ಅರ್ಚನಾ ಯಳಬೇರು ಗಜಲ್

ಕಾವ್ಯ ಸಂಗಾತಿ

ಅರ್ಚನಾ ಯಳಬೇರು

ಗಜಲ್

ಪ್ರೀತಿಗಾಗಿ ಹಂಬಲಿಸುತ್ತಿದೆ ಮನ ಬಂದೊಮ್ಮೆ ಜೊತೆಯಾಗು
ವಿರಹದಲ್ಲಿ ಬಸವಳಿಯುತ್ತಿದೆ ಮನ ಬಂದೊಮ್ಮೆ ಜೊತೆಯಾಗು

ಮನದಲ್ಲಿ ಹೊತ್ತಿಹೆನು ನಿನ್ನೊಲವಿನ ಭಾವನೆಗಳ ಬಸಿರು
ಆಲಿಂಗನಕೆ ಕಾಯುತ್ತಿದೆ ಮನ ಬಂದೊಮ್ಮೆ ಜೊತೆಯಾಗು

ಕನಸು ಕಂಗಳು ಕೂಡ ಕಣ್ತುಂಬಿಕೊಳ್ಳುತ್ತಿವೆ ನಿನ್ನ ರೂಪ
ಮೌನದಲ್ಲಿ ಕನವರಿಸುತ್ತಿದೆ ಮನ ಬಂದೊಮ್ಮೆ ಜೊತೆಯಾಗು

ನನ್ನೆದೆಯ ಗೂಡಿನಲಿ ತುಂಬಿಹುದು ಪ್ರೇಮ ಪಕ್ಷಿಗಳ ಕಲರವ
ಪ್ರೀತಿ ಭಿಕ್ಷೆಯ ಬೇಡುತ್ತಿದೆ ಮನ ಬಂದೊಮ್ಮೆ ಜೊತೆಯಾಗು

ಅರಸಿಯಾಗಿಸು ‘ಅರ್ಚನ’ಳನ್ನು ನಿನ್ನ ಹೃದಯ ಮಂದಿರಕೆ
ಪ್ರೇಮಾಲಾಪ ಬಯಸುತ್ತಿದೆ ಮನ ಬಂದೊಮ್ಮೆ ಜೊತೆಯಾಗು


Leave a Reply

Back To Top