ರಶ್ಮಿ ಹೆಗಡೆ,ಮುಂಬೈ ಲೇಖನ-ಗಾಳಿಸುದ್ದಿ

ವಿಶೇಷ ಲೇಖನ

ಗಾಳಿಸುದ್ದಿ

ರಶ್ಮಿ ಹೆಗಡೆ,ಮುಂಬೈ

ಅದೆಷ್ಟೋ ಬಾರಿ ಒಬ್ಬ ವ್ಯಕ್ತಿಯ ವೈಯಕ್ತಿಕ ವಿಷಯಗಳು ವಾಸ್ತವಿಕತೆಯನ್ನು ಮೀರಿ ವಿಧವಿಧ ರೂಪ,ಬಣ್ಣಗಳನ್ನು ತಾಳಿ ಗಾಳಿಮಾತಾಗಿ ಎಲ್ಲೆಡೆ ಹಬ್ಬುತ್ತದೆ.  ಸುಳ್ಳು ವದಂತಿಯನ್ನು ಸೃಷ್ಟಿಸಿ,ಹಬ್ಬಿಸುವುದು ಎಷ್ಟು ಅಪರಾಧವೋ ಅದಕ್ಕಿಂತ ದೊಡ್ಡ ಅಪರಾಧ ಹಿಂದೆ ಮುಂದೆ ಯೋಚಿಸದೆ ಆ ವದಂತಿಯನ್ನು ನಂಬಿ ಮತ್ತೆ ಇನ್ನಾವುದೋ ಕಿವಿಗೆ ಅದನ್ನು ಸಾಗಿಸುವುದು. ಚಾಡಿ ಎನ್ನುವ ಕೆಟ್ಟ ಬುದ್ಧಿಯೂ ಇದರ ಇನ್ನೊಂದು ಮುಖ ಎಂದರೂ ತಪ್ಪಿಲ್ಲ. ಇನ್ನೊಬ್ಬರ ವೈಯಕ್ತಿಕ ಜೀವನದ ಬಗೆಗಿನ ಅತಿಯಾದ ಆಸಕ್ತಿ ನಮ್ಮ ಸರ್ವಾಂಗೀಣ ವಿಕಾಸವನ್ನು ಅನೇಕ ರೀತಿಯಿಂದ ಕುಂಠಿತಗೊಳಿಸಬಲ್ಲದು. ನಮ್ಮ ಬೆಲೆ ಬಾಳುವ ಸಮಯವೂ ವ್ಯರ್ಥ.

ಒಮ್ಮೆ ಗ್ರೀಕ್ ತತ್ವಜ್ಞಾನಿ ಸಾಕ್ರಟೀಸ್ ತಮ್ಮ ದಿನನಿತ್ಯದ ಕಾರ್ಯದಲ್ಲಿ ನಿರತರಾಗಿದ್ದರು. ಅಲ್ಲಿ ಬಂದ ಆತನ ಅನುಯಾಯಿಯೊಬ್ಬ ,”ಗುರುಗಳೇ,ನಿಮ್ಮ ಆತ್ಮೀಯ ಸ್ನೇಹಿತನ ಬಗ್ಗೆ ಏನೋ ಒಂದು ಕುತೂಹಲಕಾರಿ ಸುದ್ದಿ ಹೇಳುವುದಿದೆ,ಬನ್ನಿ ಹೇಳುತ್ತೇನೆ”ಎಂದ. 

ಆತನ ಮಾತನ್ನು ಅರ್ಧಕ್ಕೇ ತಡೆದ ಸಾಕೃಟೀಸ್, “ತಾಳು! ಆ ಸುದ್ದಿ ಯಾರ ಕುರಿತಾದ್ದೇ ಆದರೂ,ನಿನ್ನ ಮಾತನ್ನು ಮುಂದುವರೆಸುವುದಕ್ಕೂ ಮುಂಚೆ ನನ್ನ ಪ್ರಶ್ನೆಗಳಿಗೆ ಉತ್ತರಿಸು. ತಂದ ಸುದ್ದಿಯನ್ನು ಕಣ್ಮುಚ್ಚಿ ನಂಬುವವ ನಾನಲ್ಲ. ನನ್ನ ಸ್ನೇಹಿತನಿಗೆ ನನ್ನಿಂದೇನಾದರೂ ಸಹಾಯವಾಗಬೇಕೇ? ಆತ ಕ್ಷೇಮವಾಗಿರುವ ತಾನೇ?”ಎಂದರು. 

“ಹೌದು,ಆತ ಕ್ಷೇಮವಾಗಿದ್ದಾನೆ. ಇದು ಬೇರೆ ವಿಷಯಕ್ಕೆ ಸಂಬಂಧಿಸಿದ್ದು”ಎಂದ. 

“ಅದ್ಯಾವ ವಿಷಯವೇ ಇದ್ದರೂ, ನೀ ತಂದ ಸುದ್ದಿ ನೂರಕ್ಕೆ ನೂರು ಸತ್ಯವೇ ಹೇಳು?”ಎಂದ.

