ಅಂಕಣ ಸಂಗಾತಿ

ಸುಜಾತಾ ರವೀಶ್

ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು

ಸವಿತಾ ಜಗದೊಳಗೆ ನೀನು ನಿನ್ನೊಳಗೆ ಜಗತ್ತು _ ಕಾದಂಬರಿ

ಸವಿತಾ ಜಗದೊಳಗೆ ನೀನು ನಿನ್ನೊಳಗೆ ಜಗತ್ತು _ ಕಾದಂಬರಿ

ಲೇಖಕಿ   _ ಶ್ರೀಮತಿ ಜ್ಯೋತಿ ಬಾದಾಮಿ ಪ್ರಕಾಶಕರು _ ಜ್ಯೋತಿ ಪ್ರಕಾಶನ ಬೆಳಗಾವಿ 

ಪ್ರಥಮ ಮುದ್ರಣ _೨೦೨೦

ಬೆಳಗಾವಿಯ ಜ್ಯೋತಿ ಬದಾಮಿ ಅವರು ಸಾದಾ ಸೀದಾ ಲೇಖಕಿ .ಸಾಮಾಜಿಕ ಕಳಕಳಿಯುಳ್ಳ ಪ್ರಬುದ್ಧ ಚಿಂತಕಿ . ಹಲವಾರು ಸಂದರ್ಭಗಳಲ್ಲಿ ತಮ್ಮ ಹೆಸರನ್ನೇ ಅನ್ವರ್ಥವಾಗಿಸಿಕೊಂಡು “ಜ್ಯೋತಿಗೇ ಜ್ಯೋತಿಯಾದ” ಶಿವಶರಣೆ.. ಇಪ್ಪತ್ತೈದು ವರ್ಷಗಳ ಕಾಲ ಜ್ಯೋತಿ ಕಿಂಡರ್ ಗಾರ್ಡನ್ ಶಾಲೆ ನಡೆಸಿ ಹೊರರಾಜ್ಯದಿಂದ ಬಂದಿರುವ ಮಕ್ಕಳಿಗೆ ಕನ್ನಡದ ಸವಿ ಕಲಿಸಿ ಉಣಿಸುವ ಕೈಂಕರ್ಯ ನಡೆಸಿದವರು.. ಇನ್ನು ಸಮಾಜ ಸೇವಾ ಸಂಸ್ಥೆಗಳಲ್ಲಿ ಇವರ ಸೇವಾ ಕೊಡುಗೆ ಅತ್ಯಪೂರ್ವ. ಶರಣ ಸಾಹಿತ್ಯದಲ್ಲಿ ವಚನಗಳಲ್ಲಿ ವಿಶೇಷ ಒಲವಿರುವ ಇವರು ಹೊರದೇಶಗಳಲ್ಲಿಯೂ ವಚನಸಾಹಿತ್ಯದ ಉಪನ್ಯಾಸ ಕೊಟ್ಟಿದ್ದಾರೆ ಅಖಿಲ ಕರ್ನಾಟಕ ಕವಿಯತ್ರಿಯರ ಸಮ್ಮೇಳನ ಅಸ್ಸಾಂ, ಮಧ್ಯಪ್ರದೇಶ, ಗುಜರಾತ, ದಿಬ್ರೂಗಢ,ಮುಂಬಯಿ ದೆಹಲಿಯಲ್ಲಿ ನಡೆದ ಅಂತರ್ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ.  ಇವರ ಸಾಹಿತ್ಯಿಕ ಕೊಡುಗೆಗಳ ವಿಷಯಕ್ಕೆ ಬಂದರೆ ಹತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ .