ಅರ್ಚನಾ ಯಳಬೇರು

ವ್ಯಾಲಂಟೈನ್ ವಿಶೇಷ

ಅರ್ಚನಾ ಯಳಬೇರು

ಗಜಲ್

ಹೃದಯ ಸಮುದ್ರದಿ ಹುಚ್ಚೆದ್ದ ಮಿಡಿತಗಳು ನಿನ್ನನ್ನೇ ಪ್ರೀತಿಸುತಿವೆ
ನನ್ನೆದೆಯ ಅವನಿಲಿ ಓಘಿಸುವ ಭಾವಗಳು ನಿನ್ನನ್ನೇ ಪ್ರೀತಿಸುತಿವೆ

ಜ್ವಲಿಸುವ ವಿರಹಾಗ್ನಿಯಲಿ ಬೆಂದು ಕರಕಲಾಗಿದೆ ಎನ್ನ ಮನವು
ಮೌನ ಗರ್ಭವು ಪ್ರಸವಿಸಿದ ನಲ್ನುಡಿಗಳು ನಿನ್ನನ್ನೇ ಪ್ರೀತಿಸುತಿವೆ

ಚುಚ್ಚುವ ವ್ಯಥೆಗಳ ಮುಳ್ಳುಗಳು ಹರಿಸಿವೆ ಕಣ್ ಪನಿಗಳಲಿ ನೆತ್ತರು
ಭವ್ಯತೆಯ ಬಸಿರಲ್ಲಿ ಹಸಿರಾದ ತುಡಿತಗಳು ನಿನ್ನನ್ನೇ ಪ್ರೀತಿಸುತಿವೆ

ಬಿಕಾರಿಯಾಗುತಿದೆ ಅಸುವು ಪ್ರತಿದಿನವು ಒಲವ ಭಿಕ್ಷೆಯ ಬೇಡುತಲಿ
ಅಧರಗಳ ಉದರದಿ ಜನಿತ ಚುಂಬಕಗಳು ನಿನ್ನನ್ನೇ ಪ್ರೀತಿಸುತಿವೆ

ದಿಕ್ಸೂಚಿಯಿಲ್ಲದ ಅರ್ಚನಾಳ ಬಾಳ ನೌಕೆಗೆ ನಾವಿಕನಾಗು ಗೆಳೆಯ
ಕಂಗಳಲಿ ರಚಿತ ಪ್ರೇಮಸೌಧದ ನೀಲ ನಕ್ಷೆಗಳು ನಿನ್ನನ್ನೇ ಪ್ರೀತಿಸುತಿವೆ


One thought on “ಅರ್ಚನಾ ಯಳಬೇರು

Leave a Reply

Back To Top