“ಆ ಸುದ್ದಿ ಸತ್ಯವೋ ಸುಳ್ಳೋ ನನಗೆ ಗೊತ್ತಿಲ್ಲ. ಯಾರೋ ಒಬ್ಬ ವ್ಯಕ್ತಿಯ ಬಾಯಲ್ಲಿ ಇದನ್ನು ಕೇಳಿದೆ ಅಷ್ಟೇ ” ಎಂದು ಮೆಲು ದನಿಯಲ್ಲಿ ನುಡಿದ.

“ಹಾಗಾದರೆ ನೀನು ತಂದಿದ್ದು ಸತ್ವವಿರದ,ಸತ್ಯ ಹಾಗೂ ವಾಸ್ತವದಿಂದ ದೂರವಿರುವ ಗಾಳಿಸುದ್ದಿ ಎಂದಾಯಿತು. ಇನ್ನು ನನ್ನ ಎರೆಡನೆಯ ಪ್ರಶ್ನೆ! ಈ ಸುದ್ದಿಯು ನನ್ನ ಸ್ನೇಹಿತನ ಬಗ್ಗೆ ಋಣಾತ್ಮಕ ಪರಿಣಾಮ ಬೀರುವಂಥದ್ದೋ ಅಥವಾ ಧನಾತ್ಮಕವಾಗೋ ?”ಎಂದು ಕೇಳಿದ ಸಾಕ್ರಟೀಸ್.

“ಆತನ ದೋಷವನ್ನು ಎತ್ತಿ ಹಿಡಿಯುವ ಮಾತುಗಳು ಅವು. ಸಹಜವಾಗೇ ಋಣಾತ್ಮಕವಾದದ್ದು”ಎಂದು ತಲೆ ತಗ್ಗಿಸಿದ.

“ನೀ ಹೇಳುವ ವಿಷಯ ಒಬ್ಬ ವ್ಯಕ್ತಿಯ ದೋಷವನ್ನು ಟೀಕಿಸುವಂಥದ್ದು ಎಂದಾಯಿತು. ಬಹುಶಃ ಆತನ ಗಮನಕ್ಕೂ ಬಂದಿರದ ಈ ಸುಳ್ಳು ವಿಷಯ ಹೀಗೆ ಜನರ ನಡುವೆ ಹಬ್ಬುತ್ತಿರುವ ಬಗ್ಗೆ ಆತನಿಗೆ ತಿಳಿದರೆ ಯಾವ ಅನರ್ಥವಾದೀತು ಎಂಬ ಯೋಚನೆ ಇದೆಯೇ?” ಎಂದು ಮನ ನೊಂದುಕೊಂಡ ಸಾಕ್ರಟೀಸ್.

” ಇನ್ನು ನನ್ನ ಮೂರನೆಯ ಪ್ರಶ್ನೆ! ನೀ ತಂದ ಸುದ್ದಿಯಿಂದ ನಾನೇನಾದರೂ ಒಳ್ಳೆಯದನ್ನು ಕಲಿಯಬಲ್ಲೆನೆ ಅಥವಾ ಇದರಿಂದ ನನಗೇನಾದರೂ ಒಳಿತುಂಟಾಗುವುದೇ?” ಎಂದು ಕೇಳಿದ. 

” ಇಲ್ಲ,ಇದರಿಂದ ನಿಮ್ಮ ಜೀವನಕ್ಕೆ ಏನೂ ಒಳ್ಳೆಯದಾಗಲಾರದು. ಯಾವ ಲೋಕೋದ್ಧಾರಕ   ಕಲಿಕೆಯೂ ಈ ವಿಷಯದಲ್ಲಿಲ್ಲ “ಎಂದು ಮುಖ ಸಣ್ಣ ಮಾಡಿದ.

“ನೀ ಹೇಳ ಬಯಸುವ ವಿಷಯದಿಂದ ಯಾರಿಗೂ ಒಳಿತುಂಟಾಗುವದಿಲ್ಲ;ಸತ್ಯವಾಗಲೀ, ಪಾರದರ್ಶಕತೆಯಾಗಲೀ ಇದರಲ್ಲಿ ಇಲ್ಲವೆಂದಮೇಲೆ ಇಂತಹ ಅರ್ಥವಿರದ ವಿಷಯವನ್ನು ಇನ್ನು ನನ್ನೆದುರು ಪ್ರಸ್ತಾಪಿಸಲೇ ಬೇಡ. ನನಗೆ ಸಂಬಂಧವಿರದ ವಿಷಯವಿದು. ನನ್ನ ಸ್ನೇಹಿತನ ಹೆಸರಿಗೂ ಕೆಸರೆರೆಚಬೇಡ” ಎಂದು ತಮ್ಮ ಕಾರ್ಯದಲ್ಲಿ ಮಗ್ನರಾದರು ಸಾಕ್ರಟೀಸ್. ಸಾಕ್ರಟೀಸ್ ನ ಬುದ್ಧಿವಂತ ಪ್ರತಿಕ್ರಿಯೆ ಶಿಷ್ಯನಿಗೆ ದೊಡ್ಡ ಪಾಠವಾಯಿತು. ಸುಳ್ಳು ವದಂತಿಗಳ ಬಗ್ಗೆ ಗಮನ ಹರಿಸದೇ ಇರುವುದನ್ನು ರೂಢಿಸಿಕೊಂಡ.