ಕುಸುಮ ಗುಚ್ಛ, ಸಿಂಚನ, ಹಿಮಮಣಿ ಕವನ ಸಂಕಲನಗಳು, ಯೂರೋಪ್ ಸುತ್ತಮುತ್ತ, ಪರಿಕ್ರಮಣ ಕೈಲಾಸ ಮಾನಸ ಸರೋವರ ಪ್ರವಾಸ ಕಥನ, ಮನಸ್ವಿನಿಯ ಮಡಿಲು ಕಥಾ ಸಂಕಲನ, ಡಾಕ್ಟರ್ ಪಂಚಾಕ್ಷರಿ ಹಿರೇಮಠ, ಶರಣು ಶರಣೆನ್ನುವೆ ವ್ಯಕ್ತಿಚಿತ್ರಣ ಕೃತಿ, ಕುಂದಾನಗರಿಗೆ ಕುಂದಣವಿಟ್ಟಂತೆ ಬೆಳಗಾವಿ ಲೇಖಕಿಯರ ಮಾಹಿತಿ ಕೃತಿ, ತೇಜೋಮಯಿ, ನೀಲಗಂಗಾ ಸಂಪಾದನ ಕೃತಿ, ಭಾರತ ರತ್ನ ವಿಜೇತರ ಪರಿಚಯ ಕೃತಿ ಮೊದಲಾದುವು.  ಇವರ ಸಾಧನೆಯನ್ನು ಗುರುತಿಸಿ ನೀಡಿದ ಪುರಸ್ಕಾರಗಳು ೨೦೧೯ರಲ್ಲಿ ಅಸ್ಸಾಂನ ತೇಜ್ ಪುರದಲ್ಲಿ ನಡೆದ ಸಮ್ಮೇಳನದಲ್ಲಿ ಬ್ಯೂಟಿ ವಿತ್ ಬ್ರೆನ್ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ರಾಷ್ಟ್ರೀಯ ಸಿರಿಗನ್ನಡ ಪ್ರಶಸ್ತಿ` ಬಸವ ಸಮಿತಿ ಪರಿಸರ ಮಿತ್ರ ಕರ್ನಾಟಕ ಸರ್ಕಾರ ದೈನಂದಿನ ದಿನಪತ್ರಿಕೆ ಪ್ರಶಸ್ತಿ ಗೋವಾದ ಬೆಸ್ಟ್ ಆರ್ಗನೈಸರ್ ಪ್ರಶಸ್ತಿ, ಹಿಂಡಾಲ್ಕೊ ಕಂಪೆನಿಯ ಸಮಾಜಸೇವಾ ಪ್ರಶಸ್ತಿ ,ನಿಸರ್ಗ ಸಂಸ್ಥೆಯ, ತೇಲಸಿಂಗ ಟ್ರಾನ್ಸ್ ಪೋರ್ಟ್ ಕಲಾರತ್ನ ಕಲಾಸೌರಭ,  ರಾಷ್ಟ್ರೀಯ ಕಾಶ್ಮೀರಿ ಹಿಂದಿ ಸಭಾ ಕೊಡಮಾಡುವ ಮಹಾದೇವಿ ವರ್ಮಾ ಕವಿಯತ್ರಿ ಪ್ರಶಸ್ತಿ ‘ಆ. ಭಾ ಕವಿಯತ್ರಿ ಸಮ್ಮೇಳನ ಮಾನಸಗಂಗೋತ್ರಿ ಮೈಸೂರು ಪ್ರಶಸ್ತಿ ,ಜಬಲಪುರ ಪದ್ಮಾವತಿ ಪ್ರಶಸ್ತಿ, ಜ್ಯೋತಿಬಾ ಫುಲೆ ಪ್ರಶಸ್ತಿ, ಲಯನ್ಸ್ ಕ್ಲಬ್ ಪ್ರಶಸ್ತಿ ಹೀಗೆ ಹನುಮಂತನ ಬಾಲದಂತಿದೆ ಇದರ ಪಟ್ಟಿ.

