ಅನ್ನಪೂರ್ಣ ಸಕ್ರೋಜಿ ಪುಣೆ ಕವಿತೆ-ಪುಟ್ಟ ತತ್ತಿಯ ಕನಸು

ನಾನು ಇರುವೆಯ ತತ್ತಿ ಅಮ್ಮನ
ಗರ್ಭಗೃಹದಲಿ ಅಡಗಿರುವೆ
ಜೀವವೆಂದ ಮೇಲೆ ಕನಸು ಸಹಜ
ತಾಯಿಜೀವ ಅರಸುತಿದೆ
ಮಧುರ ಸಿಹಿಯ ಕಣಜ

ಕಾಯಕವೇ ಕೈಲಾಸವೆನುತ ಸತತ
ಉದ್ಯೋಗಿ ನಮ್ಮ ಜನಾಂಗ
ಶಿಸ್ತಿನ ಸಿಪಾಹಿ ಸೈನಿಕರಂತೆ
ಸಾಲು ಸಾಲಾಗಿ ಹೊರಡುವರು
ಒಬ್ಬರಿಗೊಬ್ಬರು ಮುತ್ತನಿಕ್ಕುತ

ನಾವು ಜಗದ ಮಣ್ಣಿನ ಕಣಕಣದಲಿ
ಇರುವೆವು ಗಿಡಮರಗಳೂ ಸರಿ
ಮನೆ ಮಂದಿರಗಳೂ ಸರಿ
ನಮ್ಮ ನಡಿಗೆ ನಿಧಾನವಾದರೂ
ಗುರಿ ಮುಟ್ಟಿ ಸೇರುವವರು

ಸಿಹಿ ತಿನ್ನುವ ಶ್ರೀಮಂತರು ನಾವು
ಸಕ್ಕರೆ ರೋಗ ಬರುವದೇ ಇಲ್ಲ
ನಮ್ಮಲ್ಲಿ ಜಗಳಗಳೇ ಇಲ್ಲ
ನಾರಿ ಶಕ್ತಿ ಮಹಿಳಾ ಪ್ರಮುಖರು
ಹೆಣ್ಣಾಗಿ ಬರುವ ಕನಸು ನನ್ನದು


Leave a Reply

Back To Top