ವ್ಯಾಲಂಟೈನ್ ವಿಶೇಷ
ಅರುಣಾರಾವ್
ಹೊಂಗನಸು
: ಒಂದಿರುಳು ನಿದ್ರೆಯಲ್ಲಿ ಹೊಂಗನಸ ಕಾಣಲು
ನೆರಳಿನಾಕಾರವೊಂದು ಒಡಮೂಡಿತು
ಬಳಿಸಾರಿದಾ ನೆರಳು ಸನಿಹದಿ ಕುಳಿತಾಗ
ಬಾಯ್ಗೆಟ್ಟು ಬೆರೆಗಾಯಿತು ಮೂಕ ಮನಸು
ಮುಂಗುರುಳ ನೇವರಿಸಿ ಹೂ ಮುತ್ತ ಹಣೆಗಿಟ್ಟು
ಗಲ್ಲ ಸವರತೊಡಗಿತು ಅದರ ನೀಳ ಬೆರಳು
ಬಾ ನಲ್ಲ ಪ್ರಾಣಸಖ ಜೊತೆಯಾಗಿ ನಲಿಯೋಣ
ಪ್ರೇಮಲೋಕದಿ ವಿಹರಿಸುವ ಹಗಲು ಇರುಳು
ಸವಿಗನಸ ಕಾಣುತ್ತಾ ಚಿರಸುಖವ ಈಂಟುತ್ತಾ
ಮರೆಯೋಣ ಈ ಜಗ ಜೀವನದ ಜಂಜಾಟ
ಮಧುಮಂಚದ ತೂಗುಯ್ಯಾಲೆಯಲ್ಲಿ ಕುಳಿತು
ಆಡೋಣ ಪ್ರೇಮದ ಪಾಲುದಾರಿಕೆಯ ಆಟ
ನೆರಳೀಗ ಸರಿಯತೊಡಗಿತು ಮುಂದೆ ಮುಂದೆ ಮುಗ್ಧಳಾಗಿ ಹಿಂಬಾಲಿಸುತಲೆ ನಾ ಹೊರಟೆ
ಮೋಡಕಿಂತ ಹಗುರಾಗಿ ಬಾನೆಲ್ಲ ತೇಲಾಡಿ
ಸುಖಿಯಾರು ತನಗಿಂತೆನುತ ಬೀಗಿ ನಿಂತೆ
ನೋಡ ನೋಡುತ ಕರಗತೊಡಗಿತದೋ
ಎನ್ನ ಮನ ಗೆದ್ದ ಆ ನೆರಳಿನಾಕಾರ
ಹಿಡಿದಿಟ್ಟು ಕೊಳಬೇಕೆಂಬಾತುರದಿ ಜಿಗಿಯೆ
ತಲ್ಪದಿಂದ ಬಿದ್ದು ಹಣಿಯ ಬೋರೆ ವಿಕಾರ
Super
ಚೆಂದದ ಕವನ
Loved it
ಸೊಗಸಾದ ಕವನ