ಪ್ರಸ್ತುತದ ಸವಿತಾ ಕೃತಿಗೆ ಅಡ್ವೈಸರ್ಸ್ ಸಾಹಿತ್ಯ ಪ್ರಶಸ್ತಿ ಲಭ್ಯವಾಗಿದೆ

೨೯.೦೯.೧೯೮೧ ರಂದು ಬಾಗಲಕೋಟೆಯಲ್ಲಿ ಅಂದಾನಪ್ಪ ಯಾಳಗಿ ಮತ್ತು ಅಕ್ಕಮಹಾದೇವಿ ಯಾಳಗಿಯವರ ಮೂರನೆಯ ಸುಪುತ್ರಿಯಾಗಿ ಜನಿಸಿದರು ಸವಿತಾ. ಇಬ್ಬರು ಅಣ್ಣಂದಿರ ಮುದ್ದಿನ ತಂಗಿಯಾಗಿ ಶೈಕ್ಷಣಿಕವಾಗಿ ಸಾಧನೆ ತೋರಿ ದಂತವೈದ್ಯಕೀಯ ಮುಗಿಸಿದವಳು.  ಲಿಂಗಾಯಿತ ಧರ್ಮದವಳಾಗಿ ಇಷ್ಟಲಿಂಗ ಧರಿಸಿ ನಿಯಮಿತ ಲಿಂಗಪೂಜೆ  ಮಾಡುತ್ತಿದ್ದವಳು.. ಬಸವ ಧರ್ಮ ಬಸವಣ್ಣ ಹಾಗೂ ಶರಣರ ವಚನಗಳನ್ನು ಹಾಡುತ್ತಿದ್ದಳು.. ಹಾವೇರಿ ಮೂಲದ ಪ್ರವೀಣ್ ಹಾಲಪ್ಪನವರ ಇಂಜಿನಿಯರಿಂಗ್ ಪದವೀಧರ ಐರ್ಲೆಂಡಿನ ಮೆಡಿಕಲ್ ಇಂಪ್ಲಿಮೆಂಟ್ಸ್ ಕಂಪನಿಯಲ್ಲಿ ಉತ್ತಮ ನೌಕರಿ.  ಅವರನ್ನು ವಿವಾಹವಾಗಿ ಅಲ್ಲಿಗೆ ಹೋಗುತ್ತಾಳೆ .ತುಂಬ ಉತ್ಸಾಹ ಪ್ರವೃತ್ತಿಯ ಚೈತನ್ಯದ ಚಿಲುಮೆ ಎಲ್ಲರೊಡನೆ ಹೊಂದಿಕೊಂಡಿರುವ ಜನಪ್ರಿಯವಾದ ಅದ್ಭುತ ವ್ಯಕ್ತಿತ್ವದವಳು . ಅಲ್ಲದೆ ಹಾಲೆಂಡ್ನಲ್ಲಿ ವೃತ್ತಿ ಕೈಗೊಳ್ಳಲು ಅರ್ಹತೆ ಪಡೆಯುವ ಸಂದರ್ಭದಲ್ಲೇ ಗರ್ಭದರಿಸಿದ ಸೂಚನೆ.  ತಂದೆತಾಯಿಯರು ಅವಳನ್ನು ನೋಡಲು ಬಂದು ಕುಬುಸದ ಶಾಸ್ತ್ರ ಅಲ್ಲಿಯೇ ಮಾಡಿ ಮುಗಿಸುತ್ತಾರೆ. ಆಪ್ತರ ಒಡನಾಟ, ಬರುವ ಕಂದನ ನಿರೀಕ್ಷೆ ಸ್ವರ್ಗದತ್ತ ತುದಿಯಲ್ಲಿರುವಂತೆ ಭಾಸ.  ಆಗ ಬದುಕಿನ ಭೀಕರ ಹೊಡೆತ. ಬೆನ್ನುನೋವು ಚಿಕಿತ್ಸೆಗೆಂದು ಗರ್ಭಾವಸ್ಥೆಯ ಹದಿನೇಳನೆಯ ತಿಂಗಳಲ್ಲಿ ನಾಲ್ಕೈದು ಗಂಟೆಗಳ ಚಿಕಿತ್ಸೆಯಲ್ಲಿ ಮುಗಿದುಹೋಗಬಹುದಾದ ಪ್ರಸಂಗವೊಂದು ಎಳೆದೆಳೆದು ನಂಜಾಗಿ ತೀವ್ರತರವಾದ ಸೋಂಕಿನಿಂದ ಸಾವನ್ನಪ್ಪಬೇಕಾಗುತ್ತದೆ . ಇದಿಷ್ಟು ಪತ್ರಿಕೆಗಳಿಂದ ನಮಗೆ ತಿಳಿದ ಸುದ್ದಿ .

