ಕಾವ್ಯ ಸಂಗಾತಿ
ಡಾ.ಅಮೀರುದ್ದೀನ್ ಖಾಜಿ-
ಗಜಲ್
ಎದೆಯ ವೀಣೆಯ ನುಡಿಸು ಬಗೆ ಬಗೆಯ ತೆರದಲಿ
ಹೊಮ್ಮಿ ಬರಲಿ ಹೊಂಗನಸು ಬಗೆ ಬಗೆಯ ತೆರದಲಿ
ಮಾಂತ್ರಿಕ ಬೆರಳಾಡಿಸು ಬಿಗಿಯ ತಂತಿಯ ಮೇಲೆ
ಸುಸ್ವರವ ಹೊರಡಿಸು ಬಗೆಬಗೆಯ ತೆರದಲಿ
ಒಣ ಜಿಗುಪ್ಸೆ ಹುಟ್ಟಿಸಿದೆ ಗಾಣದೆತ್ತಿನ ಬದುಕು
ಜಡತ್ವವೆಲ್ಲವನು ಗುಡಿಸು ಬಗೆ ಬಗೆಯ ತೆರದಲಿ
ಕಾರಿರುಳ ಘನಘೋರ ರಾತ್ರಿಯಲಿ ನಡೆದಿರುವೆ
ಒಳಬೆಳಗ ಹೊರಹೊಮ್ಮಿಸು ಬಗೆ ಬಗೆಯ ತೆರದಲಿ
ಬರ ಬಿಸಿಲಲಿ ನಿಂತಾಗ ಕರುಣೆಯ ಮಳೆ ಸುರಿದವನೆ
ದಯೆಯ ಹೊನಲ ಹರಿಸು ಬಗೆ ಬಗೆಯ ತೆರದಲಿ
ಡಾ.ಅಮೀರುದ್ದೀನ್ ಖಾಜಿ-
ಧನ್ಯವಾದಗಳು ಸರ್ ✨️