ಹಮೀದಾ ಬೇಗಂ ದೇಸಾಯಿ-ಮರೆಯದಾಗಿದೆ ಮನವು ನಿನ್ನನು…

ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿ

ಮರೆಯದಾಗಿದೆ ಮನವು ನಿನ್ನನು

ಮೊದಲ ಮಳೆಯಲಿ ಮಿಂದ
ಮಣ್ಣಿನ ಘಮಲು
ನೆನಪಿಸುತಿದೆ ಕಾಡುತ ನನ್ನ
ಮರೆಯದಾಗಿದೆ ಮನವು ನಿನ್ನನು..

ಚಿಗುರಿದ ಮಾಮರದ ಹಸಿರು
ತುಂಬುತಲಿ ಬಿಸಿಯುಸಿರು
ನೆನಪಿಸುತಿದೆ ನಗುತ ನನ್ನ
ಮರೆಯದಾಗಿದೆ ಮನವು ನಿನ್ನನು..

ಇಂದ್ರಚಾಪದ ರಂಗು
ಹಿಡಿಸುತಲಿ ಗುಂಗು
ನೆನಪಿಸುತಿದೆ ಬಾಗುತ ನನ್ನ
ಮರೆಯದಾಗಿದೆ ಮನವು ನಿನ್ನನು…

ಮುಸ್ಸಂಜೆಯ ಕೆಂಬಣ್ಣ
ಆಡುತಲಿ ಓಕುಳಿಯಾಟ
ನೆನಪಿಸುತಿದೆ ಅಣಕಿಸುತ ನನ್ನ
ಮರೆಯದಾಗಿದೆ ಮನವು ನಿನ್ನನು…

ನೀ ಬರೆದ ಒಲವಿನೋಲೆಯು
ಮಾಸಿದೆ ಮಸುಕಾಗಿ
ಕಣ್ಣ ಹನಿಗಳುದುರಿ ಒಣಗಿ
ಮರೆಯದಾಗಿದೆ ಮನವು ನಿನ್ನನು…


One thought on “ಹಮೀದಾ ಬೇಗಂ ದೇಸಾಯಿ-ಮರೆಯದಾಗಿದೆ ಮನವು ನಿನ್ನನು…

Leave a Reply

Back To Top