ಲಹರಿ

ಹೆತ್ತಮ್ಮನಲ್ಲದ ಅಮ್ಮ

ಸಂಧ್ಯಾ ಶೆಣೈ

[5:25 pm, 10/05/2020] SANDHYA. SHENOY: ನಮ್ಮ ಮಟ್ಟಿಗೆ ಪ್ರತಿಯೊಂದು ದಿನವೂ ತಾಯಂದಿರ ದಿನವೇ. ಆದರೂ ಕೆಲವೊಂದು ದಿನಗಳ ಹೆಸರನ್ನು ಕೇಳುವಾಗ ಮೈ ಪುಳಕಗೊಂಡು ನಮಗೆ ತಾಯಿಯಂತಹ ಪ್ರೀತಿಯನ್ನು ಕೊಟ್ಟವರ ನೆನಪೆಲ್ಲವೂ ಆಗುತ್ತದೆ .ಹಾಗಾಗಿ ಈ ದಿನವನ್ನು ನಾನು ಹೆತ್ತಮ್ಮ ನಲ್ಲದಿದ್ದರೂ ಅಮ್ಮನಂತೆ ಪ್ರೀತಿಸುವ ನಮ್ಮೆಲ್ಲ ಅಮ್ಮಂದಿರ ದಿನ ಎಂದೇ ಕರೆಯಲು ಬಯಸುತ್ತೇನೆ. ಹಾಗೂ ಇವತ್ತಿನ ಈ ನನ್ನ ಲೇಖನವನ್ನು ನಮ್ಮ ಪ್ರೀತಿಯ ಸೋದರತ್ತೆಯ ತಾರಮಕ್ಕಳಿಗೆ ಅರ್ಪಿಸುತ್ತೇನೆ.

ಈಗ ಅವಳು ಹೇಳಬಹುದು “ಆ ಹುಚ್ಚಿ ನನ್ನ ಬಗ್ಗೆ ಏನು ಬರೀತಾಳಾ..” ಎಂದು .
ನಾವು ಚಿಕ್ಕವರಿರುವಾಗ ನಮಗೆ ರಜೆ ಬಂದ ಕೂಡಲೇ ನಾವು ಪೆಠಾರಿ ಕಟ್ಟುವುದು ಒಂದೇ ತೀರ್ಥಹಳ್ಳಿಯ ಚಿಕ್ಕಪ್ಪನ ಮನೆಗೆ ..ಇಲ್ಲವೇ ಉಡುಪಿಯ ನಮ್ಮ ಸೋದರತ್ತೆ ತಾರಮಕ್ಕನ ಮನೆಗೆ .ಎರಡೂ ಕಡೆ ನಮ್ಮ ಸಮವಯಸ್ಕರು ಇದ್ದರು ಮಾತ್ರವಲ್ಲ ನಮ್ಮನ್ನು ತಮ್ಮ ಮಕ್ಕಳಂತೆ ಪ್ರೀತಿಸುವ ಅಮ್ಮಂದಿರು ಇದ್ದರು .ಚಿಕ್ಕಮ್ಮನ ವಿಷಯ ಇನ್ನೊಮ್ಮೆ ಬರೆಯುತ್ತೇನೆ .

ನಾನು ಬಹಳ ಚಿಕ್ಕವಳಿರುವಾಗ ಅಮ್ಮನೊಡನೆ ಉಡುಪಿಗೆ ಹೋಗುತ್ತಿದ್ದೆ. ಆಗ ಬ್ರೆಡ್ ಗೆ ಮನೆಯಲ್ಲಿ ಕಡೆದ ಬೆಣ್ಣೆಯನ್ನು ದಪ್ಪಗೆ ಹಚ್ಚಿ ಅದರ ಮೇಲೆ ಸಕ್ಕರೆ ಹಾಕಿ ತಿಂದಿದ್ದು ಅದೇ ಅಲ್ಲಿಯೇ ಮೊದಲು .ನನಗಂತೂ ಆ ದಿನದ ಆ ಬ್ರೆಡ್ ಮತ್ತು ಬೆಣ್ಣೆ ಸಕ್ಕರೆಯ ರುಚಿ ಇಂದಿಗೂ ನಾಲಿಗೆ ತುದಿಯಲ್ಲಿಯೇ ಇದೆ. ಅಷ್ಟೊಂದು ರುಚಿಕರವಾಗಿ ಇದ್ದಂತಹ ಆ ಬ್ರೆಡ್ ಮತ್ತು ಬೆಣ್ಣೆಯ ಖುಷಿಯನ್ನು ತೋರಿಸಿದವರು ನಮಗೆ ತಾರಮಕ್ಕ. ಆ ಮನೆಯ ಕಾಂಪೌಂಡಿನಲ್ಲಿರುವ ಮಂದಾರ.. ಕರವೀರ.. ಕರಿಬೇವಿನ ಮರ ಇವುಗಳ ನಡುವೆ ಆಡಿದ್ದು ನನಗಿನ್ನೂ ನೆನಪಿದೆ .ಅಕ್ಕಪಕ್ಕದ ಮನೆಯವರೂ ನೆನಪಿದ್ದಾರೆ.

