ಮಕ್ಕಳ ದಿನಾಚರಣೆಯ ವಿಶೇಷ

ಮಕ್ಕಳ ಸಂಗಾತಿ

ಮಕ್ಕಳು ದಿನಾಚರಣೆಯ ಸಂಭ್ರಮ

ಡಾ.ಸುಮತಿ ಪಿ

ಇಂದು ನವಂಬರ್ ಹದಿನಾಲ್ಕು.ಬಹಳ ವಿಶೇಷ ದಿನ.ನಮ್ಮ ನಮ್ಮ ಬಾಲ್ಯದ ದಿನಗಳ ನೆನಪು ಮೆಲುಕು ಹಾಕುವ ಸಮಯ.ಬಾಲ್ಯವೆಂದರೆ ಅದು ಏನೂ ತಿಳಿಯದ ಮುಗ್ಧ ಸ್ಥಿತಿ.ಗಂಡು ಹೆಣ್ಣು ಭೇದವಿಲ್ಲದೆ,ಮಣ್ಣಿನಲ್ಲಿ ಮನೆ ಮಾಡಿ, ಅಡುಗೆಯಾಟವಾಡುತ್ತ,ಶಾಲೆಗೆ ಹೋಗುವ ,ಪಾಠ ಮಾಡುವ, ಟೀಚರ್‌ ನಂತೆ ವರ್ತಿಸಿ ಆಟವಾಡಿದ ಆ ದಿನಗಳು.ಬಹುಶಃ ಮತ್ತೆ ಮತ್ತೆ ನೆನೆದರೆ ಮನದಲ್ಲಿ ಮಂದಹಾಸ ಮೂಡಲೇಬೇಕು.ನೆನಪುಗಳು ಮಧುರ, ಸುಂದರ.ಬೆಳೆದಂತೆ ನಮ್ಮ ಬುದ್ಧಿ ವಿಕಸನ ಹೊಂದಿ ನೆನಪುಗಳ ವ್ಯೂಹದಲ್ಲಿ ಬಾಲ್ಯವು ಅವಿಸ್ಮರಣೀಯವಾದ ಇತಿಹಾಸವಾಗಿ ಉಳಿದುಬಿಡುತ್ತದೆ. ಸಮಯ ಕಳೆದಂತೆ ಅದು ಮಸುಕಾದರೂ ನಮ್ಮ ಅರಿವಿನ ಸಂಕೋಲೆಗಳಿಂದ ದೂರ ಸರಿಯುವುದಿಲ್ಲ.
ಮಣ್ಣಿನ ಮುದ್ದೆಯಂತಹ ಸಣ್ಣ ಪುಟ್ಟ ಮಕ್ಕಳನ್ನು ನೋಡುವಾಗ ಮನಸ್ಸು ಅರಳುತ್ತದೆ.ಪ್ರೀತಿ ಮೂಡುತ್ತದೆ. ಸಣ್ಣ ಸಣ್ಣ ಮಕ್ಕಳಲ್ಲಿ ಪ್ರತೀ ಮನೆಯ ಭವಿಷ್ಯದ ಬದುಕು ಹುದುಗಿರುತ್ತದೆ.ಮನೆ ಮನೆಯ ಮಕ್ಕಳು ಸೇರಿ,ಸಮಾಜ ಕಟ್ಟುತ,ದೇಶದ ಭವಿಷ್ಯ ರೂಪಿಸುತ್ತಾರೆ.
“ಒಂದು ದೇಶದ ಭವಿಷ್ಯ ತರಗತಿಯ ಕೊಠಡಿಯಲ್ಲಿ ನಿರ್ಮಾಣವಾಗುತ್ತದೆ” ತರಗತಿಯಲ್ಲಿ ಕಲಿಯುವ ಮಕ್ಕಳಿಗೆ ಉತ್ತಮ ಸಂಸ್ಕಾರದ ಶಿಕ್ಷಣ ಸಿಕ್ಕಿದರೆ”ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು”ಎಂಬಂತೆ ಅವರು ಭವಿಷ್ಯದಲ್ಲಿ ಸಮಾಜದ ಪ್ರಜ್ಞಾವಂತ,ಜಾಗ್ಗೃತ ಪ್ರಜೆಗಳಾಗಿ,ದೇಶದ ಭವಿಷ್ಯ ರೂಪಿಸುತ್ತಾರೆ.ಇಂತಹ ಮಕ್ಕಳ ಬಗ್ಗೆ ಚಿಂತನೆ ಮಾಡಬೇಕಾದ ಸುಸಮಯವಿದು.ಮಕ್ಕಳ ದಿನಾಚರಣೆ.

