ಕಾವ್ಯ ಸಂಗಾತಿ
ಗಜಲ್
ಡಾ.ರೇಣುಕಾತಾಯಿ.ಎಂ
ರೇಶಿಮೆ ರುಮಾಲು ಹೊಳೆಯುತಿದೆ ಸುಮ್ಮಸುಮ್ಮನೆ
ಖಾದಿ ಕಳೆಗುಂದುತ್ತ ಹೋಗುತಿದೆ ಸುಮ್ಮಸುಮ್ಮನೆ//
ಬಿಗಿದ ತುಟಿಗಳು ಬಿರಿಯದೆ ಬಿಗಿದಪ್ಪಿ ಕುಳಿತಿವೆ
ದಮನಿತ ದನಿಯು ಮೂಕವಾಗುತಿದೆ ಸುಮ್ಮಸುಮ್ಮನೆ//
ದಬ್ಬಾಳಿಕೆಯ ಆಡಂಬರಕೆ ತನ್ನತನ ಮರೆಯಾಗಿದೆ
ಸ್ವಾಭಿಮಾನ ಶಿರವೆತ್ತದೆ ಬಾಗುತಿದೆ ಸುಮ್ಮಸುಮ್ಮನೆ//
ದೊರೆಗಳ ದಾರಿ ಹೆದ್ದಾರಿಯಾಗಿ ದೊಡ್ಡದಾಗುತಿದೆ
ಪ್ರಜೆಗಳ ಮನೆ ಸಣ್ಣದಾಗುತಿದೆ ಸುಮ್ಮಸುಮ್ಮನೆ//
ಖಾವಿಯ ಬಣ್ಣ ನೆತ್ತರದಲಿ ಮಿಂದು ಹೋಗುತಿದೆ
ಭಕ್ತಿಯಡಿ ಮಾನ ಹರಜಾಗುತಿದೆ ಸುಮ್ಮಸುಮ್ಮನೆ//
ಸಮಾಧಿಯು ಹಕ್ಕು ಪತ್ರಕಾಗಿ ಹೋರಾಡುತಿದೆ
ದರಕಾರದ ದವಾಖಾನೆ ದಳ್ಳುರಿಗೆ ದೂಡುತಿದೆ ಸುಮ್ಮಸುಮ್ಮನೆ//
ನಿಟ್ಟುಸಿರಲಿ ತಾಯಿ ಅಹವಾಲು ಸಲ್ಲಿಸುತಿರಲು
ನ್ಯಾಯಜ್ಯೋತಿಗೆ ಎಣ್ಣೆ ಸಿಗದಾಗುತಿದೆ ಸುಮ್ಮಸುಮ್ಮನೆ//
ವಾಹ್ ವಾಹ್ ಜೀ…. ಸುಪರ್ ಇದೆ.
ಧನ್ಯವಾದಗಳು ಸರ್ ಜೀ
ಸುಮ್ಮ ಸುಮ್ಮನೆ ಅರ್ಥ ಗರ್ಭಿತವಾಗಿದೆ
ಓದಲನವು ಮಾಡಿಕೊಟ್ಟ ಸಂಗಾತಿ ಬಳಗಕ್ಕೆ ಧನ್ಯವಾದಗಳು ಹಾಗೇಯೇ ಡಾ.ರೇಣುಕಕ್ಕನಿಗೂ ಅಭಿನಂದನೆಗಳು
ಸುಮ್ಮ ಸುಮ್ಮನೆ ತುಂಬಾ ಚೆನ್ನಾಗಿದೆ.