ಹಾಗೆ ಸ್ವಲ್ಪ ಸಮಯದಲ್ಲಿ ಅವರು ವಳಕಾಡಿನ ಮನೆಗೆ ಶಿಫ್ಟ್ ಮಾಡಿದರು. ಮನೆ ತುಂಬಾ ದೊಡ್ಡದಿತ್ತು. ಆದರೆ ಬೇಸಿಗೆಯಲ್ಲಿ ನೀರಿಗೆ ಬಹಳ ಅಭಾವವಿತ್ತು. ನಮಗೆ ಮಕ್ಕಳಿಗೆ ಎಲ್ಲಿ ತಿಳಿಯುತ್ತದೆ ಅವರ ಕಷ್ಟ .ರಜೆ ಅಂದ ಕೂಡಲೇ ಅವರ ಮನೆಗೆ ಹೊರಡುತ್ತಿದ್ದೆ. ಉಡುಪಿಗೆ ಬಸ್ಸಿನಲ್ಲಿ ಬರುವಾಗ ಮಣಿಪಾಲದಲ್ಲಿ ಬಸ್ಸು ನಿಂತಿದ್ದಾಗ ಅಲ್ಲೇ ಇರುವ ಸಿನಿಮಾ ಬೋರ್ಡನ್ನು ನೋಡುತ್ತಿದ್ದೆ .ಯಾಕೆಂದರೆ ನನಗೆ ನೂರಕ್ಕೆ ನೂರು ಪರ್ಸೆಂಟ್ ಗೊತ್ತಿತ್ತು ತಾರಮಕ್ಕ ನನಗೆ ಒಂದಾದರೂ ಸಿನಿಮಾ ನೋಡಲು ಕಳಿಸಿಯೇ ಕಳಿಸುತ್ತಾರೆ ಎಂದು. ಹಾಗಾಗಿ ಈಗ ಯಾವ ಸಿನಿಮಾ ನಡೀತಾ ಇದೆ .ನಾನು ಯಾವುದು ನೋಡಬಹುದು ಎಂದು ಮಣಿಪಾಲದಿಂದ ಉಡುಪಿಯ ತನಕ ಲೆಕ್ಕಾಚಾರ ಹಾಕುತ್ತಲೇ ಬರುತ್ತಿದ್ದೆ. ಬಂದವಳು ಸಣ್ಣ ಹುಡುಗಿಯಾದರೂ ಯಾರೋ ವಿಐಪಿ ಬಂದಂತೆ ಪ್ರೀತಿಯಿಂದಲೇ ಸ್ವಾಗತಿಸುತ್ತಿದ್ದಳು.


ಸರಿ ಮರುದಿನದಿಂದಲೇ ನಾನು ಮನೋಹರ ನಿತಿನ ಸೇರಿ ಅಜರ್ಕಾಡಿಗೆ ಹೋಗುವುದೇನು.. ದೇವಸ್ಥಾನದ ಕೆರೆಯಲ್ಲಿ ಮಕ್ಕಳು ಈಜುವುದನ್ನು ನೋಡಲು ಹೋಗುವುದೇನು.. ದೊಡ್ಡಮ್ಮನ ಮನೆಗೆ ಹೋಗುವುದೇನು ..ಆ ಬೇಸಿಗೆರಜೆ ಸಮಯದಲ್ಲಿ ಹೆಚ್ಚಾಗಿ ಸರ್ಕಸ್ ಕೂಡ ಇರುತ್ತಿತ್ತು. ಆ ಸರ್ಕಸ್ ನೋಡಲು ನಮ್ಮ ಕೇಶವಮಾಮ ನೊಟ್ಟಿಗೆ ಹೋಗುವುದೇನು ..ಒಟ್ಟಾರೆ ಸಮಯ ಕಳೆದದ್ದೇ ಗೊತ್ತಾಗುತ್ತಿರಲಿಲ್ಲ .ನಾನು ಮೊದಲೇ ಹೇಳಿದಂತೆ ಯಾವುದಾದರೂ ಒಂದು ಕೆಲವೊಮ್ಮೆ ಎರಡೂ ಸಿನಿಮಾ ನಮಗೆ ನೋಡಲು ಖಂಡಿತವಾಗಿಯೂ ಸಾಧ್ಯವಾಗುತ್ತಿತ್ತು. ಸಿನಿಮಾ ನೋಡಿದ ಮೇಲೆ ಅಲ್ಲೇ ಪಕ್ಕದಲ್ಲಿರುವ ಡಯಾನ ಹೊಟೇಲಿನಲ್ಲಿ ನಮಗೆ ಐಸ್ಕ್ರೀಂ ತಿನ್ನಿಸುವ ಪರಿಪಾಠವಿತ್ತು. ಮನೋಹರ ಮತ್ತೆ ನಿತಿನ ಅದ್ಯಾಕೋ ಫ್ರೂಟ್ ಸಲಾಡ್ ತಿನ್ನುತ್ತಿದ್ದರು. ನನಗೆ ಫ್ರೂಟ್ ಸಲಾಡ್ ತಗೊಂಡರೆ ಐಸ್ ಕ್ರೀಂ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಬರಬಹುದು ಎಂದು ಐಸ್ಕ್ರೀಮೇ ಬೇಕೆಂದು ಹೇಳುತ್ತಿದ್ದೆ .ಆ ಗಾಜಿನ ಬೌಲ್ನಲ್ಲಿ ಇದ್ದಂತಹ ಐಸ್ಕ್ರೀಂ ಮತ್ತು ಅದಕ್ಕಾಗಿಯೇ ಇರುವ ಚಮಚದಿಂದ ಚೂರು ಚೂರೇ ತೆಗೆದು ಬಾಯಿಯಲ್ಲಿ ಹಾಕಿ ತಿನ್ನುತ್ತಾ ಅನುಭವಿಸುವ ಸ್ವರ್ಗ ಸುಖ ಬಹುಶಃ ಈಗ ಯಾವ ಐಸ್ಕ್ರೀಂ ತಿಂದರೂ ಸಿಗಲಿಕ್ಕಿಲ್ಲ .