ಅನ್ಯರ ಜೀವನದಲ್ಲಿ,ಅವರ ವೈಯಕ್ತಿಕ ವಿಷಯದಲ್ಲಿ ಮೂಗುತೂರಿಸಿ,ಆ ವೈಯಕ್ತಿಕವಾಗಿದ್ದನ್ನು ಜಗಜ್ಜಾಹೀರು ಮಾಡುವ ಉಸಾಬರಿ ನಮಗೇಕೆ ಎಂಬ ತಿಳುವಳಿಕೆ ನಮಗಿದ್ದರೆ ಒಳಿತು.

ಒಬ್ಬ ವ್ಯಕ್ತಿಯ ಜೀವನವನ್ನಷ್ಟೇ ಅಲ್ಲದೇ ಇಡೀ ಸಮಾಜದ ಶಾಂತಿ ವ್ಯವಸ್ಥೆಯನ್ನೇ ನಾಶಗೊಳಿಸಬಲ್ಲದು ಈ ವದಂತಿಗಳು. 

 ಮೂರನೆಯ ವ್ಯಕ್ತಿಯ ಕುರಿತು ಇಲ್ಲಸಲ್ಲದ ವಿಷಯಗಳನ್ನು ನಮ್ಮ ಕಿವಿಗೆ ತೂರಿಸುತ್ತಿರುವ ವ್ಯಕ್ತಿಯ ಮೂಲ ಉದ್ಧೇಶ,ಗುಣ,ವ್ಯಕ್ತಿತ್ವ,ವಿಷಯದಲ್ಲಿರುವ ಸತ್ಯಾಸತ್ಯತೆ ಹಾಗೂ ಅಧಿಕೃತ ಮೂಲವನ್ನು ಪರಿಶೀಲಿಸಿ ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸುವ ಜಾಣ್ಮೆ ಹಾಗೂ ಪ್ರಬುದ್ಧತೆ ನಮ್ಮಲ್ಲಿರಬೇಕು. ಕಾರಣ,ಅದೇ ಹರಕು ಬಾಯಿಗೆ ನಾವೂ ಒಂದು ದಿನ ಆಹಾರವಾದರೂ ಆಶ್ಚರ್ಯವಿಲ್ಲ.

ಯಾರದ್ದೇ ವೈಯಕ್ತಿಕ ವಿಷಯವನ್ನು ಎಲ್ಲೆಡೆ ಹಬ್ಬಿಸುವುದಕ್ಕೂ ಹಾಗೂ ನಂಬುವುದಕ್ಕೂ ಮುಂಚೆ ತಪ್ಪು ಸರಿಗಳ ವಿವೇಚನೆ ನಮಗಿರಲಿ. 

 ಗಾಳಿಮಾತನ್ನು ಹಬ್ಬಿಸುವ ಹಾಗೂ ಅದಕ್ಕೆ ಪ್ರತಿಕ್ರಿಯಿಸುವ ವ್ಯಕ್ತಿಗಳು ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತಂದುಕೊಳ್ಳುತ್ತಾರೆ. ಶಾಂತಿ, ನೆಮ್ಮದಿ ಕಳೆದುಕೊಳ್ಳುವುದಲ್ಲದೇ ಮೂರನೆಯವನ ನಂಬಿಕೆಗೂ ಅನರ್ಹನಾಗುತ್ತಾನೆ.  ನಾವು ಮಾಡಿದ ಪಾಪಕರ್ಮ ಕೊನೆಗೆ ನಮ್ಮ ಕುತ್ತಿಯನ್ನೇ ಸುತ್ತಿಕೊಂಡು ಉಸಿರು ಕಟ್ಟಿಸಿ ಸಾಯಿಸುವುದು ಎಂಬಂತೆ ಇನ್ಯಾರದ್ದೋ ನೆಮ್ಮದಿ ಕೆಡಿಸಲು ಹೋಗಿ ನಮ್ಮ ನೆಮ್ಮದಿಯನ್ನು ನಾವೇ ಕೆಡಿಸಿಕೊಳ್ಳುತ್ತೇವೆ.

 ಇನ್ನೊಬ್ಬರ ಬಗ್ಗೆ ಸುಳ್ಳುಸುದ್ದಿಗಳನ್ನು ಹಬ್ಬಿಸುವ ಅಪರಾಧದಲ್ಲಿ ನಾವೆಂದಿಗೂ ಪಾಲುದಾರರಾಗದಂತೆ ಎಚ್ಚರಿಕೆ ವಹಿಸೋಣ…….


Leave a Reply

Back To Top