ಈ ಪುಸ್ತಕದಲ್ಲಿ ಲೇಖಕಿಯವರು ಸವಿತಾಳ ಅವಳ ತಂದೆ ತಾಯಿ ಪತಿ ಪ್ರವೀಣ್ ಅವರ ಅಂತರಂಗದ ಭಾವಗಳನ್ನು ಅನಾವರಣಗೊಳಿಸುತ್ತಾ ಹೋಗುತ್ತಾರೆ.  ನಮಗೆ ತಿಳಿಯದ ವಸ್ತುಸ್ಥಿತಿಗಳ ಪ್ರಸಂಗಗಳ ಕಥೆಯನ್ನು ನಿರೂಪಿಸುತ್ತಾರೆ . ಎಲ್ಲಿಯೂ ಮೆಲೋಡ್ರಾಮಾ ಅನಿಸದ ಹಾಗೆಯೇ ಬರಡು ವರದಿಯಂತೆಯೂ ಭಾಸವಾಗದ  ಶೈಲಿಯ ನಿರೂಪಣೆ ಮನ ಸೆಳೆಯುತ್ತದೆ .ಲೇಖಕಿಯವರು ವೈಯಕ್ತಿಕವಾಗಿಯೂ ಸವಿತಾ ಮತ್ತು ಅವಳ ತಂದೆ ತಾಯಿಯರ ಪರಿಚಿತ ವೃತ್ತದಲ್ಲಿ ರುವುದು ಇದಕ್ಕೆ ಆತ್ಮೀಯತೆಯ ಸ್ಪರ್ಶವನ್ನಿತ್ತಿದೆ.

ಸವಿತಾಳ ದುರ್ಮರಣ ಪ್ರಪಂಚದಾದ್ಯಂತ ಸಂಚಲನವನ್ನೆನ್ಬಿಸಿ ಮಹಿಳೆಯರ ಮೂಲಭೂತವಾದ ಬದುಕುವ ಹಕ್ಕಿನ ಪುನರ್ ಸ್ಥಾಪನೆಗಾಗಿ ಹೋರಾಟ ನಡೆದು ಕಡೆಗೂ ಐರ್ಲೆಂಡಿನ ಕಾನೂನಿನ ಬುನಾದಿಯನ್ನೇ ಅಲುಗಾಡಿಸುವ ಸತ್ಯಕ್ಕೆ ನ್ಯಾಯ ದೊರಕಿಸಿ ದಂತಹ ಅಪರೂಪದ ಸಂದರ್ಭ.  ಇದು ಹೇಗೆ ಕಿಡಿಯಾಗಿ ಹೊರಹೊಮ್ಮಿ ಕ್ರಾಂತಿಕಾರಕ ನಿರ್ಣಯದ ಐತಿಹಾಸಿಕ ಕ್ಷಣಗಳಿಗೆ ಮುನ್ನುಡಿ ಬರೆಯಿತು ಎಂಬುದನ್ನು ಐರ್ಲೆಂಡಿನ ಪತ್ರಕರ್ತೆ ಕಿಟ್ಟಿ ಹಾಲೆಂಡ್ ಅವರು  ತಮ್ಮ  Savitha_ The tragedy that shook the nation ಎಂಬ ಪುಸ್ತಕವನ್ನು 9 ತಿಂಗಳಿನಲ್ಲಿ ಬರೆದು ಹಿಂದಿನ ಹೋರಾಟದ ಕಥೆಯ ಮೇಲೆ ಬೆಳಕು ಚೆಲ್ಲಿದ್ದಾರೆ . ಅದನ್ನು ಆಧಾರವಾಗಿ ಸಂಗ್ರಹರೂಪದಲ್ಲಿ ಜ್ಯೋತಿ ಅವರು” ಸವಿತಾ ಜಗದೊಳಗೆ ನೀನು ನಿನ್ನೊಳಗೆ ಜಗತ್ತು “ಎಂಬ ಅಡಿಬರಹದ ಪುಸ್ತಕ ಬರೆದಿದ್ದಾರೆ. ಕೆಲವೊಂದು ಕಾನೂನಾತ್ಮಕ ವಿವರಗಳಿಗೆ ಪುಸ್ತಕವನ್ನು ಆಧಾರವಾಗಿರಿಸಿಕೊಂಡರೂ ಕಥೆಗೆ ಆಪ್ತತೆಯ ಸ್ಪರ್ಶ ಅಂತಕರಣದ ಲೇಪವನ್ನು ಕೊಟ್ಟು  ಓದುಗರ ಕಂಗಳನ್ನು ಆರ್ದ್ರಗೊಳಿಸುತ್ತಾರೆ.. ನಿಜಕ್ಕೂ ಇದು ಸ್ತುತ್ಯರ್ಹ ಪ್ರಯತ್ನ  ಮತ್ತು ಲೇಖಕಿಯವರು ಅಭಿನಂದನೀಯರು.