ಪ್ರತಿವರ್ಷ ನವೆಂಬರ್ ಹದಿನಾಲ್ಕರಂದು ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರಿಗೆ ಸಲ್ಲಿಸುವ  ಗೌರವವಾಗಿ ಅವರ ಹುಟ್ಟುಹಬ್ಬವನ್ನು ಮಕ್ಕಳ ದಿನಾಚರಣೆಯೆಂದು ಆಚರಿಸಲಾಗುತ್ತದೆ. ಮಕ್ಕಳೆಲ್ಲ ಜವಾ‌ಹರ್ ಲಾಲ್ ನೆಹರೂರವರನ್ನು ಪ್ರೀತಿಯಿಂದ “ಚಾಚಾ ನೆಹರೂ” ಎಂದು  ಕರೆಯುತ್ತಿದ್ದರು. ನೆಹರೂರವರು ಕೂಡ ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದರು.ಅವರು “ಮಕ್ಕಳು ಹೂವಿನ ತೋಟದಲ್ಲಿ ಅರಳುವಂತಹ ಸುಂದರ  ಹೂವುಗಳು” ಎಂದಿದ್ದಾರೆ.ಹೂವಿನ ಗಿಡಗಳಿಗೆ ಚೆನ್ನಾಗಿ ಎಷ್ಟು ಬೇಕೋ ಅಷ್ಟು ನೀರು,ಗೊಬ್ಬರ ಹಾಕಿ ಬೆಳೆಸಿದಾಗ ಮಾತ್ರ ಪರಿಮಳ ಬೀರುವ ಸುಂದರ ಹೂವುಗಳು ಅರಳುತ್ತವೆ.ಅಂತೆಯೇ ಮುಗ್ಧ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಶಿಕ್ಷಣವನ್ನು ಪೂರೈಸಬೇಕೆಂದು ನೆಹರೂರವರು ಸಲಹೆ ನೀಡಿದರು.ಈ ನಿಟ್ಟಿನಲ್ಲಿ ಇಂದು ಭಾರತದಾದ್ಯಂತ ಮಕ್ಕಳಿಗಾಗಿ ಅನೇಕ ಶೈಕ್ಷಣಿಕ ಪ್ರೇರಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ

1957 ರಲ್ಲಿ, ಅಧಿಕೃತವಾಗಿ ನವೆಂಬರ್ 14 ಅನ್ನು ಭಾರತದಲ್ಲಿ  ಮಕ್ಕಳ ದಿನವೆಂದು ಘೋಷಿಸಲಾಯಿತು
ಜವಾಹರಲಾಲ್ ನೆಹರೂ ಅವರ ನಿಧನದ ನಂತರ ಅವರ ಜನ್ಮ ದಿನಾಚರಣೆಯನ್ನು ಭಾರತದಲ್ಲಿ ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಅವರು ಮಕ್ಕಳೊಂದಿಗೆ ಪ್ರೀತಿಯ ಚಾಚಾ ನೆಹರು ಎಂದು ಬಹಳ ಜನಪ್ರಿಯರಾಗಿದ್ದರಿಂದ ಮಕ್ಕಳ ದಿನಾಚರಣೆಯ ಮೂಲಕವಾಗಿ ಅವರಿಗೆ ಗೌರವ ಸಲ್ಲಿಸಲಾಗುತ್ತದೆ.ಮಕ್ಕಳ ನೆಚ್ಚಿನ ಚಾಚ ಜವಾಹರಲಾಲ್‌ ನೆಹರೂ ರವರು ‘Tomorrow is Yours’ ಎಂದು ಮಕ್ಕಳಿಗೆ ಯಾವಾಗಲೂ ಹೇಳುತ್ತಿದ್ದರು.ಇದರ ಅರ್ಥ ನಾಳೆ ನಿಮ್ಮದು ಎಂದು.ಮಕ್ಕಳ ಮೇಲಿನ ನಂಬಿಕೆಯು ಅವರಿಗೆ ನಿರಂತರ ಸಂತೋಷದ ಮೂಲವಾಗಿತ್ತು.

