ಕಾವ್ಯ ಸಂಗಾತಿ
ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ
“ನಿತ್ಯ ಸಾಯುವ ಮಹಾತ್ಮ”
ನಿಮ್ಮ ಬೋಳಾದ ತಲೆಯೇ ಗೋಳ
ತಲೆಬಾಗಿ ನಕ್ಕಾಗ ಕಾಣುವುದೆ ಭಾರತ
ಎಡಗಣ್ಣೇ ಪಾಕಿಸ್ತಾನ ಬಲಗಣ್ಣೇ ಬಾಂಗ್ಲಾದೇಶ
ಮೂಗು ಬಾಯಿಯ ವರೆಗೂ ಭಾರತ
ನಿಮ್ಮ ಉಸಿರ ಸುಂಟರಗಾಳಿಗೆ
ಬಂಗಾಳಕೊಲ್ಲಿ ಅರಬ್ಬೀ ಸಮುದ್ರಗಳ ಅಲೆಗಳೆದ್ದು
ನಿಮ್ಮ ಹೋರಾಟದ ಕ್ರಾಂತಿಗೆ
ಐರೋಪ್ಯದಲ್ಲಿ ಜಡಿ ಮಳೆಯ ಪ್ರವಾಹ
ಓ ಮಹಾತ್ಮ ….
ನಿಮ್ಮೊಡಲ ರಕ್ತದಲ್ಲಿ
ಹಿಂದು ಮುಸ್ಲಿಮ್ ಬಾಯಿ…. ಬಾಯಿ……
ಮಿಡಿಯುತಿತ್ತು!!
ನಿಮ್ಮವರೆ ನಿಮಗೆ ಕಹಿ ಕಹಿಯ ಮುನಿಸು
ಕಿಡಿ ಮಿಡಿಯ ಮಾತು
ಓ ಬಾಪು…..
ನಿನ್ನೊಡಲ ಹುಣ್ಣಿಗೆ ಮುಲಾಮು ಹುಡುಕದಾದಿರಿ!?
ಉಪವಾಸ ಸತ್ಯಾಗ್ರಹವನು ವೇದಿಕೆ ಮಾಡಿ
ಅಹಿಂಸೆಯ ಆಯುಧ ಹಿಡಿದು
ಹಳ್ಳಿ ಹಳ್ಳಿಗೂ ಫಕೀರನಂತೆ ನಡೆದಿರಿ
ದೋತಿಯಲ್ಲಿ ಸರಳತೆಯ ಮೆರಿದಿರಿ
ಮಹಾತ್ಮಾ ನಿಮ್ಮನ್ನು ಅರಿಯುವ ಮುನ್ನ
ಈ ಭಾರತ ಕಳೆದುಕೊಂಡಿತು ನಿಮ್ಮನು
ಭವಿಷ್ಯದ ಭಾರತದ ಕನಸನು ಕಂಡ ಎದೆಗೆ
ಧರ್ಮಾಂಧರ ಗುಂಡಿನ ಕಿಡಿಗೆ ತುತ್ತಾದಿರಿ
ಇಷ್ಟಕ್ಕೆ ಕೊನೆಯಾಯಿತೆ ನಿಮ್ಮ ಸಾವು
ಈ ಧರ್ಮಾಂಧ ಜಾತಿವಾದಿಗಳು ನಡೆಸುವ
ನಿತ್ಯ ಹೋಮಕ್ಕೆ ಹವಿಸ್ಸಾದಿರಿ ಅಷ್ಟೆ
ನಿಮ್ಮನರಿಯದೆ ಈ ಭಾರತ ಮಾತೆ ಅನಾಥಳು ನಿರಂತರ……
— ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