ಗಝಲ್
ಎ ಎಸ್ ಮಕಾನದಾರ.
ಗಲ್ ಗಲ್ ಗಜ್ಜೆಯ ನಾದ ಹೊಮ್ಮಿಸುತ ಮನದ ಅಂಗಳದಲಿ ಒಮ್ಮೆ ಓಡಾಡಿ ಬಿಡು
ಕತ್ತಲು ತುಂಬಿದ ಮನೆಯ ಮೂಲೆ ಮೂಲೆಯಲೂ ನಗುವ ತೂರಾಡಿ ಬಿಡು
ಸೂರ್ಯ ಚಂದ್ರ ನಕ್ಷತ್ರಗಳ ಬೆಳಕೇಕೆ ನಿನ್ನ ಕಣ್ಣ ಬೆಳದಿಂಗಳು ಸಾಕು ಬೆಳಕ ಹಬ್ಬಕೆ
ಬಾಗಿಲು ಕಿಟಕಿಗಳಾಚೆ ಇರಲಿ ಆ ಮುಗಿಲ ತಾರೆಯರು ಬಾಚಿಕೊಳ್ಳುತ್ತೇನೆ ಒಲವನ್ನೊಮ್ಮೆ ತೂರಾಡಿ ಬಿಡು
ಬಾಳನಂದನಕ್ಕಿಗ ಚೈತ್ರ ಬಂದಾಗಿದೆ ಹಸಿರು ಬಳ್ಳಿಯ ತುಂಬ ಆಸೆಗಳ ಒಸಗೆ
ಮೊಗ್ಗು ಹೂವಾಗಿ ಅರಳಿ ನಲಿಯುವ ಕಾಲ ತೋಳ ತೆಕ್ಕೆಯಲಿ ಒಲಾಡಿ ಬಿಡು
ಹೃದಯ ಸಿಂಹಾಸನದಲಿ ನೀನೇ ಮಹಾರಾಣಿ ಯಾವ ದಾಳಿಗೂ ನಾನು ಹೆದರಲಾರೆನು
ಎದೆ ಹಿಗ್ಗಿ ಹಾಡುವ ಹಾಡು ಕಿವಿಗೊಟ್ಟು ಕೇಳುತ್ತಾ ಪ್ರೀತಿಯ ಮತ್ತಲಿ ತೇಲಾಡಿ ಬಿಡು
ಕನವರಿಕೆಯ ಕದ ತೆರೆದು ಕರಿ ನೆರಳ ಪರದೆ ಸರಿಸಿ ನೋಡು ಜಗವನೊಮ್ಮೆ ಎಷ್ಟು ಸುಂದರ
ನೀ ಹೆಜ್ಜೆ ಇಟ್ಟಲ್ಲೆಲ್ಲಾ ಹೊನ್ನ ಸಾಲಿನ ಬೆಳೆಯು ಮಕಾನ ಎದೆ ಹೊಲದ ತುಂಬ ನಲಿದಾಡಿ ಬಿಡು
******