ಪ್ರೊ ರಾಜನಂದಾ ಘಾರ್ಗಿಕವಿತೆ-ಮರೆಯದಾಗಿದೆ ಮನವು ನಿನ್ನನು

ಕಾವ್ಯ ಸಂಗಾತಿ

ಮರೆಯದಾಗಿದೆ ಮನವು ನಿನ್ನನು

ಪ್ರೊ ರಾಜನಂದಾ ಘಾರ್ಗಿ

ಮರೆಯದಾಗಿದೆ ಮನವು ನಿನ್ನನು
ಎದುರಿಗೆ ನಿಲ್ಲುವೆ ಮುಚ್ಚಲು ಕಣ್ಣನು

ನಿಟ್ಟುಸಿರ ಬಿಸಿಗೆ ನೀ ತಂದು ನೆಟ್ಟ
ಸೂಜಿಮಲ್ಲಿಗೆ ಬಾಡಿ ನೆಲ ಕಚ್ಚಿದೆ
ಬಂದು ಒಲವಿನ ಸುಧೆ ಹರಿಸು ನೀನು

ದಿನ ದಿನವೂ ಹೆಪ್ಪುಗಟ್ಟುತಿದೆ
ಹನಿ ಹನಿ ರಕ್ತ ಹೃದಯದಾಳದಲಿ
ನೀಡು ಬಾ ಮನಕೆ ಸಾಂತ್ವನ ನೀನು

ಕನಸುಗಳು ಬಣ್ಣ ಕಳೆದುಕೊಂಡು
ಮಂಕಾಗಿ ಮೂಲೆ ಸೇರುತಲಿವೆ
ಆಡು ಬಾ ಬಣ್ಣದೋಕುಳಿ ನೀನು

ಭಾವನೆಗಳು ರೆಕ್ಕೆ ಮುರಿದುಕೊಂಡು
ಹಾರಲಾಗದೇ ಉರುಳತಿವೆ ನರಳುತಿವೆ
ಎತ್ತಿ ಅವುಗಳ ಆಗಸಕೆ ತೇಲಿ ಬಿಡು ನೀನು

ಮರೆಯದಾಗಿದೆ ಮನವು ನಿನ್ನನು
ಮನ ಮಂದಿರದ ಶಾಶ್ವತ ಮೂರ್ತಿ ನೀನು


Leave a Reply

Back To Top