ಶೂನ್ಯ
ಡಾ.ಪ್ರಸನ್ನ ಹೆಗಡೆ
ಈ ಬದುಕು ಸುಂದರ ಶೂನ್ಯ
ಕಂಡಿದ್ದೆಲ್ಲವೂ ಅನ್ಯ
ಹಿಂದತಿಲ್ಲ ಇಂದು
ನಾಳೆಗೆ ಕಾದಿದೆ ಬೇರೊಂದು
ಅಂದಂತಿಂದು ನಾನಿಲ್ಲ
ಇಂದಂತಿರುವವ ನಾನಲ್ಲ
ಇದು ಇಂತೆಂದೆಂಬುವನಾರಣ್ಣ?
ಆ ಅಣ್ಣನೂ ಕೊನೆಗೆ ಮಣ್ಣಣ್ಣಾ
ಈ ಅಕ್ಷಿಯ ಕಕ್ಷಿಯು ಕಿರಿದು
ಬಾಯ್ಬಿಡಬೇಡಾ ಬಿರಿದು
ಈ ಕಾಲನ ಚಕ್ರವು ಹಿರಿದು
ಅದನರಿಯಲು ಸಾವದು ಬಿಡದು
ಹರಿಯುವ ಹೊಳೆಯೂ ಮಾಯಾವಿ
ಗಗನವೇರಲಿದೆ ಹಬೆಯಾಗಿ
ಓ! ತೇಲುವ ಮೋಡವು ಮೇಲಿಲ್ಲ
ಅದು ನಾಳಿನ ಹೊಳೆಯು ಸುಳ್ಳಲ್ಲ
ನನ್ನದು ಎನ್ನಲು ಏನಿಲ್ಲ
ನಾ ಧೂಳನು ಮೀರುವ ಭಟನಲ್ಲ
ಕಾಣುವದೆಲ್ಲವೂ ನಿಜವಲ್ಲ
ನೀ ಕಾಣುವ ಕಣ್ಣಿಗೆ ಕಣ್ಣಿಲ್ಲ
ಸತ್ಯವು ಕಾಲನ ಮಿತ್ಯ
ಮಿತ್ಯವು ನಾಳಿನ ಸತ್ಯ
ಜಗವೇ ಕಾಲನ ಹೊಳೆಯು
ನಾವೆಲ್ಲಾ ಅದರೊಳು ಅಲೆಯು
******
ಸುಂದರ ಕವನ. ನಶ್ವರ ಜಗತ್ತಿನ ಚಿತ್ರಣ, ಕೊನೆಯೆರಡು ಸಾಲುಗಳ metaphor ನೊಂದಿಗೆ ಪೂರ್ಣಗೊಂಡಿದೆ, ಅಭಿನಂದನೆಗಳು.