ವ್ಯಾಲಂಟೈನ್ ವಿಶೇಷ
ಮಂಡಲಗಿರಿ ಪ್ರಸನ್ನ
ಬಿಕ್ಕಿ ಹೋದ ಪ್ರೀತಿ
ಪ್ರೀತಿಯೆಂದರೆ ನೀನು ತೋರಿದ್ದು:
ಆಕಾಶ, ಮೋಡ, ನಕ್ಷತ್ರಗಳನಲ್ಲ
ಒಡಲ ಮೊರೆತ, ಬಿರಿದ ಬದುಕು
ಬುಸುಗುಡುತ ಆರ್ಭಟಿಸುವ ತೆರೆ!
ಪ್ರೀತಿಯೆಂದರೆ ನೀನು ಹೇಳಿದ್ದು:
ಅವ್ಯಕ್ತ ಭಾವಗಳ ವೇದನೆ
ತಳಮಳ ಸಂಕಟ ಮೌನ ಮಾತು
ಅದುಮಿಡಲಾಗದ ಕ್ಷಣ!
ಪ್ರೀತಿಯೆಂದರೆ ನೀನು ಕೊಟ್ಟದ್ದು:
ಸವಿಯಾದ ಒಂದು ಮುತ್ತು
ಹತಾಶೆ, ನಗುವಿಲ್ಲದ ರೆಪ್ಪೆ
ನೂರು ಬೆರಗುಗಳ ನೋಟ!
ಪ್ರೀತಿಯೆಂದರೆ ನೀನು ಬಿಟ್ಟದ್ದು:
ನೋವುಗಳ ನೆನಪ ರಾಶಿ
ಕಡು ಬೇಸಗೆಯ ಸೂರ್ಯ
ನೆಲದ ಘಮಲ ನಾಕು ಹನಿ!