ಬರಹಗಾರ್ತಿ ವೈದೇಹಿ ಅವರಿಗೆ ೨೦೨೨ನೇ ಸಾಲಿನ ನೃಪತುಂಗ ಸಾಹಿತ್ಯ ಪ್ರಶಸ್ತಿ

ಇತರೆ

ಬರಹಗಾರ್ತಿ ವೈದೇಹಿ ಅವರಿಗೆ ೨೦೨೨ನೇ ಸಾಲಿನ ನೃಪತುಂಗ ಸಾಹಿತ್ಯ ಪ್ರಶಸ್ತಿ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಹಯೋಗದಲ್ಲಿ ನೀಡಲಾಗುತ್ತಿರುವ ೨೦೨೨ನೆಯ ಸಾಲಿನ ಪ್ರತಿಷ್ಟಿತ ʻಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೃಪತುಂಗ ಸಾಹಿತ್ಯ ಪ್ರಶಸ್ತಿʼ ಹಾಗೂ ʻಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಯೂರ ವರ್ಮ ಸಾಹಿತ್ಯ ಪ್ರಶಸ್ತಿʼಯನ್ನು ಪ್ರಕಟಿಸಲಾಗಿದೆ. ಹಿರಿಯ ಬರಹಗಾರರಾದ ಉಡುಪಿಯ ಶ್ರೀಮತಿ ವೈದೇಹಿಯವರನ್ನು ನೃಪತುಂಗ ಪ್ರಶಸ್ತಿಗೆ ಏಕಧ್ವನಿಯಲ್ಲಿ ಹಾಗೂ ಸರ್ವಾನುಮತದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೃಪತುಂಗ ಸಾಹಿತ್ಯ ಪ್ರಶಸ್ತಿಯು ೭ (ಏಳು) ಲಕ್ಷ ರೂ. ನಗದು ಹಾಗೂ ಪ್ರಮಾಣಪತ್ರದ ಜೊತೆ ಫಲತಾಂಬೂಲವನ್ನು ಒಳಗೊಂಡಿರುತ್ತದೆ. ಈ ಪ್ರಶಸ್ತಿಯು ಜ್ಞಾನಪೀಠ ಪ್ರಶಸ್ತಿಗೆ ಸರಿಸಮಾನವಾದ ಕನ್ನಡ ನಾಡಿನ ಪ್ರಶಸ್ತಿಯೆಂದು ಪ್ರಖ್ಯಾತವಾಗಿದೆ. ಈ ಬಾರಿ ಹಿರಿಯ ಬರಹಗಾರ್ತಿ ಶ್ರೀಮತಿ ವೈದೇಹಿ ಅವರನ್ನು ಈ ಮೌಲಿಕ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ವೈದೇಹಿ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಶ್ರೀಮತಿ ಜಾನಕಿ ಶ್ರೀನಿವಾಸಮೂರ್ತಿ ಅವರು ಕನ್ನಡದ ಪ್ರಮುಖ ಲೇಖಕಿಯರಲ್ಲಿ ಒಬ್ಬರಾಗಿದ್ದು, ಸಣ್ಣಕತೆ, ಕಾವ್ಯ, ಕಾದಂಬರಿ, ನಾಟಕ, ಮಕ್ಕಳ ಸಾಹಿತ್ಯ, ಅನುವಾದ ಸಾಹಿತ್ಯ, ಪ್ರಬಂಧ ಹೀಗೆ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಹುಲುಸಾದ ಕೃಷಿ ಮಾಡಿದ್ದಾರೆ. ಇವರ ಜೀವಮಾನದ ಸಾಧನೆಯನ್ನು ಪರಿಗಣಿಸಿ ಈ ಮೌಲಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ನೃಪತುಂಗ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಮೃದ್ಧವಾದ ಹಾಗೂ ಮೌಲಿಕವಾದ ಕೊಡುಗೆ ನೀಡಿದ ಬರಹಗಾರರೊಬ್ಬರನ್ನು ಈ ಪ್ರಶಸ್ತಿಗೆ ಪರಿಗಣಿಸಬೇಕು ಎನ್ನುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಭಾಗದ ಸಾಹಿತಿಗಳ ಸಾಧನೆಯನ್ನು ಪರಿಗಣನೆಗೆ ತೆಗೆದುಕೊಂಡು ಒಬ್ಬರನ್ನು ಆಯ್ಕೆ ಮಾಡಲಾಗುತ್ತದೆ. ಈ ಪ್ರಶಸ್ತಿಯನ್ನು ಯಾವುದೇ ಒಂದು ಕೃತಿಗೆ ನೀಡದೆ ಬರಹಗಾರರು ಕನ್ನಡ ಸಾಹಿತ್ಯಕ್ಕೆ ಕೊಟ್ಟಿರುವ ಸಮಗ್ರ ಕೊಡುಗೆಯನ್ನು ಪರಿಗಣಿಸುವ ಮೂಲಕ ನೀಡಲಾಗುತ್ತದೆ ಎಂದು ನಾಡೋಜ. ಡಾ.ಮಹೇಶ ಜೋಶಿ ತಿಳಿಸಿದರು.