ನಾನಾಗಲೇ ಹೇಳಿದಂತೆ ಮನೆಯ ಪಕ್ಕದ ಬಾವಿಯಲ್ಲಿ ನೀರು ಖಾಲಿಯಾಗಿ ಸ್ವಲ್ಪ ದೂರದ ಬಾವಿಯಿಂದಲೇ ನೀರು ತರಬೇಕಿತ್ತು ಆದರೆ ಈ ನಮ್ಮ ತಾರಮಕ್ಕ ಒಂದೇ ಒಂದು ದಿನವೂ ನಮ್ಮ ಬಳಿ ತಮ್ಮ ನೀರಿನ ಕಷ್ಟವಾಗಲಿ ಅಥವಾ ನಾವು ಬಂದು ಅವರಿಗೆ ಕಷ್ಟವಾಗಿದೆ ಎಂದಾಗಲಿ ಹೇಳಿದ್ದು ಇಲ್ಲವೇ ಇಲ್ಲ..ಈಗಲೂ ಉಡುಪಿಯಲ್ಲಿ ಮೇ ತಿಂಗಳಲ್ಲಿ ಬಹಳ ನೀರಿನ ಅಭಾವವಿರುತ್ತದೆ ಹಾಗಾಗಿ ನನ್ನ ಪರಿಚಿತರು ಯಾರಾದರೂ ಉಡುಪಿಗೆ ಬರುವುದಿದ್ದರೆ ನಾನು ಮೊದಲೇ ಹೇಳುತ್ತೇನೆ “ನೀವು ಉಡುಪಿಗೆ ಬರುವ ಪ್ಲಾನನ್ನು ಏಪ್ರಿಲ್ ಮೇ ತಿಂಗಳಲ್ಲಿ ಹಾಕಲೇಬೇಡಿ. ಯಾಕೆಂದರೆ ಇಲ್ಲಿ ಒಂದು ತುಂಬಾ ಸೆಕೆ ..ಎರಡನೆಯದು ನೀರಿನ ಅಭಾವ.. ಹಾಗಾಗಿ ಏನು ಬರುವುದಿದ್ದರೂ ಆಗಸ್ಟ್ ನಂತರ ಫೆಬ್ರವರಿ ತಿಂಗಳೊಳಗೆ ಬಂದುಬಿಡಿ” ಎಂದೇ ಹೇಳುತ್ತೇನೆ. ಯಾರಿಗೋ ಯಾಕೆ ನನ್ನ ಸ್ವಂತ ಮಗಳಿಗೆ ಕೂಡ “ನೀನು ಬರುವುದಾದರೆ ಏಪ್ರಿಲ್ ನಲ್ಲೇ ಬಾ ಮಾರಾಯತಿ.. ಮೇ ತಿಂಗಳಲ್ಲಿ ಬೇಡ ..ಮೇ ತಿಂಗಳಲ್ಲಿ ನೀನು ನಿನ್ನ ಗಂಡನ ಮನೆಯಲ್ಲೇ ಇರು” ಎನ್ನುತ್ತೇನೆ.

ಆಗೆಲ್ಲ ಒಂದೆ ಫ್ಯಾನ್ ಇದ್ದುದರಿಂದ ಎಲ್ಲರೂ ಒತ್ತೊತ್ತಾಗಿ ಅದೇ ಫ್ಯಾನ್ ನಡಿಯಲ್ಲಿ ಮಲಗುತ್ತಿದ್ದದ್ದು ನೆನಪಾದರೆ ಬಹಳ ಖುಷಿ ಅನ್ನಿಸ್ತಾ ಇದೆ .ಹಾಗೆ ಮನೆಯಲ್ಲಿ ಗ್ಯಾಸ್ ಇಲ್ಲದಿದ್ದರೂ ಈಗಿನಂತೆ ಮಿಕ್ಸಿ ಗ್ರ್ಯಾಂಡರ್ ಏನೂ ಇಲ್ಲದಿದ್ದರೂ ಕಟ್ಟಿಗೆ ಒಲೆ ..ಹಾಗೆ ಮರದ ಹುಡಿಯನ್ನು ಪ್ರತಿದಿನವೂ ತುಂಬಿಸಿ ತುಂಬಿಸಿ ಅವರೇ ಮಾಡುತ್ತಿದ್ದಂತಹ ಒಂದು ಡಬ್ಬಿ ಅಂತಹ ಒಲೆ ಯಲ್ಲಿಯೇ ಬಹಳ ರುಚಿಯಾದ ಅಡುಗೆಯನ್ನು ಮಾಡಿ ಬಹಳ ಪ್ರೀತಿಯಿಂದ ಬಡಿಸುತ್ತಿದ್ದರು . ಅಡುಗೆ ಮನೆಯನ್ನು ಕನ್ನಡಿಯಂತೆ ಶುಭ್ರಗೊಳಿಸಿ ತಾವು ಕೂಡ ಅತ್ಯಂತ ಶುಭ್ರವಾಗಿ ಯಾವಾಗಲೂ ಸ್ವಚ್ಛವಾದ ಕಾಟನ್ ಸೀರೆಯನ್ನು ಉಟ್ಟು ಶಿಸ್ತಿನಿಂದ ಇರುತ್ತಿದ್ದ ತಾರಮಕ್ಕಳನ್ನು ನೆನೆಸಿದರೆ.. ಈಗ ಮನೆಯಲ್ಲಿ ಎಲ್ಲಾ ಸೌಕರ್ಯವಿದ್ದರೂ ಕೊಳಕು ಕೊಳಕಾಗಿ ಇರುವ ಹೆಂಗಸರನ್ನು ನೋಡಿದರೆ ತಲೆ ಬಿಸಿಯಾಗುತ್ತದೆ ..