ಆಧುನಿಕ ತಂತ್ರಜ್ಞಾನ ಆರ್ಥಿಕ ಅಭಿವೃದ್ಧಿ ಸಾಧಿಸಿದ ಮುಂದುವರಿದ ರಾಷ್ಟ್ರದಲ್ಲೂ ಅಂಧ ಧಾರ್ಮಿಕ ನಂಬಿಕೆಯೊಂದು ಮುಗ್ಧ ಜೀವದ ಬಲಿಗೆ ಕಾರಣವಾಗುವುದು ಹೃದಯವಿದ್ರಾವಕ. ಮುದ್ದಿನ ಕಂದನ ಆಗಮನದ ನಿರೀಕ್ಷೆಯಲ್ಲಿದ್ದ ಯುವ ಜೋಡಿಗೆ ರೆಕ್ಕೆಯೇ ಕತ್ತರಿಸುವಾಗಿನ ಆ ದುರಂತ ನೆನೆಯಲು ಘೋರ .ಅಲ್ಲಿಯೂ ಸವಿತಾಳ ತಂದೆ ತಾಯಿ ಹಾಗೂ ಪತಿ ವ್ಯವಸ್ಥೆಯನ್ನು ದೂಷಿಸದೆ ಶಾಂತಚಿತ್ತದಿಂದ ನಡೆಯುವುದು ಅಚ್ಚರಿ ಹಾಗೂ ಹೆಮ್ಮೆ ತರುತ್ತದೆ.  ಹಲ್ಲಿನಲ್ಲಿ ವಜ್ರವನ್ನು ಆಳವಡಿಸಿಕೊಂಡು The queen of diamond smile  ಎಂಬ ಹೆಸರು ಹೊತ್ತಿದ್ದ ನಗುಮೊಗದ ಸವಿತಾ ತಂದೆ ತಾಯಿ ಊರಿಗೆ ಹೊರಡುವಾಗ ತೋರಿಸುವ ಸಂಯಮ ಸಮಯ ಪ್ರಜ್ಞೆ ಮನ ಕಲಕುತ್ತದೆ .  ಐರ್ಲೆಂಡಿನ ಭಾರತೀಯ ಸಮೂಹ ಪ್ರವೀಣನಿಗೆ ನೀಡುವ ಸಹಕಾರ ಸಮಯೋಚಿತ ಧೈರ್ಯ ಅನುಕಂಪಗಳು ಪ್ರಪಂಚದಲ್ಲಿ ಮಾನವೀಯತೆ ಇನ್ನೂ ಸತ್ತಿಲ್ಲ ಎಂದು ತೋರಿಸುತ್ತದೆ. ” ಬೆಕ್ಕಿಗೆ ಗಂಟೆ ಕಟ್ಟುವರಾರು” ಎಂಬಂತಿದ್ದ ಗರ್ಭಪಾತ ಕಾನೂನಿನ ಬದಲಾವಣೆಗೆ ತಾನೆ ಬಲಿಯಾಗಿ ಕೆರೆಗೆ ಹಾರವಾದ ಭಾಗೀರಥಿಯಂತೆ ತನ್ನ ಸಾವಿನ ಮೂಲಕ ಅನೇಕ ಹೆಣ್ಣುಮಕ್ಕಳ ಸ್ವಾಸ್ಥ್ಯರಕ್ಷಣೆಗೆ ಕಾರಣಿಭೂತಳಾದ ಸವಿತಾ ನಿಜಕ್ಕೂ” ಶರಣರ ಜೀವನ ಮರಣದಲ್ಲಿ ಕಾಣು” ಎಂಬುದಕ್ಕೆ ಉದಾಹರಣೆಯಾದವಳು . ಲೇಖಕಿ ಅವರೇ ಮುನ್ನುಡಿಯಲ್ಲಿ ಬರೆದಂತೆ “ಸವಿತಾ ಸಂಸ್ಕೃತದಲ್ಲಿ ಸೂರ್ಯ ಎಂದರ್ಥ. ಸೂರ್ಯನ ಬೆಳಕಿಗೆ ಸಾವಿಲ್ಲ .ಸವಿತಾ  ಪದಕ್ಕೆ ಕನ್ನಡದಲ್ಲಿ ಸ್ನೇಹಿ, ಸೃಜನಾತ್ಮ,ಕ ಸಕ್ರಿಯ ಸಮರ್ಥ ಬಾಷ್ಪಶೀಲ ಎಂಬರ್ಥಗಳಿವೆ.  ಇವೆಲ್ಲರ ಸಮ್ಮಿಲನದ ನಮ್ಮ ನಾಯಕಿ ಐರ್ಲೆಂಡ್ ದೇಶದ ಗರ್ಭಪಾತ ವಿರೋಧಿ ನೀತಿ ಕಾನೂನು ಐತಿಹಾಸಿಕ ಬದಲಾವಣೆಯ ಸೂತ್ರಧಾರಿಣಿ ಸವಿತಾ ಸದಾ ಅಜರಾಮರಳಾಗಿದ್ದಾಳೆ “.

