ಹೊಸ ವರ್ಷದ ವಿಶೇಷ-2023

ಗಜಲ್

ಅರ್ಚನಾ ಯಳಬೇರು

ಅರಳುವ ಮೊಗ್ಗಿನ ಘಮಲಲಿ ಪ್ರೀತಿಯ ತುಂಬಿಸಿರುವೆ ಸ್ವೀಕರಿಸು ದೊರೆ
ಕದಪುಗಳ ಅಪ್ಪುವ ಅಶ್ರುಗಳಲಿ ಒಲವ ಅಡಗಿಸಿರುವೆ ಸ್ವೀಕರಿಸು ದೊರೆ

ನನ್ನೆದೆಯ ಗುಡಿಯನ್ನು ಅಲಂಕರಿಸಿರುವ ಪ್ರೇಮ ಮೂರ್ತಿಯು ನೀನು
ಓಘಿಸುವ ಭಾವಗಳ ನೈವೇದ್ಯವ ನಿತ್ಯ ಅರ್ಪಿಸುತಿರುವೆ ಸ್ವೀಕರಿಸು ದೊರೆ

ಇಮ್ಮಡಿಸಿದೆ ನಿನ್ನ ಚೆಲುವು ಮುಚ್ಚದ ಕಂಗಳ ಸ್ವರ್ಣ ಲೇಪಿತ ಸ್ವಪ್ನಗಳಲಿ
ಮೀಟುವ ಜೀವ ವೀಣೆಗೆ ಅಸುವ ತಂತಿಯಾಗಿಸಿರುವೆ ಸ್ವೀಕರಿಸು ದೊರೆ

ಪಕ್ವಗೊಂಡಿವೆ ಹುಳುಕಿಲ್ಲದ ಹಿತ ವಾಂಛೆಗಳು ಆಸ್ವಾದಿಸು ಬಾ ಗೆಳೆಯಾ
ಮಿಡಿವ ಮೌನದಲಿ ನಲ್ಮೆಯ ಪುಷ್ಪವ ಅರ್ಚಿಸುತಿರುವೆ ಸ್ವೀಕರಿಸು ದೊರೆ

ಕಾತರಿಸಿ ಕಾಯುತಿದೆ ಆತ್ಮಬಂಧುವಿನ ಸಖ್ಯಕೆ ‘ಅರ್ಚನಾ’ಳ ಮನವಿಂದು
ಆಪ್ತತೆಯ ಆಲಾಪದಲಿ ಅನುರಾಗವನು ನುಡಿಸುತಿರುವೆ ಸ್ವೀಕರಿಸು ದೊರೆ


2 thoughts on “

Leave a Reply

Back To Top