ಭಾರತದ ಸ್ವಾತಂತ್ರಕ್ಕೆ ಹೋರಾಡಿದ ಪ್ರಮುಖ ನಾಯಕರಲ್ಲಿ ನೆಹರೂ ಕೂಡ ಒಬ್ಬರಾಗಿದ್ದರು.ದೇಶದ ಪ್ರಪ್ರಥಮ ಪ್ರಧಾನಿಯಾಗಿ ಇವರ ಜೀವನ ನಮಗೆಲ್ಲ ಆದರ್ಶವಾದುದು.
ಪ್ರಧಾನ ಮಂತ್ರಿಯಾಗಿ, ನೆಹರು “ದೇಶದಲ್ಲಿ ನಿರಂತರವಾಗಿ ಮಕ್ಕಳು ಮತ್ತು ಅವರ ಕಲ್ಯಾಣದ ಮೇಲೆ ಕೇಂದ್ರೀಕೃತ ಆಗಿರುವ ವಾತಾವರಣವನ್ನು ಸೃಷ್ಟಿಸಲು” ಬಯಸಿದ್ದರು. ಅವರು 1955 ರಲ್ಲಿ ಚಿಲ್ಡ್ರನ್ಸ್ ಫಿಲ್ಮ್ ಸೊಸೈಟಿ ಇಂಡಿಯಾವನ್ನು ಸ್ಥಾಪಿಸಿದರು.ನೆಹರೂ ಅವರಿಗೆ  ಮಕ್ಕಳ ಮೇಲಿದ್ದ ಪ್ರೀತಿ ಮತ್ತು ಅವರ ಕಲ್ಯಾಣದ ಕಾಳಜಿ ಅಪಾರ. ಮಕ್ಕಳ ಮುಗ್ಧ ಮುಖ ಮತ್ತು ಹೊಳೆಯುವ ಕಣ್ಣುಗಳಲ್ಲಿ ಅವರು ಭಾರತದ ಭವಿಷ್ಯವನ್ನು ಕಂಡರು.ಮಕ್ಕಳಿಗಾಗಿ ಖರ್ಚು ಮಾಡುವ ಹಣ  ಭವಿಷ್ಯಕ್ಕಾಗಿ ಮಾಡುವ ಉತ್ತಮ ಹೂಡಿಕೆಯಾಗಿದೆ ಎಂದು ಮನಗಂಡವರು.
 “ಇಂದಿನ ಮಕ್ಕಳು ಭಾರತವನ್ನು ಕಟ್ಟುತ್ತಾರೆ ಎಂದು ನಾನು ಯಾವಾಗಲೂ ಭಾವಿಸಿದ್ದೇನೆ.ನಾಳೆ ಮತ್ತು ನಾವು ಅವರನ್ನು ಬೆಳೆಸುವ ರೀತಿ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ” ಎಂದಿದ್ದಾರೆ ನೆಹರು.