ನಾನು ಮುಂಬೈ ಶಹರವನ್ನು ಬಿಟ್ಟು ಉಡುಪಿಯಲ್ಲಿ ನನ್ನ ಗಂಡನ ಮನೆಗೆ ಬಂದು ಇದ್ದಾಗ ನನ್ನ ಯಜಮಾನರು ಸೌದಿ ಅರೇಬಿಯಾದಲ್ಲಿದ್ದು ಆಗ ಚಿಕ್ಕ ಮಗುವನ್ನು ಕರೆದುಕೊಂಡು ನಾನು ಆಗಾಗ ತಾರಮಕ್ಕಳ ಮನೆಗೆ ಒಳಕಾಡಿಗೆ ಹೋಗುತ್ತಿದ್ದೆ.. ಒಂದು ದಿನ ನಾನು ಹೋಗುವಾಗ ಗುರುವಾರ .ನಾನು ಹೋದವಳು ಹೇಳಿದೆ “ತಾರಮಕ್ಕ ..ಗುರುವಾರ ನಾನು ರಾತ್ರಿ ಊಟ ಮಾಡುವುದಿಲ್ಲ ಹಾಗಾಗಿ ಒಂದಿಷ್ಟು ಅವಲಕ್ಕಿ ಮಾಡಿ ಕೊಡ್ತೀರಾ” ಎಂದೆ.. “ಆಯ್ತಾಯ್ತು “ಎಂದು ಹೇಳಿದರು ಆಮೇಲೆ ರಾತ್ರಿ ಊಟಕ್ಕೆ ಕೂತಾಗ ನನಗೆ ಬಿಸ್ಕೂಟ್೦ಬಡೇ ಕೊಡ್ತಾ ಇದ್ದಾರೆ .ನಾನು ಹೇಳಿದೆ . “ತಾರಮಕ್ಕ ನಿನ್ನದೊಂದು ಯಾಕೆ ಬಿಸ್ಕಿಟ್೦ಬಡೇ ಮಾಡಿದ್ದು” ಎಂದಾಗ “ಇರಲಿಯಾ ..ನಾವೂ ತಿನ್ನದೇ ಬಹಳ ದಿನವಾಯಿತು “ಎಂದು ಹೇಳಿ ನಾಳೆಗೆಂದು ಮಾಡಿ ಇಟ್ಟ ಉದ್ದಿನ ಹಿಟ್ಟಿನಲ್ಲಿಯೇ ಸ್ವಲ್ಪ ಹಿಟ್ಟು ತೆಗೆದು ಬಿಸ್ಕೂಟ್೦ಬಡೆ ಮಾಡಿಕೊಟ್ಟಿದ್ದನ್ನು ನಾನು ಯಾವತ್ತೂ ಮರೆಯುವುದಿಲ್ಲ. ಅಷ್ಟು ಪ್ರೀತಿ ಅವರಿಗೆ .


ನನ್ನನ್ನು ಐದಾರು ತಿಂಗಳ ಮಗುವಿನೊಂದಿಗೆ ಒತ್ತಾಯಪೂರ್ವಕ ಅವರ ಮನೆಯಲ್ಲಿ ಆ ರಾತ್ರಿ ಉಳಿಸಿಕೊಂಡು ಮರುದಿನ ಹೊಸ ಸಾಬೂನು ತೆಗೆದು ಆ ಮಗುವಿಗೆ ಸ್ನಾನ ಮಾಡಿಸಿ ಅದಕ್ಕೆ ಕಿಟಿಕಿಯ ಹತ್ತಿರವೇ ಹಾಸಿಗೆಯನ್ನು ಹಾಕಿ ..ತಮ್ಮ ಮೆದು ಮೆದುವಾದ ಸೀರೆಯನ್ನು ಹಾಸಿಗೆ ಮೇಲೆ ಹರಡಿ ..ಮಲಗಿಸಿದ್ದು ನನಗಿನ್ನೂ ಕಣ್ಣೆದುರು ಕಾಣಿಸ್ತಾ ಇದೆ .ತಮ್ಮ ಹಳೆಯ ವಾಯಿಲ್ ಸೀರೆಗಳನ್ನೇ ಅವರು ಹಾಸಿಗೆಗೆ ಬೆಡ್ಶೀಟ್ಟನಂತೆ ಹಾಕುತ್ತಿದ್ದರಿಂದ ಆ ಮೃದುವಾದ ಸೀರೆಯ ಮೇಲೆ ಮಲಗುವ ಸುಖ ಇವತ್ತು ಯಾವುದೇ ಬಾಂಬೆ ಡೈಯಿಂಗ್ ಬೆಡ್ಶೀಟಿನಲ್ಲಿ ಸಿಗಲಿಕ್ಕಿಲ್ಲ .ಇವತ್ತು ನಾನು ಹೊದ್ದುಕೊಳ್ಳುವುದೂ ಅವರದೇ ಎರಡು ಮೂರು ಸೀರೆಗಳನ್ನು ಸೇರಿಸಿ ಮಾಡಿದ ಒಂದು ಗೊದ್ದೋಡಿಯನ್ನು.

