ಎ. ಹೇಮಗಂಗಾರವರ ಗಜಲ್

ಕಾವ್ಯಸಂಗಾತಿ

ಎ. ಹೇಮಗಂಗಾರವರ ಗಜಲ್

ನೀ ಹೆಜ್ಜೆಗೆ ಹೆಜ್ಜೆ ಸೇರಿಸಲೆಂದು ಬಯಸುವುದಿಲ್ಲ ನಿನ್ನ ಪ್ರೀತಿಯೊಂದೇ ಸಾಕು
ನೀ ನೋವುಗಳ ನಿವಾರಿಸಲೆಂದು ಆಶಿಸುವುದಿಲ್ಲ ನಿನ್ನ ಪ್ರೀತಿಯೊಂದೇ ಸಾಕು

ನೂರು ಒತ್ತಡಗಳು ಹೃದಯ ಹಿಸುಕಿದರೂ ಕಂಬನಿಯ ಕಂಗಳಲ್ಲೇ ಇಂಗಿಸಿದ್ದೇನೆ
ನೀ ಎದೆಗಪ್ಪಿ ಸಂತೈಸಲೆಂದು ನಿರೀಕ್ಷಿಸುವುದಿಲ್ಲ ನಿನ್ನ ಪ್ರೀತಿಯೊಂದೇ ಸಾಕು

ನೀಡಿದ ಆಶ್ವಾಸನೆಗಳೆಲ್ಲವೂ ಸತ್ಯವಾಗಲಾರವು ಎಂಬುದರ ಸ್ಪಷ್ಟ ಅರಿವಿದೆ
ನೀ ಕಾಳಜಿ ತೋರಿ ಈಡೇರಿಸಲೆಂದು ಕಾಡುವುದಿಲ್ಲ ನಿನ್ನ ಪ್ರೀತಿಯೊಂದೇ ಸಾಕು

ನಿನ್ನ ನಗು, ಸವಿಮಾತುಗಳ ಮೋಡಿಯಲ್ಲಿ ಅದಮ್ಯ ಸುಖ ಕಂಡಿದೆ ನೊಂದ ಜೀವಕೆ
ನೀ ಸಂಗಾತಿಯಾಗಿ ಸ್ವೀಕರಿಸಲೆಂದು ಬೇಡುವುದಿಲ್ಲ ನಿನ್ನ ಪ್ರೀತಿಯೊಂದೇ ಸಾಕು

ಕಲ್ಪನೆಗೂ ಕಟುವಾಸ್ತವಕೂ ಇರುವ ಅಂತರ ಬಾನು ಬುವಿಯಷ್ಟು ಹೇಮ
ನೀ ಬದುಕಿನಿರುಳ ಬೆಳಗಿಸಲೆಂದು ಕಾಯುವುದಿಲ್ಲ ನಿನ್ನ ಪ್ರೀತಿಯೊಂದೇ ಸಾಕು


About The Author


Comments

Leave a Reply

You cannot copy content of this page