“ಹರಿವ ನದಿಗೆ ಮೌನವೇ ಮಗ್ಗಲು”ನಾಗರಾಜ್ ಹರಪನಹಳ್ಳಿ ಯವರ ಕವಿತೆ

ನೀನು ಹೋದ ಮೇಲೆ
ವಿರಹವನ್ನೇ ಹೊದ್ದು ಅಲೆಯುತ್ತಿದ್ದೆನೆ ;
ಸಂತೈಸುತ್ತಲೇ ಇದೆ
ಕಡಲ ದಂಡೆಯ ಅಲೆ :
ಬಹುಶಃ ನಿನ್ನದೂ
ಇದೇ ಸ್ಥಿತಿ ಇರಬೇಕು

ಇರುಳ ಸೆರಗು ಸರಿಯಿತು
ಬೆಳಕಿನ ಮುಸುಕು
ಆವರಿಸಿತು
ಮುಗಿಲಿಗಿ ಮುಖಮಾಡಿ ನಿಂತೆ ; ಮರದ ಸೆರಗಿಗೆ ಅಂಟಿದ ಹೂ ಕಿಸಕ್ಕನೆ ನಕ್ಕಿತು
ಗಾಳಿಯು ಮಧುರತೆ ಹೊತ್ತು
ಹಾದು ಹೊಯಿತು

ವಿರಹ ಹೊದ್ದು ಮಲಗಿದ್ದಾಳೆ ಆಕೆ
ನಿರಂತರದಾಹಿ
ಹರಿವ ನದಿಗೆ
ಮೌನವೇ ಮಗ್ಗಲು
ಭೂಮಿತಾಯಿ ಕೊಟ್ಟು ಮಾತ್ರ ಗೊತ್ತು ;
ಪಡೆದದ್ದು ನೆನಪಿಲ್ಲ

ನಿನ್ನ ಬಿಸಿಉಸಿರು, ಕಣ್ಣೀರಿನ ಹನಿಗೆ
ಎದೆಭಾಗದ ಅಂಗಿ ಒದ್ದೆಯಾದದ್ದು ಇನ್ನು ಹಾಗೆ ಇದೆ
ಬಾನು ಸುರಿಸಿದ ಮಳೆಗೆ ಹಸಿಯಾದ
ಭೂಮಿತಾಯಿಯ ಸೆರಗು ಸಾಂತ್ವಾನ ಹೇಳಿದೆ

ನೀನಿಲ್ಲದ
ಕ್ಷಣ
ಮಳೆಗೂ
ಅರ್ಥವಿಲ್ಲ
ಬೆಳಕಿಗೂ
ಕೂಡಾ….

ಆಕೆಯ ಮಾತಲ್ಲಿ
ಆದಮ್ಯ ಚೇತನ
ಹಾಗಾಗಿ ಹಾರುವ ಚಿಟ್ಟೆ
ನಗುವ ಹೂವಿಗೂ
ಅರ್ಥ ಬಂದಿದೆ
ಬೆಳಕು ಕತ್ತಲಿಗೂ
ಸೊಗಸು ದಕ್ಕಿದೆ


Leave a Reply

Back To Top