ಇಂದು ನಮ್ಮ ಮಕ್ಕಳೆಲ್ಲ ಖುಷಿಯಿಂದ ಕುಣಿಯುವ ದಿನ, ಬಾಲ್ಯದ ಸೊಗಸು, ಬೆಡಗು ,ಬೆರಗು ಮತ್ತು ನೆಹರು ಅವರ ಮಕ್ಕಳ ಮೇಲಿನ ಅಪಾರ ಅಕ್ಕರೆ ಪ್ರೀತಿಯನ್ನು ಸಂಭ್ರಮದಿಂದ ನೆನೆವ ದಿನ.ಭಾರತದಾದ್ಯಂತ “ಮಕ್ಕಳ ದಿನಾಚರಣೆ “ಯನ್ನು ಬಹು ಸಡಗರ ಮತ್ತು ಸಂಭ್ರಮದಿಂದ ಆಚರಿಸುವರು.ಮಕ್ಕಳ ದಿನವನ್ನು  ಅವರಿಗೆ ಜೀವನದ ಸುಖವನ್ನು ಸವಿಯುವ ಹಕ್ಕನ್ನು ಹೊಂದಲು,ದೇಶದ ಆರೋಗ್ಯವಂತ ಮತ್ತು ಪ್ರಜ್ಞಾವಂತ ನಾಗರೀಕರಾಗಿ ಬೆಳೆಯಲು ಅವಕಾಶ ನೀಡುವುದಕ್ಕಾಗಿ ಆಚರಿಸಲಾಗುವುದು.ಈ ದಿನ ಮಕ್ಕಳಿಗೆ ತನ್ನಲ್ಲಿರುವುದನ್ನು  ಇಲ್ಲದೆ ಇರುವ ಇತರರೊಂದಿಗೆ ಹಂಚಿಕೊಳ್ಳುವುದರ ಮೌಲ್ಯವನ್ನು ತಿಳಿಸಿದರೆ,ಮಕ್ಕಳು ಹೊಣೆಯರಿತ ಮಾನವನಾಗಿ ಬೆಳೆಯಲು ಅನುವಾಗುವುದು. ಇದರ ಜೊತೆ ನಿರ್ಗತಿಕ ಇನ್ನೊಂದು ಮಗುವು ನಿರ್ಲಕ್ಷದಿಂದ ಬಾಲಾಪರಾಧಿಯೋ,ಕಳ್ಳನೋ,ಕಟುಕನೋ ಆಗುವುದನ್ನು ತಪ್ಪಿಸಿದಂತಾಗುವುದು.ಮಕ್ಕಳನ್ನು ಬೆಳೆಸುವಾಗ ಮಾಡುವ ಮುಂದಾಲೋಚನೆ ಇಂತಹ  ತೃಪ್ತಿಯನ್ನು ನಮಗೆಲ್ಲರಿಗೂ ನೀಡುವಂತಿರಬೇಕು.

ಮಕ್ಕಳ ದಿನಾಚರಣೆಯ ವೈಭವ ಮತ್ತು ಪ್ರದರ್ಶನದ ನಡುವೆ  ಚಾಚಾ ನೆಹರೂ ಅವರ ಸಂದೇಶವನ್ನು ನಾವು ಮರೆಯಬಾರದು. ಅದೆಂದರೆ ಮಕ್ಕಳಿಗೆ ಅವರ ಬೆಳವಣಿಗೆಗೆ ಸುರಕ್ಷಿತ ಮತ್ತು ಪ್ರೀತಿಯ ಪರಿಸರ ಇರಬೇಕು. ಅದಲ್ಲದೆ ಅವರಿಗೆ ಸಾಕಷ್ಟು ಮತ್ತು ಸಮಾನ ಅವಕಾಶಗಳನ್ನು ಪೂರೈಸಿ ಅವರಿಂದ  ದೇಶದ ಪ್ರಗತಿಗೆ ಕೊಡುಗೆ ಪಡೆಯಬಹುದು.ಈ ದಿನ ನಮ್ಮಲ್ಲಿನ ಪ್ರತಿಯೊಬ್ಬರಿಗೂ ಮಕ್ಕಳ ಕಲ್ಯಾಣದ ಬಗೆಗಿನ ನಮ್ಮ ಬದ್ದತೆಯನ್ನು ಪುನರ್ ನವೀಕರಿಸಲು ನೆನಪು ಮಾಡುವುದು. ಮತ್ತು ಮಕ್ಕಳಿಗೆ ಅವರ ಚಾಚಾ ನಹರುವಿನ ಆದರ್ಶದಂತೆ, ಅವರ ಮಾದರಿಯಲ್ಲಿ ಬದುಕಲು ಕಲಿಸಬೇಕು.
ಮಕ್ಕಳ ದಿನಾಚರಣೆ ವಿಶೇಷ ದಿನವಾಗಿದ್ದು, ಮಕ್ಕಳ ಹಕ್ಕುಗಳು, ಆರೈಕೆ ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲು ಭಾರತದಾದ್ಯಂತ ಆಚರಿಸಲಾಗುತ್ತದೆ. ಸರ್ಕಾರ ಇಂದು ನಾಡಿನ ಪ್ರಜೆಗಳ ಶಿಕ್ಷಣಕ್ಕೆ ಸಾಕಷ್ಟು ಸೌಲಭ್ಯಗಳೊಂದಿಗೆ ಉಚಿತ ಶಿಕ್ಷಣ ನೀಡುತ್ತಿದೆ. ಅದನ್ನು ಸದುಪಯೋಗ ಪಡಿಸಿಕೊಂಡು ಉತ್ತಮವಾಗಿ ಓದಿ, ತಮ್ಮ ಏಳಿಗೆಗೆ ಶ್ರಮಿಸಿದ ತಮ್ಮ ತಂದೆ ತಾಯಿಯನ್ನು ಮುಂದೆ ಚೆನ್ನಾಗಿ ನೋಡಿಕೊಳ್ಳುವುದರ ಜತೆಗೆ, ದೇಶಕ್ಕೂ ಒಳ್ಳೆಯ ಹೆಸರು ಬರುವ ಹಾಗೆ ಏನಾದರೂ ಸಾಧನೆ ಮಕ್ಕಳು ಮಾಡುವಂತಾಗಬೇಕು.
ಜವಾಹರಲಾಲ್ ನೆಹರು ಹೇಳಿದಂತೆ, ಇಂದಿನ ಮಕ್ಕಳು ನಾಳಿನ ಭಾರತವನ್ನು ಕಟ್ಟುತ್ತಾರೆ. ನಾವು ಅವರನ್ನು ಬೆಳೆಸುವ ರೀತಿ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಮಕ್ಕಳ ದಿನಾಚರಣೆಯು ಚಾಚಾ ನೆಹರೂ ಅವರ ಪ್ರಸಿದ್ಧ ಚಿಂತನೆಗಳನ್ನು ನೆನಪಿಟ್ಟುಕೊಳ್ಳಲು ಮತ್ತು ಆಚರಿಸಲು ಒಂದು ಸುಂದರ ಸಂದರ್ಭವಾಗಿದೆ. ಮಕ್ಕಳ ದಿನವನ್ನು ಆಚರಿಸುವುದು ಮಕ್ಕಳು ಮತ್ತು ವಯಸ್ಕರಲ್ಲಿ ಮಕ್ಕಳೇ ದೇಶದ ನಿಜವಾದ ಭವಿಷ್ಯ ಎಂದು ಅರಿವು ಮೂಡಿಸಲು ಉತ್ತಮ ಮಾರ್ಗವಾಗಿದೆ. ಆದ್ದರಿಂದ ಪ್ರತಿ ಮಗುವಿಗೆ ಪರಿಪೂರ್ಣವಾದ ಬಾಲ್ಯವನ್ನು ಒದಗಿಸುವ ಜವಾಬ್ದಾರಿಯನ್ನು ನಾವು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು.

