ಕನ್ನಡಿಗರ ನಿತ್ಯೋತ್ಸವದ ಕವಿ ಕೆ. ಎಸ್. ನಿಸಾರ ಅಹ್ಮದ್

ನೆನಪು

ಕನ್ನಡಿಗರ ನಿತ್ಯೋತ್ಸವದ ಕವಿ

ಕೆ. ಎಸ್. ನಿಸಾರ ಅಹ್ಮದ್

” ಜೋಗದ ಸಿರಿಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ…ನಿತ್ಯೋತ್ಸವ ತಾಯೆ ನಿತ್ಯೋತ್ಸವ‌… ” ಎಂಬ ಹಾಡಿನ ಮೂಲಕ ಕನ್ನಡಿಗರ ಅಚ್ಚುಮೆಚ್ಚಿನ ಕವಿಯೆನಿಸಿದ ” ಕೊಕ್ಕರೆಹೊಸಳ್ಳಿ ಶೇಖಹೈದರ್ ನಿಸಾರ್ ಅಹ್ಮದ ” ಅವರು ೧೯೩೬ ರ ಫೆಬ್ರವರಿ ೫ ರಂದು ದೇವನಹಳ್ಳಿಯಲಿ ಜನಿಸಿದರು. ವಿದ್ಯಾಭ್ಯಾಸದ ಕಾಲಕ್ಕೆ ರಾಜರತ್ನಂ, ಎಲ್. ಗುಂಡಪ್ಪ, ಎಂ. ವೀ. ಸೀತಾರಾಮಯ್ಯ ಮೊದಲಾದವರ ಪ್ರಭಾವ, ಪ್ರೇರಣೆ ಪಡೆದು ಕನ್ನಡ ಕಾವ್ಯದಲ್ಲಿ ಆಸಕ್ತಿ ತಳೆದು , ಪದವಿ ಗಳಿಸಿದ ನಂತರ ೧೯೯೪ ರವರೆಗೆ ಬೆಂಗಳೂರು ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತ ಕನ್ನಡಿಗರಿಗೆ ೨೧ ಕವನ ಸಂಕಲನಗಳ ಮೂಲಕ ತಮ್ಮ ಕಾವ್ಯದ ಸವಿಯುಣಬಡಿಸಿದ ಅವರು ಅಪ್ಪಟ ಜಾತ್ಯತೀತ ನಿಲುವಿನವರಾಗಿ ಎಲ್ಲರ ಸಮಾನ ಪ್ರೀತಿ ಗಳಿಸಿದ್ದರು.
ಮನಸು ಗಾಂಧಿಬಜಾರು, ಸಂಜೆ ಐದರ ಮಳೆ, ನೆನೆದವರ ಮನದಲ್ಲಿ, ನಾನೆಂಬ ಪರಕೀಯ, ಆಕಾಶಕ್ಕೆ ಸರಹದ್ದುಗಳಿಲ್ಲ ಮೊದಲಾದ ಕವನಸಂಕಲನಗಳ ಮೂಲಕ ಅವರು ಕನ್ನಡ ಕಾವ್ಯಪ್ರಿಯರ ಮನಸೆಳೆದರು. ” ಕುರಿಗಳು ಸಾರ್ ಕುರಿಗಳು” ಎಂದು ಅವರು ನಮ್ಮ ಪ್ರಜಾಸತ್ತಾತ್ಮಕ ವ್ಯವಸ್ಥೆಗಳನ್ನು ವಿಡಂಬಿಸಿದ ಕವನ ಬಹಳ ಜನಪ್ರಿಯವಾದುದು. ಸುಮಾರು ೬೦ ಕೃತಿಗಳನ್ನು ನೀಡಿದ ಅವರ ೨೧ ಕವನ ಸಂಕಲನಗಳಲ್ಲದೆ, ೧೪ ವಿಚಾರ ವಿಮರ್ಶಾ ಕೃತಿಗಳು, ೫ ಮಕ್ಕಳ ಸಾಹಿತ್ಯ ಕೃತಿಗಳು, ೧೩ ಸಂಪಾದನಾ ಗ್ರಂಥಗಳು , ೫ ಅನುವಾದ ಕೃತಿಗಳು ಪ್ರಕಟವಾಗಿವೆ. ” ನಿತ್ಯೋತ್ಸವ ” ಹಾಡಿನ ಅಪಾರ ಜನಪ್ರಿಯತೆ ನಂತರ ಅವರ ಹಾಡುಗಳನ್ನೊಳಗೊಂಡ ೧೪ ಧ್ವನಿಸುರುಳಿಗಳು ಹೊರಬಂದಿವೆ. ಷೇಕ್ಸ್‌ಪಿಯರ್ ನ ನಾಟಕಗಳನ್ನು ಅನುವಾದಿಸಿ ರಂಗಕ್ಕೆ ತಂದಿದ್ದಾರೆ.
೨೦೦೬ ರಲ್ಲಿ ಶಿವಮೊಗ್ಗದಲ್ಲಿ ನಡೆದ ೭೩ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಅವರಿಗೆ, ಪದ್ಮಶ್ರೀ, ನಾಡೋಜ, ಪಂಪ, ಮಾಸ್ತಿ ಪ್ರಶಸ್ತಿಗಳ ಗೌರವ, ಎನ್ ಸಿ ಇಆರ್ ಟಿಪ್ಪು ರಾಷ್ಟ್ರೀಯ ಬಹುಮಾನ, ಸೋವಿಯತ್ ಲ್ಯಾಂಡ್ ಪುರಸ್ಕಾರ ಮೊದಲಾದವು ದೊರಕಿವೆ.
ಸಂವೇದನಾಶೀಲ ಜನಪ್ರೀತಿಯ ಕವಿ ನಿಸಾರಹ್ಮದ ಅವರು ೨೦೨೦ ರ ಮೇ ೩ ರಂದು ನಿಧನ ಹೊಂದಿದರು.

—————————


ಎಲ್. ಎಸ್. ಶಾಸ್ತ್ರಿ

Leave a Reply

Back To Top