ದೊಡ್ಡಮ್ಮನ ಮನೆಯಲ್ಲಿ ಯಾವುದೇ ಶ್ರಾದ್ಧ ..ಏನಾದರೂ ವಿಶೇಷ ಆದರೆ ಮುಂಚಿನ ದಿನ ಹೋಗಿ ಕಡೆಯುವ ಕಲ್ಲಿನಲ್ಲಿ ಏನೆಲ್ಲಾ ರುಬ್ಬಬೇಕು ಅದನ್ನೆಲ್ಲ ರುಬ್ಬಿಟ್ಟು. ನಾನು ಕೆಲವೊಮ್ಮೆ ಸಂಜೆ ದೊಡ್ಡಮ್ಮನ ಮನೆಗೆ ಹೋದಾಗ ಈ ತಾರಮಕ್ಕ ಎಂದಿನಂತೆ ತಮ್ಮ ಕಾಟನ್ ಸೀರೆಯನ್ನು ನೀಟಾಗಿ ಉಟ್ಟು ನಗುತ್ತಾ ಕುಳಿತಿರುವುದು ನನ್ನ ಕಣ್ಣಿಗೆ ಕಟ್ಟಿದಂತಿದೆ. ಎಷ್ಟೇ ಕೆಲಸವಿರಲಿ ತಮ್ಮ ಆ ಕಾಟನ್ ಸೀರೆಗಳಿಗೆ ಹದವಾಗಿ ಗಂಜಿ ಹಾಕಿ …ಕೈಯಿಂದ ತಿಕ್ಕಿ ತಿಕ್ಕಿ ನೀಟಾಗಿ ಮಡಚಿ ಅದನ್ನು ಹಾಸಿಗೆಯ ಅಡಿಯಲ್ಲಿಟ್ಟು ಇಸ್ತ್ರಿಪೆಟಿಗೆ ಇಲ್ಲದಿದ್ದರೂ ಈ ಇಸ್ತ್ರೀಯನ್ನು ಮಾಡಿ ಅದನ್ನು ಉಟ್ಟುಕೊಂಡು ಬರುತ್ತಿದ್ದರೆ ಎಂಥವರಿಗಾದರೂ ಗೌರವ ಉಕ್ಕಿ ಬರಬೇಕು. ಹಾಗಾಗಿ ನನ್ನ ಅಣ್ಣ ಅವರನ್ನು ಕಾಟನ್ ಕುಂತಿ ಎಂದೇ ಕರೆಯುತ್ತಾರೆ. ಯಾಕೆಂದರೆ ಯಾವಾಗಲೂ ಕಾಟನ್ ಸೀರೆಯನ್ನು ಉಡುವ ಇವರಿಗೂ ಕುಂತಿಯಂತೆ ಐವರು ಗಂಡು ಮಕ್ಕಳು.

ನನ್ನ ದೊಡ್ಡ ಅಕ್ಕನ ಹೆರಿಗೆ ಸಮಯದಲ್ಲಿ ಅಜ್ಜಿ ಏನನ್ನೋ ತರಲು ಮಾಳಿಗೆಗೆ ಹತ್ತಿದವರು ಇಳಿಯುವಾಗ ಬಿದ್ದು ಕಾಲು ಮುರಿದು ಮಣಿಪಾಲ ಆಸ್ಪತ್ರೆಯಲ್ಲಿ ತಿಂಗಳಾನುಗಟ್ಟಲೆ ಇದ್ದರು .ಆ ಸಮಯದಲ್ಲಿ ಮಧ್ಯಾಹ್ನದ ಊಟ ..ಹಾಗೂ ರಾತ್ರಿ ಊಟ ಸೋಮೇಶ್ವರದಿಂದ ಬಸ್ಸಿನಲ್ಲಿ ಬರುತ್ತಿತ್ತು .ಆದರೆ ಬೆಳಗ್ಗಿನ ಉಪಾಹಾರ ಕೇಶವ್ ಮಾಮ ಮಣಿಪಾಲಕ್ಕೆ ಆಫೀಸಿಗೆ ಬರುವಾಗ ತಂದು ಆಸ್ಪತ್ರೆಗೆ ಕೊಟ್ಟು ಹೋಗುತ್ತಿದ್ದರು .ಹಾಗೇ ಸಂಜೆ ತಿಂಡಿಯನ್ನು ತಾರಮಕ್ಕ ತಮ್ಮ ಮನೆಯಿಂದಲೇ ತರುತ್ತಿದ್ದರು. ತಮ್ಮ ಮನೆ ಕೆಲಸಗಳನ್ನೆಲ್ಲ ಬೇಗನೆ ಮುಗಿಸಿ ನಾಳೆ ಬೆಳಗ್ಗಿನ ತಿಂಡಿಯ ತಯಾರಿಯನ್ನು ಮಾಡಿಟ್ಟು ರಾತ್ರಿಯ ತಯಾರಿಯನ್ನೂ ಮುಗಿಸಿ.. ಮಧ್ಯಾಹ್ನ ಊಟವಾದ ಮೇಲೆ ಬಿಸಿಲಿನಲ್ಲಿ ಸಾಧಾರಣ ತಮ್ಮ ಮನೆಯಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ಸಿಟಿ ಬಸ್ ಸ್ಟ್ಯಾಂಡಿನ ವರೆಗೆ ನಡೆದುಕೊಂಡು ಬಂದು


