ಕಾವ್ಯ ಸಂಗಾತಿ
ಪುಷ್ಪ ಮುರುಗೋಡ
“ಕಾವ್ಯಶ್ರೀ ಕುವೆಂಪು”
ನೂರು ಮತದ ಹೊಟ್ಟು
ಗಾಳಿಗೆ ತೂರಿ,
ಮನುಜ ಮತಕೆ ದಾರಿ
ತೋರಿದಿರಿ,
ಎಲ್ಲ ಕುಬ್ಜತೆಯ ಎಲ್ಲೆಯನು
ಮೀರಿ ,
ಬೆಳೆದ ಚೇತನ ನೀವಾದಿರಿ.
ಕಾಡ ಹಾಡಿಗೆ ಕೊರಳಾದ ಧೀಮಂತ,
ಕಾವ್ಯ ನವರಸ ಧ್ವನಿಯ ಭಾವಾತೀತ ,
ಸುಮ್ಮನಿರೆ ಸಲ್ಲುವಿರಿ ಎದೆಯಾಳದಿ,
ಮಾತನಾಡಲು ಜ್ಯೋತಿರ್ಲಿಂಗ ಸಮಾನರು.
ಕಾವ್ಯಶ್ರೀ ಬರೆದ ಪದ ಪದಗಳೆಲ್ಲ ನಿಜ ಸ್ವರೂಪ ,
ಬೆಳಕೆ ಅಕ್ಷರಗಳಾಗಿ ಭುವಿಗೆ ಬಂದು,
ಮಂಗಲವೇ ಮೈದಾಳಿ ಮೂಡಿ ಬೆಳಕು,
ಹೊರಗೆಲ್ಲ ತುಂಬಿ ತುಳುಕುವುದು ಕಾಂತಿ ,
ಒಳಗೆ ಎದೆಯೊಳಗೆ ಮೇರೆ ಮೀರುವ ಶಾಂತಿ.
ಪುರೋಹಿತ ಶಾಹಿಯ ಬಣ ಗರ್ವ ಮೆಟ್ಟಿ ,
ಶ್ರೀ ಸಾಮಾನ್ಯನಿಗೆ ಭಗವತ್ ಪತ ಕಟ್ಟಿ,
ತ್ರೇತಾಯುಗದ ಕುಬ್ಜೆಮಂಥರೆಯೆ ಇರಲಿ,
ಕಲಿಯುಗದ ಮಲ ಎತ್ತೋ ಜಲಗಾರನಿರಲಿ,
ಲೋಕದ ಪಾಲಿಗೆ ಯಾರಿಹರು ತ್ಯಾಜ್ಯ,
ನಿಮ್ಮ ಕರಸ್ಪರ್ಶಕೆ ಅವರಾದರು ಪೂಜ್ಯ.
ಸಾರಸ್ವತ ಲೋಕದಲಿ ಪಸರಿಸಿದ
ಕಾವ್ಯ ರಸ ಋಷಿ,
ಅಮರರಾದಿರಿ ನಾಡು ನುಡಿಯಲಿ
ಕಾಲ ಮೀರಿದ ತಮಗೆ
ನುಡಿ ನಮನಗಳು .
ನುಡಿ ನಮನಗಳು.