ಕಾವ್ಯ ಸಂಗಾತಿ
ಸೀರೆ
ಶಿ ಕಾ ಬಡಿಗೇರ
ನೀರೆಗೆ ಸೀರೆಯೇ ಶೋಭೆ; ಇಲಕಲ್ಲ
ಸೀರೆಗೆ ಅವಳು ಹಾತೊರೆದು ಹರಿಸಿದ ಬೆವರು
ಇನ್ನೂ ಹಸಿಯಾಗಿಯೇ ಇದೆ; ನನಗೇಕೋ ತಳಮಳ
ಸೀರೆ ತುಂಬ ಮುಗಿಸಲಾರದಷ್ಟು ಕತೆಗಳು
ಹಗಲು ಮೈಗೆ; ರಾತ್ರಿ ಹೊದ್ದುಕೊಳ್ಳಲೂ
ಕೈ ಹಿಡಿದವನಿಗೆ ಅದೆಷ್ಟೋ ಧಿಕ್ಕಾರ;
ತಾಳಿ ಸೀರೆ ಬಿಟ್ಟರೆ ಮತ್ತೊಂದಕ್ಕೆ ಜಾಗವಿಲ್ಲ…
ಸೂಜಿಯೂ ನಾಚಿಕೊಂಡಿತ್ತು, ದಾರವೂ ಕೂಡ
ಬಿಟ್ಟು ಬಿಡದ ಸೀರೆಯ ಹೊಲಿಗೆ ಕಸುಬಿಗೆ ; ಸೀರೆಗೆ
ಮೈ ನಡುಕ ಬಿಸಿಲೆಂದರೆ ; ಅವಳಿಗೂ ಪಿಸಿದರೇಗೆ?
ಸುಮ್ಮನಿರದ ಕಾಲ, ಬದಲಾವಣೆಯದೇ ಚಿಂತೆ
ಸೀರೆ ತೊರೆದ ನೀರೆ ಈಗ ನೈಟಿಯ ಗುಲಾಮಳು;
ಚೂಡಿಯ ಸರದಾರಳು…ಸೀರೆ ಮೂಲೆ ಹಿಡಿದ
ದಿನ ನೈಟಿ, ಚೂಡಿಗಳ ಥಕಧಿಮಿತ…
ಕ್ಷಮಿಸು ಅವ್ವ ಸೀರೆಗೆ ನೀ ಅತ್ತ ದಿನ
ಕಣ್ಣೀರಿಗೆ ಕರುಣೆ ಇರಲಿಲ್ಲ; ಚೂಡಿ – ನೈಟಿಗಳ
ಕುಣಿತ ಕಂಡವಳೂ ಅಲ್ಲ; ಇಲಕಲ್ಲ ಸೀರೆ
ತಂದು ಕೊಡದ ವಯಸ್ಸೂ ನನ್ನದಿರಲಿಲ್ಲ…
ಈಗ ನೀನಿಲ್ಲ ಇಲಕಲ್ಲ ಸೀರೆ ಇನ್ನೂ ಉಸಿರಾಡುತ್ತಿದೆ
ನೈಟಿ ಚೂಡಿಗಳ ಆರ್ಭಟದ ಸದ್ದಿಗೆ ದಂಗಾಗಿದೆ;
ಸೀರೆ ಕಂಡ ಹೊತ್ತು ಒಳಗೊಳಗೆ ಸಂಕಟ
ಕಣ್ಣೆದುರು ಕವಿತೆಯ ಮಿಸುಕಾಟ…