ನಿಂಗಮ್ಮ ಭಾವಿಕಟ್ಟಿ ಹೊಸ ಕವಿತೆ-ಅಕ್ಕ

ಕಾವ್ಯ ಸಂಗಾತಿ

ಅಕ್ಕ

ನಿಂಗಮ್ಮ ಭಾವಿಕಟ್ಟಿ

ಅಕ್ಕಾ ನೀ
ರಾಜನನ್ನೇ ಪರಿವರ್ತಿಸಿದ
ಕಾಮದಿಂದ ಕಾಯಕದೆಡೆಗೆ
ವಾಲಿಸಿದ ಸಾದ್ವಿ
ಹೆತ್ತವರ ಹಂಗಿನಿಂ ಹೊರಬಂದ ಹೇಮಗಂಗೆ

ಅಕ್ಕಾ ನೀ
ಹಸಿವೆ ತೃಷೆಗಳ ಲೆಕ್ಕಿಸದ
ಬೇಡಿದಡೆ ನೀಡದಂತಾಗಲಿ
ನೀಡಿದಡೆ ನಾಯಿಎತ್ತೊಯ್ಯಲೆಂದ
ಕಷ್ಟಗಳ ಕೋರಿದ ಕಾಮಧೇನು

ಅಕ್ಕಾ ನೀ
ಕಂಡವರ ಅಣ್ಣಗಳೆಂದು
ಸೋದರಿಯಾಗಿ ಸವಿನುಡಿದು
ಕಲ್ಲೆಸೆದರೂ ಕೋಪಿಸದ ಕರುಣೆ
ಎದೆಗುಂದದೆದೆಗಾರಿಕೆಯಾಕೆ

ಅಕ್ಕಾ ನೀ
ಗಿಳಿ ಕೋಗಿಲೆಗಳ ನುಡಿಸಿ
ಪ್ರಕೃತಿಯನಚ್ಚರಿಗೊಳಿಸಿದ
ಶಿವನ ಪ್ರಿಯೆ ಅದ್ಭುತೆ
ಅವನೇ ಪುಣ್ಯ ಪುರುಷ
ನಿನ್ನೊಲುಮೆಯ ತೂಕದಲಿ

ಅಕ್ಕಾ ನೀ
ಪ್ರಭುದೇವರಿಗುತ್ತರಿಸಿ
ಎತ್ತರವಾದ ಪುತ್ಥಳಿ
ಶರಣರಿಗೇ ಅಕ್ಕನಾದಾಕೆ
ಬಾಳೆಯಂತೆ ಬಾಗಿ ಕದಳಿಯರಸಿದ
ಚೆನ್ನಮಲ್ಲಿಕಾರ್ಜುನನರಸಿ


Leave a Reply

Back To Top