ಕೆಳಗಿನ ಕೆಲವೊಂದು ಸಂದರ್ಭಗಳು ಮುದ್ದಿನಲ್ಲಿ ಬುಬ್ಬೂ ಎಂದು ಕರೆಸಿಕೊಳ್ಳುತ್ತಿದ್ದ ಸವಿತಾಳ ವ್ಯಕ್ತಿತ್ವದ ಪರಿಚಯ ಮಾಡಿಸುವಂತಹುದು.

*ಶಾಲಾದಿನಗಳಲ್ಲಿ ಮಾಡದ ತಪ್ಪು ಒಪ್ಪಿಕೊಳ್ಳದೆ ನಿಜವನ್ನು ತೋರಿಸಿಕೊಟ್ಟಿದ್ದು.

*ಎಂ ಡಿ ಸೀಟು ಹಂಚಿಕೆಯಲ್ಲಿ ಗೊಂದಲವಾಗಿ ಕೈತಪ್ಪಿದಾಗ ನ್ಯಾಯಕ್ಕೆ ಕಾನೂನು ಮೊರೆ ಹೋಗಿದ್ದು.

*ತಂದೆ ತಾಯಿಗೆ ಲ್ಯಾಪ್ಟಾಪ್ ಕಳಿಸಿ ದಿನವೂ ರಾತ್ರಿ ಒಂಭತ್ತಕ್ಕೆ ಸ್ಕೈಪ್ ನಲ್ಲಿ ವಿಡಿಯೋ ಕಾಲ್ ಮಾಡಿ ಯೋಗಕ್ಷೇಮ ವಿಚಾರಿಸುತ್ತಿದ್ದದ್ದು

