ಶಂಕರಾನಂದ ಹೆಬ್ಬಾಳಕವಿತೆ-ಅಮಾಸನಿಗೊಂದು ಗಝಲ್

ಕಾವ್ಯ ಸಂಗಾತಿ

ಅಮಾಸನಿಗೊಂದು ಗಝಲ್

ಶಂಕರಾನಂದ ಹೆಬ್ಬಾಳ

ಬಡತನ ಬೆನ್ನಿಗಂಟಿಸಿ ಹುಲಿಯಾಸ
ಹಾಕಿದೆಯಾ ಅಮಾಸ
ಅನಾಥನಾಗಿ ಕುರಿಯಯ್ಯನ ಜೊತೆ
ಕೂಡಿದೆಯಾ ಅಮಾಸ

ದಿಕ್ಕಿಲ್ಲದವರಿಗೆ ದಾರಿದಿಕ್ಕಾಗಿ
ಬಂದಿರುವೆಯಲ್ಲ ದೇವರೆ
ಊರ ಹಬ್ಬದಿ ಗೌಡತಿಯ ಮನ
ಸೆಳೆದೆಯಾ ಅಮಾಸ

ಕುಣಿಯುವ ತಾಳಕ್ಕೆ ತಕ್ಕಂತೆ ಹೆಜ್ಜೆಯ
ಇಟ್ಟಿರುವೆಯಲ್ಲ
ಬಂಜೆಯ ಹೃದಯವನು ನಿನ್ನತ್ತ
ಎಳೆದೆಯಾ ಅಮಾಸ

ಒಡಲಿಗೆ ಹಿಟ್ಟಿಲ್ಲದಿದ್ದರೂ ನಗುನಗುತ
ಬಾಳಿದೆಯಲ್ಲ
ಜಾತ್ರೆ ಉತ್ಸವಗಳಲ್ಲೂ ಹಾಜರಿ
ತೋರಿದೆಯಾ ಅಮಾಸ

ಉಂಡಾಡುವ ವಯಸಲ್ಲಿ ಬಣ್ಣಬಳಿದು
ಕುಣಿದೆಯಲ್ಲ
ಅಭಿನವನ ಸಾಲುಗಳಲಿ ನೆನಪಾಗಿ
ಹರಿದೆಯಾ ಅಮಾಸ


One thought on “ಶಂಕರಾನಂದ ಹೆಬ್ಬಾಳಕವಿತೆ-ಅಮಾಸನಿಗೊಂದು ಗಝಲ್

Leave a Reply

Back To Top