ಲಘುಬಿಗುವಿನ ಬಗ್ಗೆ ಒಂದಿಷ್ಟು

ಪುಸ್ತಕ ಸಂಗಾತಿ

ಚಂದ್ರಾವತಿ ಬಡ್ಡಡ್ಕ. ಅವರ ಹೊಸ ಪುಸ್ತಕ

ಲಘುಬಿಗುವಿನ ಬಗ್ಗೆ ಒಂದಿಷ್ಟು

ಸ್ಮಿತಾ ಅಮೃತರಾಜ್. ಸಂಪಾಜೆ

ಮೊನ್ನೆ ಹಾವೇರಿ ಸಾಹಿತ್ಯ ಸಮ್ಮೇಳನಕ್ಕೆ ಹೋದಾಗ ಜತೆಯಲ್ಲಿ ಸಿಕ್ಕಿ ಜತೆಯಾದವರು ಚಂದ್ರಾವತಿ ಬಡ್ಡಡ್ಕ. ನಮ್ಮೂರಿನವರೇ ಆದರೂ ಮುಖಾಮುಖಿಯಾಗಿ ಮಾತನಾಡಿದ್ದು ಒಂದೇ ಒಂದು ಸಲ. ಆದರೆ ಮೊನ್ನೆ ಸಿಕ್ಕು ಹೆಚ್ಚು ಆಪ್ತರಾದರು. ಹೋಗುವಾಗ ಚಂದ್ರಾವತಿ ಮೇಡಂರವರು ಬರುವಾಗ ಚಂದ್ರಕ್ಕ ಆಗಿದ್ದರು. ಸಮ್ಮೇಳನದ ಗಡಿಬಿಡಿಯಲ್ಲೂ ತಂದ ಅವರ ಎರಡು ಪುಸ್ತಕ ಮೆಲ್ಲಗೆ ನನ್ನ ಕೈಯಲ್ಲಿ ಇಟ್ಟರು. ಅದೇನೋ ಗೊತ್ತಿಲ್ಲ ಪುಸ್ತಕ ಕೈಗೆ ಕೊಟ್ಟವರೆಲ್ಲ ಬಹು ಬೇಗನೆ ಆತ್ಮೀಯರಾಗಿ ಬಿಡುತ್ತಾರೆ. ಬಹುಶಃ ಸಮಾನಮನಸ್ಕತೆ ಕಾರಣ ಇರಲೂ ಬಹುದು. ಇರಲಿ, ನಾನೀಗ ಹೇಳ ಹೊರಟಿರುವುದು ಚಂದ್ರಕ್ಕನ ಪುಸ್ತಕದ ಕುರಿತು. ಸಮ್ಮೇಳನದಿಂದ ಬಂದು ಆಯಾಸ ಎಲ್ಲಾ ಪರಿಹರಿಸಿಕೊಂಡ ಮೇಲೆ ಚಂದ್ರಾವತಿ ಬಡ್ಡಡ್ಕರವರ ಪುಸ್ತಕ ‘ಲಘು ಬಿಗು’ ಕೈಗೆತ್ತಿಕೊಂಡೆ.

ಮುನ್ನುಡಿಯಲ್ಲಿ ನಮ್ಮೂರಿನ ಖ್ಯಾತ ಹಿರಿಯ ಕವಿಗಳಾದ ಸುಬ್ರಾಯ ಚೊಕ್ಕಾಡಿಯವರು ಹೇಳಿಕೊಂಡಂತೆ ಇದೊಂದು ಮನೋಲಹರಿಯೇ.

ಕೆಲವೊಮ್ಮೆ ಬಿಗುವಾಗಿಯೂ, ಕೆಲವೊಮ್ಮೆ ಲಘುವಾಗಿಯೂ ಓದಿಸಿಕೊಂಡು ಹೋಗುವ ಬರಹದಲ್ಲಿ ಲಘುವಿನೊಳಗೆ ಬಿಗುವಿದೆ, ಬಿಗುವಿನೊಳಗೆ ಲಘುವಿದೆ. ಅಡುಗೆಮನೆಯ ತುರಿಮಣೆಯಿಂದ ಹಿಡಿದು ದೇಶದ ರಾಜಕೀಯದವರೆಗೂ ಇಲ್ಲಿನ ಬರಹಗಳು ಚಾಚಿಕೊಂಡಿವೆ. ಒಂದು ಸಲ ಪುಸ್ತಕ ಕೈಗೆತ್ತಿಕೊಂಡವಳು ಪುಟ ಮುಗಿಯುವವರೆಗೂ ಓದಿಯೇ ಇಟ್ಟದ್ದು.