ಇಂದು ನಾವು ನಮ್ಮ ಮಕ್ಕಳಿಗೆ ನೀಡುವ ಪ್ರೀತಿ ಮತ್ತು ಕಾಳಜಿ  ನಾಳೆ ನಮ್ಮ ದೇಶದ ಭವಿಷ್ಯವಾಗಿ ಅರಳುತ್ತದೆ. ಮಕ್ಕಳ ದಿನಾಚರಣೆ ಈ ಚಿಂತನೆಗೆ ಸಂದ ಗೌರವ ಆಗಬೇಕು.
ಶಾಲಾ ಕಾಲೇಜುಗಳಲ್ಲಿ ಹುಟ್ಟು ಹಬ್ಬದಂತೆ ಆಚರಿಸುವ ಮಕ್ಕಳ ಹಬ್ಬ ಮಕ್ಕಳ ದಿನಾಚರಣೆ.ತಪ್ಪೋ ಸರಿಯೋ, ಇಂದಿನ ಮಕ್ಕಳು ಇಂತಹ ಬಾಲ್ಯದ ನೆನಪುಗಳನ್ನು ಅನುಭವಿಸುತ್ತಿಲ್ಲ ಎಂಬ ಅಪವಾದ ಆಗಾಗ ಕೇಳಿಬರುತ್ತದೆ. ಬದಲಾಗಿ ವೀಡಿಯೋ ಗೇಮ್‌, ಟಿ.ವಿ., ಮೊಬೈಲ್‌ನಲ್ಲಿಯೇ ಸಮಯ ಕಳೆಯುತ್ತಾರೆ. ಅವರಿಗೆ ಮನೆಯ ಮುಂದೆ ಅರಳುವ ಹೂವಿನ ಗಿಡ,ಮನೆಯ ಪಕ್ಕದಲ್ಲಿರುವ ಮರ ಯಾವುದು,ನಾವು ದಿನಾ ಉಂಟುಮಾಡುವ ಅನ್ನಕ್ಕೆ ಅಕ್ಕಿ ಎಲ್ಲಿ ಬೆಳೆಯುತ್ತದೆ ಎಂಬ ಸಾಮಾನ್ಯ ಜ್ಞಾನವೂ ಇರುವುದಿಲ್ಲ. ಅದಕ್ಕಾಗಿ ಮಕ್ಕಳ ಬಾಲ್ಯವನ್ನು ನೆನಪಿಸಲು ಹಾಗೂ ಜಾಗೃತಿ ಮೂಡಿಸಲು ಮಕ್ಕಳ ದಿನಾಚರಣೆಯ ನೆಪದಲ್ಲಿ ಅನಿವಾರ್ಯ ಕಾರ್ಯವಾಗಬೇಕಿದೆ.