.ಅಲ್ಲಿ ಈಗಿನಂತೆ ಗಳಿಗೆಗೊಂದು ಬಸ್ಸಿನಂತೆ ಇರದೆ ವಿರಳವಾಗಿರುತ್ತಿದ್ದ ಬಸ್ಸಿಗೆ ಕಾದು ..ಮಣಿಪಾಲಕ್ಕೆ ಬಂದು.. ಅಲ್ಲಿಂದ ಬಾಳಿಗಾ ವಾರ್ಡಿನ ತನಕ ನಡೆದುಕೊಂಡು ಬಂದು ನಮಗೆ ತಿಂಡಿಯನ್ನು ಕೊಟ್ಟು.. ವಾಪಸು ಪುನಃ ಬಸ್ಸಿನಲ್ಲಿ ಸಿಟಿ ಬಸ್ ಸ್ಟ್ಯಾಂಡಿಗೆ ಹೋಗಿ ಮನೆ ತನಕ ನಡೆದುಕೊಂಡು ಹೋಗಿ ಪುನಃ ತಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರು. ಇದು ಒಂದು ದಿನವಲ್ಲ ಪೂರ್ತಿ ಅಜ್ಜಿ ಇರುವಷ್ಟು ದಿನ.ಆಗೆಲ್ಲಾ ಯಾಕೋ ಹೊರಗಿನಿಂದ ತಿಂಡಿ ತಂದು ತಿನ್ನುವ ಕ್ರಮವೇ ಇರಲಿಲ್ಲ ಹಾಗಾಗಿ ಈ ಒಂದು ಕೆಲಸವನ್ನು ಅವರು ಚಾಚೂ ತಪ್ಪದೆ ಮಾಡುತ್ತಿದ್ದರು. ಇಷ್ಟು ಮಾತ್ರವೇ ಮಿಷನ್ ಹಾಸ್ಪಿಟಲ್ ನಲ್ಲಿ ಯಾರಾದರೂ ಎಡ್ಮಿಟ್ ಆದರು ಅವರ ಮನೆಯಿಂದಲೇ ಊಟ ತಿಂಡಿ ಸರಬರಾಜು ..