ಚಂದ್ರಕ್ಕನ ಬರಹ ಎಲ್ಲೂ ಬೋರು ಹೊಡೆಸುವುದಿಲ್ಲ. ಬದುಕಿನ ಎಲ್ಲ ಸಂಗತಿಗಳನ್ನು ಅದು ಲಘುವೇ ಆಗಿದ್ದಿರಲಿ ಅಥವಾ ಗಂಭೀರದ್ದೇ ಇರಲಿ, ಎಲ್ಲವನ್ನೂ ಸರಳೀಕರಣಗೊಳಿಸಿ, ಹಗುರವಾದ ಲಯದಲ್ಲಿ ತೆಗೆದುಕೊಂಡು ಹೋಗುವ ಮನೋಧರ್ಮ ವನ್ನು ಇಲ್ಲಿಯ ಬರಹದಲ್ಲಿ ಕಾಣಬಹುದು. ಅವರ ಅನುಭವ ಮತ್ತು ಅವರು ಬದುಕಿನಲ್ಲಿ ಎದುರಿಸಿದ ಸಂಘರ್ಷ ಗಳು ಮತ್ತು ಬದುಕಿನ ಅಘಾತಗಳು ಅವರನ್ನು ಹೆಚ್ಚು ಮಾಗಿಸಿದೆ ಮತ್ತು ಬದುಕನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸಿದೆ. ಇಲ್ಲಿ ಬದುಕಿನ ಬಗ್ಗೆ ,ಕಹಿ, ನೋವಿನ  ಬಗ್ಗೆ ಯಾವುದೇ ತಕರಾರುಗಳಿಲ್ಲ. ಇದೆಲ್ಲವೂ ಬದುಕಿನಲ್ಲಿ ಬಂದೆರಗುವ ಸಹಜ ಸಂಗತಿಗಳು ಅನ್ನುವಂತದ್ದನ್ನ ಅರಗಿಸಿಕೊಂಡಿರುವ ಕಾರಣವೇ ಅವರಿಗೆ ವಿಧಿಯ ಕುರಿತ ಹಳಹಳಿಕೆ ಇಲ್ಲದ್ದು. ಪ್ರತಿಯೊಂದು ಸಂಗತಿಗಳನ್ನ ವಿನೋದಪೂರ್ಣವಾಗಿ  ಸುಲಲಿತವಾಗಿ ಮಂಡಿಸುವ ಪರಿ ಹೆಚ್ಚು ಆಪ್ತವಾಗುತ್ತದೆ.

ಇಲ್ಲಿ ಬರುವ ವಸ್ತುಗಳು ಈ ಹಿಂದೆ ಅದೆಷ್ಟೋ ಬರಹಗಾರರು ಬಳಸಿದ ವಸ್ತು ವಿಷಯಗಳಾದರೂ ಚಂದ್ರಕ್ಕನ ಕೈಯಲ್ಲಿ ಹಳೇ ವಸ್ತು ಹೊಸ ವಿಷಯದೊಂದಿಗೆ ವಿಭಿನ್ನ ಅನುಭವದೊಂದಿಗೆ ಮೈದಳೆದು ಬರುತ್ತದೆ. ಇಲ್ಲಿಯ ಬರಗಹಗಳಲ್ಲಿ ಸ್ವ ಅನುಭವ ಮತ್ತು ಪ್ರಾಮಾಣಿಕ ಅಭಿವ್ಯಕ್ತಿ ಇದೆ . ಆದ ಕಾರಣ ಲವಲವಿಕೆ ಮತ್ತು ತಾಜಾತನದ ಶೈಲಿಯಿಂದಾಗಿ ಇಲ್ಲಿಯ ಬರಹಗಳಿಗೆ ಒಂದು ಆಕರ್ಷಣೀಯ ಸೆಳೆತ ದಕ್ಕಿದೆ.

