ವಿಜಯಪ್ರಕಾಶ್ ಸುಳ್ಯ -ಜುಲ್ ಕಾಫಿಯಾ ಗಝಲ್

ಕಾವ್ಯ ಸಂಗಾತಿ

ಜುಲ್ ಕಾಫಿಯಾ ಗಝಲ್

ವಿಜಯಪ್ರಕಾಶ್ ಸುಳ್ಯ

ಸುಪ್ತ ಬಯಕೆಗಳು ಭರವಸೆಯಲಿ ಪುಟಿದೇಳುತಿರಲು ಹೃದಯದೊಳಗೀಗ ಚೈತ್ರಾಗಮ
ದಿಟ್ಟ ನಿಲುವುಗಳು ಬದುಕಿನಲಿ ಛಾಪನು ತೋರುತಿರಲು ಮನದೊಳಗೀಗ ಚೈತ್ರಾಗಮ

ಸಂದಿಗ್ಧತೆಗಳನು ಪರಿಹರಿಸಿ ಜತನದಿ ಸಾಗುತಿರಬೇಕು ಜೀವನದಲಿ ಜಂಜಾಟಕೆ ಜಗ್ಗದೆ
ಸಫಲತೆಯ ಸಂತಸದಲಿ ಎದೆ ತುಂಬಿ ನಲಿದಾಡುತಿರಲು ಕನಸಿನೊಳಗೀಗ ಚೈತ್ರಾಗಮ

ದಾನ ಸಿಕ್ಕಿದ ಜನುಮವಿದು ಮದದಿ ಬೀಗುತ ನಡೆದರೆ ಮನುಜ ಕುಲಕದು ಅಪಮಾನ
ಸುಳ್ಳಿನ ಮುಸುಗನು ಸರಿಸಿ ಸತ್ಯ ಸತ್ವವನು ತೋರುತಿರಲು ಬಾಳಿನೊಳಗೀಗ ಚೈತ್ರಾಗಮ

ಮೆಟ್ಟಿಲಾಗು ಪರರ ಏಳಿಗೆಗೆ ಲೆಕ್ಕವಿರಿಸದಿರು ಮೆಟ್ಟಿ ನಡೆದವರ ಹೆಸರುಗಳನು ಕೊನೆಗೆ
ಹಚ್ಚಿಟ್ಟ ಜ್ಞಾನ ದೀವಿಗೆಯು ಪಥಿಕರಿಗೆ ಬೆಳಕಾಗುತಿರಲು ಆತ್ಮದೊಳಗೀಗ ಚೈತ್ರಾಗಮ

ಅಂತರಂಗದ ರಣರಂಗದಿ ನಿನ್ನೆಯ ನನ್ನನು ಮಣಿಸಿ ನಾಳೆಗಳ ಕಟ್ಟುವುದೇ ವಿಜಯ
ದೃಷ್ಟಿಕೋನಗಳು ವಿವೇಚನೆಯ ಅಂಕೆಯಲ್ಲಿರಲು ನಡೆನುಡಿಯೊಳಗೀಗ ಚೈತ್ರಾಗಮ


ವಿಜಯಪ್ರಕಾಶ್ ಸುಳ್ಯ

2 thoughts on “ವಿಜಯಪ್ರಕಾಶ್ ಸುಳ್ಯ -ಜುಲ್ ಕಾಫಿಯಾ ಗಝಲ್

Leave a Reply

Back To Top