ಹಾಗೆ ಅವರ ಮಕ್ಕಳೆಲ್ಲರೂ ಮುಂಬಯಿಗೆ ಹೋದ ಮೇಲೆ ಕೇಶವಮಾಮನಿಗೆ ಆರೋಗ್ಯ ತಪ್ಪಿದಾಗ ಅನಿವಾರ್ಯವಾಗಿ ಅವರಿಗೆ ಉಡುಪಿಯ ಮನೆಯನ್ನು ಬಿಟ್ಟು ಮಕ್ಕಳಿರುವ ಕಡೆ ಮುಂಬಯಿಗೆ ಹೋಗಲೇಬೇಕಾಯಿತು. ತಮ್ಮಉಡುಪಿಯ ಮನೆಯ ಅಕ್ಕಪಕ್ಕದಲ್ಲಿರುವ ಮನೆಯವರನ್ನು ಪ್ರೀತಿಸುತ್ತಾ.. ಅವರ ಪ್ರೀತಿಯನ್ನು ಪಡೆಯುತ್ತಾ .. ತನ್ನಿಚ್ಛೆಯಂತೆ ಬದುಕುತ್ತಾ ಒಂದೇ ಜಾಗದಲ್ಲಿ ಬಹಳ ವರ್ಷದಿಂದ ಇದ್ದು ಅಭ್ಯಾಸವಿದ್ದವರು.. ಬೊಂಬಾಯಿ ಜೀವನಕೆ ಅಷ್ಟೇನೂ ಖುಷಿಯಿಂದ ಹೋದದ್ದಲ್ಲ .. ಆದರೂ ಮನೋಹರ ಅವರಿಗಾಗಿಯೇ ಒಂದು ಸಣ್ಣ ಮನೆಯನ್ನು ಅಂಬಾಡಿ ರೋಡಿನಲ್ಲಿ ಮಾಡಿದ್ದರಿಂದ ಅಲ್ಲಿ ಒಂದು ರೀತಿಯ ಸಂತೋಷದಲ್ಲೇ ಇದ್ದರು .ಆದರೂ ಇಷ್ಟು ವರ್ಷಗಳಿಂದ ಇದ್ದ ಒಂದು ಜಾಗವನ್ನು ಬಿಟ್ಟು ಇನ್ನೊಂದು ಜಾಗಕ್ಕೆ ಹೋಗಿ ಹೊಸತಾಗಿ ಜೀವನ ಮಾಡುವುದು ಅಷ್ಟೊಂದು ಸುಲಭದ ವಿಚಾರವೇನೂ ಅಲ್ಲವಲ್ಲ. ನಾನ೦ತೂ ಮುಂಬಯಿಗೆ ಹೋದಾಗ ಅವರ ಮನೆಗೂ ಒಂದು ಭೇಟಿ ಇದ್ದೇ ಇತ್ತು. ಅದಾಗಿ ಸ್ವಲ್ಪ ಸಮಯದ ನಂತರ ಮನೋಹರ ಅವನ ಮದುವೆಯಾಗುವ ಸಮಯದಲ್ಲಿ ಅವರ ಹಿರಿಮಗ ಅಂದರೆ ನನ್ನ ದೊಡ್ಡ ಭಾವನ ಮನೆಯ ಹತ್ತಿರದಲ್ಲೇ ಒಂದು ಸ್ವಲ್ಪ ದೊಡ್ಡ ಮನೆಯನ್ನೇ ಖರೀದಿಸಿದ್ದ. ಅವರು ಆ ಮನೆಗೆ ಬಂದ ಮೇಲಂತೂ ನಮ್ಮಗಳ ಭೇಟಿ ಹಿತ್ತಲು ಮನೆಗೆ ಹೋಗಿ ಬಂದಷ್ಟೇ ಸಲೀಸಾಯಿತು. ಅಲ್ಲಿಯೇ ಸ್ವಲ್ಪ ಆ ಕಡೆ ನನ್ನ ಅಣ್ಣನ ಮನೆಯೂ ಇತ್ತು.. ಭಾವನ ಮನೆ ನಾಲ್ಕನೇ ಮಳಿಗೆಯಲ್ಲಿದ್ದರೂ ತಮ್ಮ ಮಗನ ಮನೆ ಎಂಬ ಪ್ರೀತಿಯಿಂದ ಅಷ್ಟೂ ಮೆಟ್ಟಿಲುಗಳನ್ನು ಹತ್ತಿ ಹೋಗಿಬರುತ್ತಾ ಇದ್ದರು. ಯಾರೇ ಮನೆಗೆ ಬರಲಿ ಅವರಿಗೆ ಯಾವ ಯಾವ ತಿಂಡಿ ಪದಾರ್ಥ ಅಂದರೆ ಇಷ್ಟ.. ಅವರಿಗೆ ಏನು ಇಷ್ಟವಾದುದನ್ನು ಮಾಡಬಹುದು .. ಅವರಿಗೆ ಊಟಕ್ಕೆ ಏನನ್ನು ಕೊಡಬಹುದು… ಎನ್ನುವುದು ಅವರ ಮಸ್ತಕದಲ್ಲಿ ಸ್ಥಿರವಾಗಿ ಕೂತಿದೆ .ಹಾಗಾಗಿ ನಾವ್ಯಾರು ಅವರ ಮನೆಗೆ ಹೋದರೂ ನಮ್ಮ ಪ್ರೀತಿಯ ಇಷ್ಟದ ತಿನಿಸುಗಳನ್ನು ಮಾಡಿಯೇ ಮಾಡುತ್ತಾರೆ .ಅವರೊಂದಿಗೆ ಮನೋಹರನ ಹೆಂಡತಿ ಶೀಲಾಳು ಕೂಡ ಹಾಗೇ ಅವರಂತೆ ಎಲ್ಲರ ಇಷ್ಟಾನಿಷ್ಟಗಳನ್ನು ನೆನಪಿನಲ್ಲಿಟ್ಟುಕೊಂಡು ಅದನ್ನು ಮಾಡಿಯೇ ಮಾಡುತ್ತಾಳೆ ..ನಮ್ಮಲ್ಲೆಲ್ಲ ಮುಂಬಯಿಗೆ ಯಾರಾದರೂ ಯಾವಾಗ ಬಂದರೂ ಯಾವುದೇ ವಿಶೇಷ ಕಾರಣವಿಲ್ಲದಿದ್ದರೂ ಅವರಿಗೆ ಏನಾದರೂ ಗಿಫ್ಟ್ ಕೊಡುವ ಕ್ರಮ ಉಂಟು. ಹಾಗೆ ಅವರ ಮಕ್ಕಳು ಎಷ್ಟೇ ಕೊಟ್ಟರೂ ತಮ್ಮಲ್ಲಿರುವ ಹಣದಿಂದ ಇವರದ್ದು ಒಂದು ಬೇರೆ ಗಿಫ್ಟ್ ಎಂದು ಒಂದಿಷ್ಟು ಹಣವನ್ನು ನಮ್ಮ ಕೈಗೆ ತುರುಕಿ ಏನೂ ಇಲ್ಲವಾ ಮಕ್ಕಳಿಗೆ ಏನಾದ್ರೂ ಚಾಕೊಲೇಟ್ ತಗೊಳ್ಳಿ ಎನ್ನುವುದು ಅವತ್ತಿನಿಂದ ಇವತ್ತಿನವರೆಗೂ ನಡೆದುಕೊಂಡು ಬಂದಂತಹ ಕ್ರಮ . ಅದು ಬಿಡಿ ನನ್ನ ಮಗಳು ಇವತ್ತು ಸಿಕ್ಕಿದ್ರೂ ಏನಾದ್ರೂ ಕೊಡುತ್ತ ಯಾವುದಕ್ಕೂ ಅಲ್ವಾ ನಿನಗೆ ಒಂದು ನೈಟಿ ತೆಗೆದುಕೋ ಎಂದು ಹೇಳುವುದು..