ಮೋಹನ್ ಬಸಪ್ಪನಾಯಕ ಕವಿತೆ ಬಾಳ ನೇಸರ……..!

ಕಾವ್ಯ ಸಂಗಾತಿ

ಮೋಹನ್ ಬಸಪ್ಪನಾಯಕ

ಬಾಳ ನೇಸರ……..!

ಅವ್ವಾ….
ನಿನ್ನ ನೆನೆದಾಗಲೆಲ್ಲ
ನೋವುಗಳು ತಬ್ಬಲಿ
ಸಂತಸ, ಸಡಗರದ ಪರ್ವಕ್ಕೆ
ನೀನೇ ಆದಿ………!

ಅವ್ವಾ
ಕಷ್ಟ ಬಂದಾಗಲೂ
ಅಳುಕದೆ, ಸಿಡುಕದೆ
ಎಲ್ಲವನೂ ಒಳಗೊಳಗೆಯೇ ನುಂಗಿ
ಸಂತಸವ ತೋರುವ
ನಿನ್ನಂತ ಹಗಲು ವೇಷಧಾರಿಯ ನಾ ಕಾಣಲಿಲ್ಲ………!

ಹಸಿವನ್ನ ಅದೆಷ್ಟು ಸಲ
ಮರೆಮಾಚಿದೆ
ತಾಪವ ಸಹಿಸುತ್ತಲೇ
ಬದುಕಿದೆ
ಎಲ್ಲ ಈ ಜೀವದ ಅದೊಂದು
ಸಂತಸದ ರೊಟ್ಟಿಗೆ ಮುಡಿಪು…….!

ನೀನಿತ್ತ ಈ ಜೀವ
ಕನಸುಗಳ ಅಂಬುಧಿಯಲಿ
ಈಜುತಿಹುದು….,
ಅಂದು ತೋರಿದ ನಕ್ಷತ್ರವ
ಕಾಣ ಹೊರಟಿಹುದು….
ಇದೆಲ್ಲವೂ ನಿನ್ನಯ ತ್ಯಾಗಕ್ಕೆ
ಮುಡಿಪಿಡಲು………..!


ಮೋಹನ್ ಬಸಪ್ಪನಾಯಕ

Leave a Reply

Back To Top