ಮಕ್ಕಳ ಪಾಲನೆಯಲ್ಲಿ ಹೆತ್ತವರು ಮಕ್ಕಳನ್ನು ಅತಿ ಮುದ್ದು ಮಾಡುವುದು ಹಾಗೂ ಮಕ್ಕಳನ್ನು ಪ್ರೀತಿಸದೇ ಬೆಳೆಸುವುದರಿಂದ ಅವರು ಬಾಲ್ಯದಲ್ಲಿ ಅಪರಾಧಗೈಯಲು ಹಾಗೂ ಮನೋರೋಗಗಳಿಗೆ ಒಳಗಾಗಿ ಯಾವುದರಲ್ಲೂ ಆಸಕ್ತಿ ಇಲ್ಲದಂತಾಗಿ ಬಿಡಲು ಕಾರಣವಾಗುತ್ತದೆ.ಎಂಬುದು ಸುಪ್ರಸಿದ್ಧ ಮನೋವಿಜ್ಞಾನಿ ಆಡ್ಲರ್‌ ಅವರ ಅಭಿಪ್ರಾಯ.
ಹಾಗೆಯೇ ಒಂದು ಮಗುವಿನೆದುರು ಇನ್ನೊಂದು ಮಗುವನ್ನು ಹೀಯಾಳಿಸಿ ಮಾತನಾಡಿದಾಗ ಆ ಮಗುವಿಗೆ ತಾನು ಇನ್ನೊಂದು ಮಗುವಿಗಿಂತ ಕೀಳು ಎಂಬ ಮನೋಭಾವ ಬೆಳೆಯುತ್ತದೆ. ಇದರಿಂದಾಗಿ ಆತ್ಮವಿಶ್ವಾಸ ಕುಗ್ಗಿ ಆ ಮಗು ಸ್ವತಂತ್ರವಾಗಿ ಏನನ್ನೂ ಮಾಡಲಾರದ ಪರಿಸ್ಥಿತಿ ಎದುರಿಸುತ್ತದೆ.ಯಾವಾಗಲೂ ಮಕ್ಕಳ ಭವಿಷ್ಯ ಅವರ ಮನಸ್ಸಿನ ಬೆಳವಣಿಗೆಯನ್ನು ಅವಲಂಬಿಸಿರುವುದರಿಂದ ಅವರ ಆರೋಗ್ಯದ ಜತೆಗೆ ಮಕ್ಕಳ ಮನೋವಿಜ್ಞಾನಕ್ಕೂ ಮಹತ್ವ ನೀಡಬೇಕು.