ಆನಕಾ ನಾವೆಲ್ಲರ ನೈಟಿ ಹಾಕುವುದಿಲ್ಲ ಎಂದರೆ ಪ್ರೀತಿಯಿಂದ ಬೈದು ಆದರೂ ಕೊಡುತ್ತಾರೆ . ಪ್ರತಿಯೊಬ್ಬರ ಹುಟ್ಟಿದ ಹಬ್ಬವನ್ನು ಜ್ಞಾಪಕದಲ್ಲಿ ಇಟ್ಟುಕೊಂಡು ಮರೆಯದೆ ಎಂದಿಗೂ ಅವರ ಒಂದು ಕಾಣಿಕೆ ಸಂದಾಯವಾಗಲೇಬೇಕು . ಆವತ್ತಿನಿಂದ ಇವತ್ತಿನವರೆಗೆ ಅವರ ಮಕ್ಕಳು ಯಾರಿಗೆ ಏನೇ ಕೊಡಲಿ ಅವರಿಗದು ಸಂತೋಷದ ವಿಷಯವೇ.. ವಿನಃ ಅದರಲ್ಲಿ ಒಂದು ಚೂರು ಹೊಟ್ಟೆ ಕಿಚ್ಚಾಗಲೀ.. ಯಾಕೆ ಕೊಡಬೇಕಿತ್ತು ಎನ್ನುವ ಭಾವನೆಯಾಗಲೀ..ನಾನು ಯಾವತ್ತೂ ಕಂಡದ್ದಿಲ್ಲ. ಯಾರು ಬಂದರೂ ಅವರಿಗೆ ಏನಾದರೂ ಕೊಡಬೇಕು… ತಿನ್ನಿಸಬೇಕು.. ಇದೇ ಅವರ ದೊಡ್ಡ ಆಸೆ. ಐದು ಜನ ಸೊಸೆಯಂದಿರು ಇದ್ದರೂ ಒಂದೇ ಒಂದು ದಿನವೂ ಯಾವೊಂದು ಸೊಸೆಯ ಬಗ್ಗೆಯಾಗಲಿ ಮಕ್ಕಳ ಬಗ್ಗೆಯಾಗಲಿ ಒಂದೇ ಒಂದು ಕೆಟ್ಟ ಮಾತನ್ನು ಆಡಿದ್ದು ದೂರು ಹೇಳಿದ್ದು ನಾನಂತೂ ಕೇಳಿಯೂ ಇಲ್ಲ ನೋಡಿಯೂ ಇಲ್ಲ .ಯಾವಾಗಲೂ ನನ್ನ ಆ ಸೊಸೆಗೆ ಆರಾಮಿಲ್ಲ.. ಈ ಸೊಸೆಗೆ ಆರಾಮಿಲ್ಲ ..ನನ್ನ ಆ ಮಗನಿಗೆ ಆರಾಮಿಲ್ಲ ..ಇವನಿಗೆ ಆರೋಗ್ಯ ಸರಿಯಿಲ್ಲ ..ಇದನ್ನೇ ಹೇಳುತ್ತಾ ಮುಸಿಮುಸಿ ಅಳುತ್ತಾ ಇರುವುದು ಬಿಟ್ಟರೆ ಬೇರೊಂದು ಮಾತಿಲ್ಲ. ಕೆಲವೊಮ್ಮೆ ಇವರು ಅವರ ಆರೋಗ್ಯದ ಬಗ್ಗೆ ಚಿಂತೆ ಮಾಡಿ ಅಳುವುದನ್ನು ನೋಡುವಾಗ ನಮಗೆಲ್ಲ ಏನಿದು ಅಳುತ್ತಾ ಇರುತ್ತಾರೆ ಎಂದು ಕಂಡರೂ ಹೀಗೆ ಆಲೋಚನೆ ಮಾಡುವಾಗ ಅದರೊಳಗಿರುವ ಅವರ ಪ್ರೀತಿ ಅನಿಶ್ಚಿತತೆ ಎಷ್ಟಿರಬಹುದು ಎಂದು ಅನಿಸುತ್ತದೆ. ನನ್ನಮ್ಮ ಅವರ ತಮ್ಮನ ಹೆಂಡತಿಯೇ ಆದರೂ ಇವರು ಅವರ ನಾದಿನಿಯೇ ಆಗಿದ್ದರೂ ಒಂದೇ ಒಂದು ದಿನ ಇಬ್ಬರಲ್ಲೂ ಯಾವುದೇ ಮನಸ್ತಾಪ ಆಗಿದ್ದನ್ನು ನಾನೆಂದೂ ಕಂಡಿಲ್ಲ. ಇಬ್ಬರಲ್ಲೂ ಅಕ್ಕತಂಗಿಯರ೦ತಹ ಪ್ರೀತಿ . ಹಣದ ವಿಚಾರವಾಗಿ ತಾವು ತಮ್ಮ ಮಧ್ಯ ವಯಸ್ಸಿನಲ್ಲಿ ಕಷ್ಟದ ದಿನಗಳನ್ನು ಕಂಡಿದ್ದರೂ ಒಂದೇ ಒಂದು ದಿನವೂ ಅವರ ಬಾಯಿಯಲ್ಲಿ ತಾವು ಪಟ್ಟ ಕಷ್ಟದ ಬಗ್ಗೆ ವೈಭವೀಕರಣದ ಮಾತುಗಳನ್ನು ನಾವು ಕೇಳಿದ್ದೇ ಇಲ್ಲ .ಹಾಗಾಗಿ ಅವರು ಸುಖದಿಂದಲೇ ಇದ್ದಿರಬಹುದು ಎಂದೇ ನಾವು ಚಿಕ್ಕವರಿರುವಾಗ ತಿಳಿದುಕೊಂಡಿದ್ದೆವು…
ಈಗಲೂ ಈ ತೊಂಬತ್ತಮೂರು ವರ್ಷ ಪ್ರಾಯದಲ್ಲಿಯೂ ಅಪೂರ್ವ ಜ್ಞಾಪಕ ಶಕ್ತಿಯನ್ನು ಹೊಂದಿ ಯಾವೊಂದು ಅರಳು ಮರಳು ಕೂಡ ಆಗದೆ ಎಲ್ಲರನ್ನು ಪ್ರೀತಿಸುತ್ತಾ ..ತಮ್ಮದೇ ಶೈಲಿಯಲ್ಲಿ ಜೋರು ಮಾಡಿದಂತೆ ಮಾತನಾಡಿ ಪ್ರೀತಿ ಮಾಡುತ್ತಾ.. ಬದುಕುತ್ತಿರುವ ಇಂತಹ ಅಮ್ಮನಂಥ ಅಮ್ಮನನ್ನು ಸೋದರತ್ತೆಯ ರೂಪದಲ್ಲಿ ನಾವೆಲ್ಲರೂ ಕಂಡಿದ್ದೇವೆ. ಈ ದಿನ ನನ್ನ ಪ್ರೀತಿಯ ಲೇಖನವನ್ನು ತಾಯಿಯಂದಿರ ದಿನದಲ್ಲಿ ನನ್ನ ಪ್ರೀತಿಯ ಸೋದರತ್ತೆಗೆ ಅರ್ಪಿಸುತ್ತಿದ್ದೇನೆ ಐ ಲವ್ ಯೂ ತಾರಮಕ್ಕ ಎಂದರೆ “ಹೋಗಾಚೆ !ಹುಚ್ಚಿ” ಎಂದು ಬೈದೇ ಬಿಟ್ಟಾರು ಆದರೂ ಹೇಳುತ್ತೇನೆ
ಲವ್ ಯೂ ತಾರಮಕ್ಕ

*******

One thought on “ಲಹರಿ

Leave a Reply

Back To Top