ಓದುತ್ತಾ ಹೋದಂತೆ ನಾವು ಅವರೊಂದಿಗೆ ಸಂವಾದದಲ್ಲಿ ತೊಡಗಿದಂತೆಯೋ ಅಥವಾ ನಾವು ಆ ಸಂದರ್ಭದ ಪ್ರತ್ಯಕ್ಷದರ್ಶಿಯಾದಂತೆ ನಮಗರಿವಿಲ್ಲದೆಯೇ ನಗುವೊಂದು ತೇಲಿ ಹೋಗುತ್ತದೆ. ಅದೆಷ್ಟೋ ಬಾರೀ ಜೋರಾಗಿ ನಕ್ಕಿದ್ದೂ ಇದೆ. ಮತ್ತೊಬ್ಬರ ಬರಹ ನಮ್ಮ ಒಳಗೂ ಈ ಪರಿ ಇಳಿಯುತ್ತದೆಯೆಂದರೆ ಅದು ಆ ಬರಹಕ್ಕಿರುವ ಶಕ್ತಿ. ಅಂತಹ ಒಂದು ಸೂಜಿಗಲ್ಲಿನ ಸೆಳೆತ ಚಂದ್ರಕ್ಕನ ಬರಹಕ್ಕಿದೆ.

ಯಾವ ಊರೇ ಆಗಿರಲಿ, ಆ ಊರಿನಲ್ಲಿ ದಕ್ಕಿದ ಅನುಭವ ಬರೆಯುವಾಗ ತನ್ನ ಊರಿನ

 ಪರಿಸರ,ಅಲ್ಲಿಯ ಪ್ರಾದೇಶಿಕ ಭಾಷೆಯ ಚಿತ್ರಣ ಹಾದುಹೋಗುವುದು  ಇಲ್ಲಿಯ ಬರಹಗಳ ವೈಶಿಷ್ಟ್ಯತೆ. ಮುದ ಕೊಡುವ ವಸ್ತು ವಿಷಯಗಳ ಜೊತೆಗೆ ಮನಮಿಡಿಯುವ,ಕಣ್ಣಂಚು ಒದ್ದೆಗೊಳಿಸುವ ಸಂಗತಿಗಳೂ ಇಲ್ಲಿವೆ. ಯಾವುದನ್ನೂ ಅತಿಯಾಗಿ ವಿಜ್ರಂಭಿಸಿ ಬರೆಯದೆ ಒಂದು ಸಂಯಮದ ತೂಕವನ್ನ ಇಲ್ಲಿ ನಾವು ಗಮನಿಸಬಹುದು. ಯಾವುದನ್ನೂ ಹದ ತಪ್ಪದೆ ಒಪ್ಪ ಓರಣವಾಗಿ ಮಂಡಿಸುವ ಕಾರಣವೇ ಇಲ್ಲಿಯ ಬರಹಗಳಿಗೊಂದು ಸಹಜ ಗತಿ ಪ್ರಾಪ್ತವಾಗಿದೆ.

