ಕಾವ್ಯ ಸಂಗಾತಿ
ಗಜಲ್
ನಯನ. ಜಿ. ಎಸ್.
ಹನಿ ತೊರೆದಿಹ ಚಕ್ಷುಗಳಿಗೆ ಆಸರೆಯು ನೀನು ಮಿನುಗಬೇಡ ನಕ್ಷತ್ರವಾಗಿ
ಭಾವಗುಚ್ಛದ ಅಂದಕೆ ಶುಭ್ರವರ್ಣವು ಉಸಿರು ಮೂಡಬೇಡ ಮಳೆಬಿಲ್ಲಾಗಿ
ಹುಚ್ಚು ಮನದ ಅಳಲಿಗೆ ಗಮ್ಯತೆಯ ದಿಟ್ಟ ಮಜಲುಗಳೇ ತ್ವರಿತ ಸರಹದ್ದು
ಒಸರುತಿಹ ಚೇತನದಲಿ ತ್ಯಕ್ತತನಗಳು ಅಗಣಿತ ಆವರಿಸಬೇಡ ನೆನಪಾಗಿ
ಎಣಿಸಿ ಆಶಿಸಿದಂತಲ್ಲ ಬಾಳ್ವೆಯ ಚಕ್ಕಡಿ ಅನುಭವಗಳು ಹತ್ತಾರು ಕೇಳು ಇಲ್ಲಿ
ವಿಜಯದ ಕಥನಕೆ ಛಲಗಳೇ ಜೀವಾಳ ಕಂದಳಿಸಬೇಡ ಕವಲುದಾರಿಯಾಗಿ
ಮನದ ಮೌನಕೆ ಸಾರಗಳು ಬಹಳ ಅಧರಗಳ ಸೀಳಿದರಷ್ಟೇ ಮಾಧುರ್ಯತೆ
ಭವ್ಯವಾಗಿಹ ಭಾವದಿ ಮೇಲೇರುತಿದೆ ಸಾರ್ಥಕ್ಯ ಸುಳಿಯಬೇಡ ತುಮುಲವಾಗಿ
ದೂರ ತೀರದಿ ಎಸಕವಾಗುತಿಹ ಸ್ವಪ್ನದ ಚೆಲುವಲಿ ಮೋಹವಿಲ್ಲ ನಯನಾಳಿಗೆ
ನನಸುಗಳ ಪಾರುಪತ್ಯದಿ ಹುಲುಸಾಗುತಿದೆ ಹಾಸ ಕಸಿಯಬೇಡ ಕನವರಿಕೆಯಾಗಿ