ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸಂತೆಬೆನ್ನೂರು ಫೈಜ್ನಟ್ರಾಜ್ ಕವಿತೆಗಳು

Concept. 3D Render

ಬೇರು

ಅಜ್ಜ ಹೆಚ್ಚು ಮರ ನೆಡಲಿಲ್ಲ
ಮಾತುಗಳ ಹಂಚಿದ ಮಕ್ಕಳು ಮೊಮ್ಮಕ್ಕಳು
ಮಾತುಗಳ ಕಲಿಯುತ್ತಾ ಹೋದರು.

ಹೊಲದ ಬದುಗಳ ಮೇಲೆ ಕೂತು ಉಂಡ
ಬುತ್ತಿಯ ಅನ್ನದ ಅಗುಳು ನಾಲ್ಕು ದಿಕ್ಕಿಗೆ ಚೆಲ್ಲಿದ ಅಜ್ಜನ
ಕೈಗಳ ನೋಡುತ್ತಿದ್ದ ಮೊಮ್ಮಗ ಈಗ
ರೇಶನ್ ಅಂಗಡಿ ಎದುರು ಪಡಿತರ ಕಾರ್ಡ ಹಿಡಿದು
ಸರದಿ ಸಾಲು ಕಾಯುತ್ತಿದ್ದಾನೆ

ಅಜ್ಜ ಮುದ್ದೆಯ ಮಹತ್ವ ಹೇಳುತ್ತಲೇ
ಅಂಗಳದ ನಾಯಿ, ಹಿತ್ತಲ ಕಾಗೆಗಳಿಗೆ ಗುಕ್ಕು
ಮುದ್ದೆಯಿಕ್ಕಿ ತೋರಿದ ಅಗಣಿತ ಪ್ರೀತಿಗೆ ಈಗ ಜಾಗವಿಲ್ಲ
ಹದಿನೈದು ಇಪ್ಪತ್ತರ ಜಾಗವೀಗ ಮನೆ ಎಂದುಕೊಂಡ ಮೊಮ್ಮಗನಿಗೆ
ಅಪ್ಪನ ಮಲಗಿಸಲು ಜಗುಲಿಯಿಲ್ಲ

ಅವ್ವ ಯಾವುದೋ ಮೂಲೆಯಲ್ಲಿ ಮುದುಡಿದ್ದಾಳೆ ಅಜ್ಜನ
ಗೂರಲದನಿಗೆ ಮರಿಮಗನ ಸಿಂಡರಿಸುವಿಕೆಗೆ
ಮಾತುಗಳೇ ಮೂಲವಾಗಿವೆ. ತಲೆಗಳ ಅಂತರದಿ ಕಾಲ ಕ್ಯಾಲೆಂಡರಾಗಿದೆ
ಉರುಳುವುದೇ ಇಲ್ಲಿ ಮುಖ್ಯ!

ಹೊಲ ,ಗದ್ದೆ ,ಕಣಗಳು ಸೈಟಾಗಿ -ನೋಟಾಗಿದ್ದು ನೋಡಿದ
ಅಜ್ಜನ ಕಣ್ಣಲ್ಲಿ ನೀರು ಲಾವರಸ
ದಮ್ಮಿನ ಜೊತೆಯಲ್ಲಿ ಸಾವಿಗೆ ಪತ್ರಿಕೆ ಕಳಿಸುತ್ತಲೇ ಇದ್ದಾನೆ
ಮರವೊಂದು ನೂರು ಗೂಡುಗಳಿಗಾಸರೆ ಒಂದು ಗೂಡಿನ
ಹಕ್ಕಿಯ ಹಿಕ್ಕೆ ಸಾವಿರ ಮರದ ಜನನ ಮೂಲ!

ಅಜ್ಜ ಅಪ್ಪನ ಮೂಲೆಗಳು ಗರ್ಭಗುಡಿಯಾದಂದು ಮೊಮ್ಮಗ ನೂರು
ಹಕ್ಕಿಗಳ ರೆಕ್ಕೆ ಎದೆಯಲ್ಲಿ ಹುದುಗಿಸಿಕೊಂಡAತೆ
ನಿರಂತರ ಹಸಿರಿಗೆ ಮೈ ಮನ ಮೂಲ! ತಲೆಗಳು ತೊಲೆಗಳು
ನಮ್ಮ ನೆಲದ ಆಸ್ತಿ; ಉಳಿಸಿಕೊಂಡ ಕ್ಷಣ
ಉಳಿದಂತೆ ನಾವು, ನೀವ ಮತ್ತು ಎಲ್ಲರೂ!

-**

ಹೂ-ಎದೆ ಮೇಲೆ

ನನ್ನೊಳಗೂ ನೂರು ಸ್ವರಗಳಿವೆ
ನೀವೆಲ್ಲಿ ಕೇಳುತ್ತೀರಿ
ನಿಮ್ಮ ನೋವು ನನಗೂ ಗೊತ್ತು
ನನ್ನೆದುರು ನೀವೆಲ್ಲಿ ಹೇಳುತ್ತೀರಿ
ಎಲೆ ಮೇಲ ಹನಿ ನಾನು
ನನ್ನನ್ನು ನೀವೆಲ್ಲಿ ನೋಡುತ್ತೀರಿ
ಮೊಗ್ಗನ್ನೇ ಚಿವುಟಿ
ಹೂವಾಗಿಸಲು ಹೊರಡುತ್ತೀರಿ
ನನ್ನ ಕಂಗಳಲ್ಲೂ ನೀರಿದೆ
ನಿಮಗೆಲ್ಲಿ ಕಾಣುತ್ತದೆ
ನಾ ಹಾಡೋ ಹಾಡಿಗೆ
ಸುಮ್ಮನೆ ತಲೆದೂಗುತ್ತೀರಿ!
ನಾನೂ ನಿಮ್ಮಂತೆ ಮನುಷ್ಯ
ನೀವೇಕೆ ಮರೆಯುತ್ತೀರಿ
ನನಗೂ ಒಂದು ಹೆಸರಿದೆ
ಜಾತಿ ಹಿಡಿದು ಏಕೆ ಕರೆಯುತ್ತೀರಿ?
ನಾನು ನಿಮ್ಮೊಳಗೊಬ್ಬ
ನೀವೆಲ್ಲಿ ಪರಿಗಣಿಸುತ್ತೀರಿ
ಹೂ-ಎದೆ ಮೇಲೆ ಕಾಲಿಟ್ಟು
ಮುಗಿಯದ ಹಾಡ ಮುಗಿಸುತ್ತೀರಿ!


About The Author

Leave a Reply

You cannot copy content of this page

Scroll to Top