ಬದುಕು  ಸಿಹಿಕಹಿ ನೋವು ನಲಿವು ಬೆರೆತ ಒಂದು ಹದದ ಮಿಶ್ರಣ. ಅನುಭವಿಸುತ್ತಾ ಸಾಗಿದರೆ ಅನುಭವದ ಮೂಟೆಯೇ ನಮ್ಮ ಬೆನ್ನ ಮೇಲೆ ಇದೆ. ದಿನನಿತ್ಯದ ಬದುಕಿನ ಚಕ್ರಗತಿಯಲ್ಲಿ ಸಾಗುವಾಗ ತಿರುಗಿ ನೋಡಿದರೆ ಎಲ್ಲ ಅನುಭವಗಳು ಬದುಕನ್ನ ರೂಪಿಸಲು, ಬದುಕನ್ನ ಅರ್ಥಮಾಡಿಕೊಳ್ಳಲು, ಬದುಕನ್ನ ಸಹ್ಯಗೊಳಿಸಲು ನೆರವಾಗಬಲ್ಲದು, ಒಂದು ಹೊಸ ಒಳನೋಟವನ್ನು ದಕ್ಕಿಸಿಕೊಡಬಲ್ಲವೆಂಬುದನ್ನ ಚಂದ್ರಕ್ಕನ ಬರಹಗಳನ್ನ ಓದಿದಾಗ ವೇದ್ಯವಾಗುತ್ತದೆ. ಇನ್ನೊಂದಷ್ಟು ನಗಬಹುದಿತ್ತು ಅಂತ ಅನ್ನಿಸುವಾಗಲೆಲ್ಲಾ ಗಕ್ಕನೆ ಬ್ರೇಕ್ ಹಾಕಿದಂತೆ ನಿಲ್ಲಿಸಿ ಮತ್ತೊಂದು ಅನುಭವದ ಹಾಳೆಯನ್ನ ತಿರುಗಿಸಿ ಹಾಕುವ ಚಂದ್ರಕ್ಕನ ಚಿಕ್ಕ ಚೊಕ್ಕ ಬರಹಗಳು ನಿಮ್ಮ ಆ ದಿನವನ್ನ ರಿಪ್ರೆಶ್ ಮಾಡಿಬಿಡಬಲ್ಲದು. ಚಂದ್ರಾವತಿ ಬಡ್ಡಡ್ಕರ ‘ಲಘು ಬಿಗು’ ಓದಿ. ನಿಮ್ಮಲ್ಲಿಯ ನೆನಹುಗಳೂ ನೇವರಿಸುವವು ನೋಡಿ.


ಸ್ಮಿತಾ ಅಮೃತರಾಜ್. ಸಂಪಾಜೆ

6 thoughts on “ಲಘುಬಿಗುವಿನ ಬಗ್ಗೆ ಒಂದಿಷ್ಟು

  1. Nijavagiyu

    ನಿಜವಾಗಿಯೂ ಸೂಜಿಗಲ್ಲು ಸೆಳೆತದ ಬರಹಗಳು..
    ಪುಸ್ತಕ ಓದಲು ಕಾಯುತಿರುವೆ.
    ಪುಸ್ತಕ ಪರ್ಚಯವು ತುಂಬಾ ಚಂದ

    1. ತಂಗೀ..‌ನಿನಗಿನ್ನೂ‌ ಪುಸ್ತಕ ತಲುಪಿಲ್ಲವೇ!

  2. ತುಂಬಾ ಧನ್ಯವಾದಗಳು ಸ್ಮಿತಾ. ನನಗೆ‌ ಇದೊಂದು‌ ‌ಸಿಹಿಯಾದ‌ ಅಚ್ಚರಿ! ಮತ್ತೊಮ್ಮೆ ಧನ್ಯವಾದಗಳು

  3. ಚೆಂದದ ಪರಿಚಯ ಸ್ಮಿತಾ….ಓದುವ ಅನಿಸುತ್ತೆ….

  4. ಅಕ್ಕಂದಿರ ಕೈಗೆ ಅಧಿಕಾರ ಸಿಗಬೇಕು.ಬದುಕಿನ ಒಳಹೊರಗು ಗಳನ್ನು ಸರಿಯಾಗಿ ಅರ್ಥೈಸಿಕೊಂಡು ಕುಟುಂಬವನ್ನು ಸರಿದೂಗಿಸುವ ಪರಿ ಅದ್ಭುತ ಅನುಭವ.ಅದರ ಸಾರವೇ ಇಂತಹ ಬರಹಗಳು.ಮೂಲ ಕ್ರತಿಕಾರರ ಉದ್ದೇಶ, ಅದನ್ನು ಪರಿಚಯಿಸಿದ ರೀತಿ ತುಂಬಾ ಇಷ್ಟವಾಯ್ತು.ಧನ್ಯವಾದಗಳು.

Leave a Reply

Back To Top