ಈಶ್ವರ ಜಿ ಸಂಪಗಾವಿ-ಗಜಲ್

ಕಾವ್ಯ ಸಂಗಾತಿ

ಈಶ್ವರ ಜಿ ಸಂಪಗಾವಿ

ಗಜಲ್

ಪರಾಗ ಸ್ಪರ್ಶಕೆ ಹಂಬಲಿಸಿ ನಿಂದೆ ತಿಳಿಗಾಳಿಯಂತೆ ನನಗಾಗಿ ಸಖಿ
ಪುಷ್ಪಗಳ ಮಕರಂದ ಹೀರುತ ಬಂದೆ ದುಂಬಿಯಂತೆ ನಿನಗಾಗಿ ಸಖಿ

ರಾಗ ರಂಜನಿಯ ಆಲಾಪದಲಿ ಮಧುರ ಗಾನವ ಸುರಿಸಿದೆಯಾ
ಬಾಹು ಬಂಧನದ ಸವಿ ಉಣಿಸಿದೆ ಪ್ರೇಮಿಯಂತೆ ತನಗಾಗಿ ಸಖಿ

ಕನಸುಗಳ ಕಾಮನ ಬಿಲ್ಲು ಹಲಬಗೆ ಚಿತ್ತಾರ ಬಿಡಿಸಿದೆ ಕಂಡೆಯಾ
ಮನಸು ಮುದದಲಿ ಸಾರ್ಥಕ ಸಾಗರ ಅಬ್ಬರಿಸಿದೆ ಎನಗಾಗಿ ಸಖಿ

ನವಿರು ಭಾವಗಳ ಜೋಕಾಲಿಯಲಿ ಜೀಕುತಿದೆ ತನು ಕಂಪಿಸುತಲಿ
ಭವದ ಗೆಲುವೆಲ್ಲ ಸಾಧಿಸುತ ಬೀಗಿದೆ ಕಲಿಯಂತೆ ಧಣಿಗಾಗಿ ಸಖಿ

ಪ್ರೇಮದ ಉಬ್ಬರ ಇಳಿತಗಳು ಭೋರ್ಗರೆಯುತಿವೆ ಬಾಳ ಸಾಗರದಿ
ದೇವೇಶನ ಅನುರಾಗದಲೆಗಳ ಕಂಡಿದೆ ಜೇನಿನಂತೆ ಹನಿಗಾಗಿ ಸಖಿ.


Leave a Reply

Back To Top