“ಮಕ್ಕಳಿಗಾಗಿ ಆಸ್ತಿ ಮಾಡಿಡಬೇಡಿ,ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ” ಎಂಬ ಮಾತಿದೆ.ಇದು ಅಕ್ಷರಶಃ ನಿಜ. ಆದರೆ ಬರಬರುತ್ತಾ ಇದು ಬದಲಾಗುತ್ತಿದೆ. ಆದ್ದರಿಂದ ಸಾಧ್ಯವಾದಷ್ಟು ಮಕ್ಕಳಿಗೆ ವಾಸ್ತವದ ಅರಿವನ್ನು ಮಾಡಿಸುತ್ತಾ, ಸ್ವಾವಲಂಬನೆಯ ಬದುಕನ್ನು ಕಲಿಸಿದಾಗ ಮಾತ್ರ ಒಂದು ಮಗು ಮುಂದಿನ ಸಮಾಜದ ಒಳ್ಳೆಯ ಪ್ರಜೆಯಾಗಲು ಸಾಧ್ಯ.ಮಕ್ಕಳ ದಿನಾಚರಣೆಯು ಮಕ್ಕಳನ್ನು ಆಚರಿಸಲು ಮತ್ತು ಗೌರವಿಸಲು ಮೀಸಲಾದ ವಿಶೇಷ ದಿನವಾಗಿದೆ. ಇದು ಮಕ್ಕಳ ಹಕ್ಕುಗಳು, ಯೋಗಕ್ಷೇಮ ಮತ್ತು ಸಮಾಜದಲ್ಲಿ ಅವರ ಪಾತ್ರದ ಮಹತ್ವವನ್ನು ಒತ್ತಿ ಹೇಳುತ್ತದೆ.ಇದು ಒಂದು ದಿನದ ಆಚರಣೆಯಾಗದಿರಲಿ. ನಿತ್ಯವೂ ,ಪ್ರತಿ ಮನೆಯಲ್ಲಿ ಮಕ್ಕಳ ದಿನಾಚರಣೆಯಾಗಲಿ. ತಂದೆಯ ಕಾಳಜಿ,ತಾಯಿಯ ಪ್ರೀತಿ,ಸಹೋದರ-ಸಹೋದರಿ ಬಾಂಧವ್ಯ,ಬಂಧುಗಳ ಒಡನಾಟವಿಲ್ಲದೆ,ಕಮರುತ್ತಿರುವ ಮಕ್ಕಳಿಗೆ ಮಾನವೀಯ ನೆಲೆಯಲ್ಲಿ ಪ್ರೀತಿ,ಮಮತೆಯ ಮಡಿಲಲ್ಲಿ ,ಅರಿವು, ಜವಾಬ್ದಾರಿ ಮೂಡಿಸುವ ಕೆಲಸವಾಗಲಿ.ಈ ನಿಟ್ಟಿನಲ್ಲಿ ನಾವಿಂದು ಆಚರಿಸುವ ಮಕ್ಕಳ ದಿನಾಚರಣೆ ಅರ್ಥಪೂರ್ಣವಾಗಲಿ.ಮಕ್ಕಳ ಮನಸ್ಸು ಕೆರಳದೆ ಅರಳಿಸುವ ಸುದಿನ ಇದಾಗಲಿ.ಬಾಲ್ಯದಲ್ಲೇ ಕಮರುವ ಕೂಸುಗಳು ಪ್ರಪಂಚದ ಬೆಳಕನ್ನು ಕಂಡು ಎಲ್ಲೆಡೆ ಕೀರ್ತಿಯನ್ನು ಸೂಸುವಂತೆ ಆಗಲಿ.ಕವಿದಿರುವ ಕತ್ತಲೆಯನ್ನು ಓಡಿಸುವ ಬೆಳಕಿನ ಸಂಕೇತವಾದ ಬೆಳಕಿನ ಹಬ್ಬ ದೀಪಾವಳಿಯ ಪರ್ವಕಾಲದಲ್ಲಿ ನಾವಿಂದು ಆಚರಿಸುವ ಮಕ್ಕಳ ದಿನಾಚರಣೆ ವಿಶೇಷವಾಗಿ ಫಲ ನೀಡುತ್ತ, ಪ್ರಸ್ತುತ ಸಮಾಜದಲ್ಲಿ,ಮಕ್ಕಳ ಜಗತ್ತಿನಲ್ಲಿ ನಡೆಯುತ್ತಿರುವ ಎಲ್ಲಾ ರೀತಿಯ ಅನಾಹುತಗಳತ್ತ ಬೆಳಕು ಚೆಲ್ಲುತ್ತ,ಮುಗ್ಧ ಮಕ್ಕಳು ಭದ್ರ ಭವಿಷ್ಯವನ್ನು ಕಾಣುವಲ್ಲಿ ದಾರಿದೀವಿಯಾಗಲಿ ಎಂದು ಬಯಸೋಣವೇ?


ಡಾ.ಸುಮತಿ ಪಿ

Leave a Reply

Back To Top