸಿ
ಹೊಸತು ರಾಗವ ತಂದೆಯಾ

ಉದಯ ಕಾಲದಿ ಮೂಡಿದ ನೇಸರ
ಬಾನಲಿ ಹೊಂಬಣ್ಣ ಚೆಲ್ಲಿದನೇ
‌ಸುಧೆಯ ನೀರಂತೆ ಒಲವ ಧಾರೆಯ
ಸುರಿಸಿ ಸನಿಹ ನಿಂದೆಯಾ

ಮುದದಿ ಕೂಗಿದೆ ಕಣ್ಣ ನೋಟದಿ
ತಿಳಿಸಿ ಹೃದಯದ ಬಯಕೆಯ
ಹದವು ತಪ್ಪಲು ಕರವ ಹಿಡಿದು
ಮೌನದಿ ಕೊರಗಿ ನೊಂದೆಯಾ

ಪದವ ಜೋಡಿಸಿ ಮಾಲೆಯ ಮಾಡಿದೆ
ಸಾಹಿತ್ಯ ಮಣಿಯ ಮುತ್ತಾಗಿ
ನಿದಿರೆ ಬಾರದೆ ಹೊರಳಿ ನರಳಿದೆ
ವಿರಹ ಭಾರದಿ ಬೆಂದೆಯಾ

ಹದಿ ಹರೆಯದ ಕನಸು ಬಣ್ಢದ
ಚಿತ್ತಾರ ಬಿಡಿಸಿ ಅಲಂಕರಿಸಿದಂತೆ
ಕದವ ತೆರೆದು ರಾಧೆಯು ಕರೆಯಲು
ಮಿಲನ ಸುಖದಿ ಮಿಂದೆಯಾ


Leave a Reply

Back To Top