*ಪ್ರವೀಣ್ ಅವರ ಮಾತುಗಳಲ್ಲಿ “ಸವಿತ ನನ್ನ ಧರ್ಮಪತ್ನಿ ಎಂದು ಪರಿಚಯಿಸುವ ಅವಶ್ಯಕತೆಯೇ ಬರಲಿಲ್ಲ .ಈ ಹುಡುಗಿ ಸವಿತಾ ಹಾಲಪ್ಪನವರ ಗಂಡ ಪ್ರವೀಣ ಎಂದು ಗುರುತಿಸಿಕೊಂಡಿದದ್ದೆ”

*ತಂದೆ ತಾಯಿ ಮತ್ತೆ ಹೆರಿಗೆಗೆ ವಾಪಸ್ಸು ಬರುವುದರಿಂದ ಅವರ ಬಟ್ಟೆ ಬರೆಗಳನ್ನು ಅಲ್ಲಿಯೇ ಇರಿಸಿಕೊಂಡು ಅವರ ಸೂಟ್ ಕೇಸ್ ತುಂಬಾ ಬಂಧುಮಿತ್ರರಿಗೆ ಉಡುಗೊರೆ ತುಂಬಿಸಿ ಕಳಿಸಿದ್ದು.  ಆದರೆ ಆ ಸೂಟ್ ಕೇಸ್ ಗಳನ್ನು ಬಿಚ್ಚುವ ಮೊದಲೇ ಸವಿತಾಳ ಮರಣದ ಸುದ್ದಿ ತಲುಪಿದ್ದು ಮಾತ್ರ ವಿಪರ್ಯಾಸ.

ಇಲ್ಲಿ ಕಗ್ಗದ ಒಂದು ಪದ್ಯ ಉಲ್ಲೇಖನೀಯ

ಅಗೆದು ಗೊಬ್ಬರವಿಕ್ಕಿ ನೀರೆರೆದು ತೋಟಿಗನು

ಜಗಿವ ಮುಳ್ಳಿರಿತಗಳ ಸೈರಿಸೆ _ಗುಲಾಬಿ

ನಗುವುದೊಂದರೆ ನಿಮಿಷ ನಗಲು ಬಾಳ್ಮುಗಿಯುವುದು

ಮುಗುಳು ದುಡಿತಕೆ ತಣಿಸು _ ಮಂಕುತಿಮ್ಮ

 ಎಷ್ಟೆಲ್ಲ ಶ್ರಮವಹಿಸಿ ಗುಲಾಬಿ ಬೆಳೆದರೂ ಅದರ ಒಂದು ನಿಮಿಷದ ನಗೆ ಶ್ರಮಕ್ಕೆ ಪ್ರತಿಫಲವಂತೆ. ಹಾಗೆ ಅಲ್ಪಕಾಲವಿದ್ದರೂ ಅಪೂರ್ವ ವ್ಯಕ್ತಿತ್ವದಿಂದ ಜೀವಿಸಿರುವಷ್ಟು ಕಾಲ ಜನಪ್ರಿಯಳಾಗಿ ತನ್ನ ಸಾವನ್ನು ವ್ಯರ್ಥಗೊಳಿಸದೆ ಲೋಕೋಪಯೋಗಿಯಾಗಿ ಚಿರ ಕಾಲ ಜನಮಾನಸದಲ್ಲಿ ನೆಲೆ ನಿಂತಿರುವ ಸವಿತಾಳಿಗೆ ಹಾಗೂ ಸವಿತೆಯ ಪ್ರಭೆಯನ್ನು ಜಗಕ್ಕೆ ಪರಿಚಯಿಸಿದ ಜ್ಯೋತಿಯವರಿಗೆ ಅನಂತ ಅಭಿನಂದನೆಗಳು ಮತ್ತು ಧನ್ಯವಾದಗಳು.


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

One thought on “

  1. ಬರಹ ಆಪ್ತವಾಗಿದೆ. ಓದಿಸಿಕೊಂಡು ಹೋಗುತದೆ.
    ಡಾ. ಪುಷ್ಪಾ. ಸೂಪರ್

Leave a Reply

Back To Top