ಸಿದ್ದರಾಮ ಕೂಡ್ಲಿಗಿ

ವ್ಯಾಲಂಟೈನ್ ವಿಶೇಷ

ಸಿದ್ಧರಾಮ ಕೂಡ್ಲಿಗಿ

ಪ್ರೇಮ-ಕಡಲು

ಅವಳೊಂದು ಕಡಲು
ನನ್ನೆದೆಯೊಳಗೆ ಸದಾ
ಭೋರ್ಗರೆಯುತ್ತಲೇ ಇರುತ್ತಾಳೆ
ಅವಳೋ……
ಅಲೆಗಳಂತೆ
ಕೈಚಾಚಿ ಬರಸೆಳೆಯುತ್ತಾಳೆ
ಒಲವಿನ ಒಡಲೊಳಗೆ
ಕರೆದೊಯ್ದು
ಮುತ್ತುಗಳನಾಯ್ದು ಕೊಡುತ್ತಾಳೆ
ಆಗಾಗ ಭಾವಗಳ ಬಿಸಿಗೆ
ಕುದಿದು ಮೇಘಗಳಾಗಿ
ತನ್ನೊಂದಿಗೆ
ನನ್ನನೂ ಸೆಳೆದು
ಬೆಟ್ಟ, ಕಣಿವೆ
ಕಾಡು, ಮೇಡುಗಳಲ್ಲಿ
ಕುಣಿಕುಣಿದು
ಅನಂತತೆಯ ಕಮರಿಯಲ್ಲಿ
ಜೊತೆಯಾಗಿ ಧುಮುಕುತ್ತಾಳೆ
ಚೈತನ್ಯದ ಚಿಲುಮೆಯಾಗುತ್ತಾಳೆ
ಸುತ್ತಿ, ಬಾಗಿ, ಬಳುಕಿ
ಮತ್ತೆ ಕಡಲಾಗಿ
ನನ್ನೆದೆಯೊಳಗೆ ಭೋರ್ಗರೆಯುತ್ತಾಳೆ
ನಾನೋ……….
ಅವಳೊಲುಮೆಯಲಿ
ಒಂದು ಹನಿಯಾಗಿ
ಅವಳೊಂದಿಗೊಂದಾಗಿ
ಕಡಲೇ ನಾನಾಗಿ
ನಾನೇ ಕಡಲಾಗಿ
ನಾನೆಂಬುದನಳಿದ
ಎಲ್ಲವೂ ನಾನಾದ
ಸಂತಸದೊಳೊಂದಾಗುತ್ತೇನೆ
ಕಡಲಿನೊಳಗಿನ ಕಡಲ
ಅಗಾಧತೆಯ ಕಾಣುತ್ತೇನೆ
ಅವಳೊಂದಿಗೆ
ಪ್ರೇಮವೇ ನಾನಾಗುತ್ತೇನೆ


Leave a Reply

Back To Top