ನೃಪತುಂಗ ಪ್ರಶಸ್ತಿಯ ಇತಿಹಾಸದಲ್ಲಿ ಈ ಬಾರಿ ಆಯ್ಕೆಗೊಂಡ ಶ್ರೀಮತಿ ವೈದೇಹಿ ಅವರು ಎರಡನೆಯ ಮಹಿಳಾ ಸಾಹಿತಿಯಾಗಿದ್ದಾರೆ. ೨೦೧೨ ರಲ್ಲಿ ಹಿರಿಯ ಬರಹಗಾರ್ತಿ ಸಾರಾ ಅಬುಬಕರ ಅವರನ್ನು ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಸಾಹಿತಿಯ ಸಮಗ್ರ ಸೇವೆಯನ್ನು ಪರಿಗಣಿಸಿ ನೃಪತುಂಗ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಈ ಪ್ರಶಸ್ತಿಯು ಕರ್ನಾಟಕದಲ್ಲಿಯೇ ಅತೀ ಹೆಚ್ಚು ನಗದು ಮೊತ್ತವನ್ನು ಒಳಗೊಂಡಿರುತ್ತದೆ ಎಂದು ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ. ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯ ಸಭೆಯಲ್ಲಿ ನೃಪತುಂಗ ಹಾಗೂ ಮಯೂರ ವರ್ಮ ಸಾಹಿತ್ಯ ಪ್ರಶಸ್ತಿಗಾಗಿ ಆಯ್ಕೆಯನ್ನು ಮಾಡಲಾಗಿದೆ. ೨೦೨೨ನೆಯ ಸಾಲಿನ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಯೂರ ವರ್ಮ ಸಾಹಿತ್ಯ ಪ್ರಶಸ್ತಿಗೆ ಐವರನ್ನು ಆಯ್ಕೆಮಾಡಲಾಗಿದೆ. ಅವರೆಂದರೆ ಗದಗ ಜಿಲ್ಲೆಯ ಗಜೇಂದ್ರಗಡದ ಶ್ರೀ ಹನುಮಂತ ಸೋಮನಕಟ್ಟಿ, ವಿಜಯನಗರ ಜಿಲ್ಲೆಯ ಕೊಟ್ಟೂರಿನ ಶ್ರೀ ಗುಡ್ಡಪ್ಪ ಬೆಟಗೇರಿ, ತುಮಕೂರು ಜಿಲ್ಲೆಯ ಡಾ. ಸತ್ಯಮಂಗಲ ಮಹಾದೇವ, ಗಡಿಭಾಗ ಕಾಸರಗೋಡಿನ ಶ್ರೀಮತಿ ವಿದ್ಯಾರಶ್ಮಿ ಪೆಲ್ಲತಡ್ಕ ಹಾಗೂ ಹಾಸನದ ಶ್ರೀ ಬೇಲೂರು ರಘುನಂದನ ಅವರನ್ನು ಆಯ್ಕೆಮಾಡಲಾಗಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಯೂರ ವರ್ಮ ಸಾಹಿತ್ಯ ಪ್ರಶಸ್ತಿಯು ೨೫,೦೦೧/- (ಇಪ್ಪತ್ತೈದು ಸಾವಿರದ ಒಂದು) ರೂ. ಹಾಗೂ ಪ್ರಮಾಣಪತ್ರದ ಜೊತೆ ಫಲತಾಂಬೂಲ ಒಳಗೊಂಡಿರುತ್ತದೆ . ಈ ಮಯೂರ ವರ್ಮ ಪ್ರಶಸ್ತಿಯು ೪೫ ವರ್ಷದೊಳಿಗ ೫ ಜನ ಪ್ರತಿಭಾವಂತ ಸಾಧಕರಿಗೆ ಪ್ರದಾನ ಮಾಡಲಾಗುತ್ತದೆ. ಪ್ರತಿವರ್ಷ ಪುರಸ್ಕೃತರ ಆಯ್ಕೆಗಾಗಿ ಕನ್ನಡ ಸಾಹಿತ್ಯ ಪರಿಷತ್ತು, ಪರಿಷತ್ತಿನ ಅಧ್ಯಕ್ಷರ ನೇತ್ರತ್ವದಲ್ಲಿ ೭ (ಏಳು) ಮಂದಿಯ ಆಯ್ಕೆ ಸಮಿತಿಯನ್ನು ರಚಿಸಿ ಕೂಲಂಕಶವಾಗಿ ಚರ್ಚಿಸಿ ಆಯ್ಕೆ ಮಾಡಲಾಗಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ನಿಕಟಪೂರ್ವ ನೃಪತುಂಗ ಪ್ರಶಸ್ತಿ ಪುರಸ್ಕೃತರಾದ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್, ಹಿರಿಯ ಸಾಹಿತಿ ಡಾ. ಎಸ್.ಆರ್.ಲೀಲಾ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ಶ್ರೀ ಸತೀಶ್, ಕ.ರಾ,ರ.ಸಾ.ಸಂಸ್ಥೆಯ ಕನ್ನಡ ಕ್ರಿಯಾ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಶ್ರೀ ವ.ಚ.ಚನ್ನೇಗೌಡ ಆಯ್ಕೆ ಸಮಿತಿ ಸಭೆಯಲ್ಲಿ ಉಪಸ್ಥಿತರಿದ್ದರು.


ಶ್ರೀನಾಥ ಜೆ.

One thought on “ಬರಹಗಾರ್ತಿ ವೈದೇಹಿ ಅವರಿಗೆ ೨೦೨೨ನೇ ಸಾಲಿನ ನೃಪತುಂಗ ಸಾಹಿತ್ಯ ಪ್ರಶಸ್ತಿ

  1. ಹಿರಿಯ ಸಾಹಿತಿ ವೈದೇಹಿ ತವರಿಗೆ ಅಭಿನಂದನೆಗಳು
    ಲೇಖನ ಪ್ರಸ್ತುತ ಪಡಿಸಿದ ಶ್ರೀನಾಥರವರಿಗೂ

Leave a Reply

Back To Top