ಡಾ. ಪುಷ್ಪಾ ಶಲವಡಿಮಠ,ಕವಿತೆ-ಅಪ್ಪ ಕಾಡಿದ

ಕಾವ್ಯ ಸಂಗಾತಿ

ಅಪ್ಪ ಕಾಡಿದ

ಡಾ. ಪುಷ್ಪಾ ಶಲವಡಿಮಠ

ಅಪ್ಪ ಬಹುವಾಗಿ ಕಾಡಿದ…
ಎದೆಯ ನೆಲದ ಮೇಲೆ
ಹೆಜ್ಜೆಯೂರಿ ನಡೆದ ಅಪ್ಪ
ಹಚ್ಚ ಹಸಿರಾಗಿ ಕಾಡಿದ

ಇಡಿಯಾಗಿ ಸಂಬಳ ತಂದು ಅಮ್ಮನ ಕೈಗಿತ್ತು
ಹಿಡಿಯಲ್ಲಿ ಒಂದಿಷ್ಟು ಕದ್ದು ಚಿಲ್ಲರೆಯನಿಟ್ಟುಕೊಂಡು
ಅಕ್ಕರೆಯಿಂದ ಮುಷ್ಠಿಯಲಿ ಮಕ್ಕಳ ಕೈಗಿತ್ತು
ಖುಷಿಪಟ್ಟ ಅಪ್ಪ ಬಹುವಾಗಿ ಕಾಡಿದ

ತಡರಾತ್ರಿ ಕೆಲಸ ಮುಗಿಸಿ ಬಂದ
ಅಪ್ಪನಿಗಾಗಿ ಹಂಚಿಟ್ಟು ಬಿಸಿರೊಟ್ಟಿ ತಟ್ಟಿದ
ಅವ್ವನಂತೆ ಮುಚ್ಚಿಟ್ಟು ಮಡದಿಗೆ ಮಲ್ಲಿಗೆ ಮುಡಿಸಿದ
ಅಪ್ಪ ಬಹುವಾಗಿ ಕಾಡಿದ

ಗದರಿಸುವ ಅವ್ವನ ಕಣ್ಣಿಗಿಂತ
ರಮಿಸಿ ಮುದ್ದಿಸುವ ಅಪ್ಪನ ತೊಡೆಯೇ ಹಿತವಾಗಿತ್ತು
ಯುವರಾಣಿಯ ಗತ್ತಿಗೆ ನಸುನಕ್ಕು
ಗಲ್ಲಕೆ ಮುತ್ತಿಟ್ಟ ಅಪ್ಪ ಬಹುವಾಗಿ ಕಾಡಿದ

ಮುಪ್ಪಾವರಿಸಿತು ಅಪ್ಪನಿಗೆ ನಿವೃತ್ತಿಯೂ ಆಯಿತು
ಹೊರೆಯಾದೆನೇನು! ಎಂದು ಒಳಗೊಳಗೆ ಕೊರಗಿದರೂ ಹೊರಗೆ ತೋರಗೊಡದೇ
ಕಲ್ಪವೃಕ್ಷವಾಗುತ್ತಲೇ ಬೆಳೆದ ಅಪ್ಪ ಬಹುವಾಗಿ ಕಾಡಿದ

ಮನತನವೆಂಬ ಬಳ್ಳಿಗೆ ಬಿದಿರಂತೆ ಆಸರೆಯಾಗಿ
ಬಿಡದೆ ಬಳ್ಳಿಯಲಿ ನಗುವ ಹೂವ ಅರಳಿಸಲು
ರಾತ್ರಿಯಿಡಿ ನಿದ್ದೆಯಿಲ್ಲದೇ ಹೊರಳಾಡಿದ
ಅಪ್ಪ ಬಹುವಾಗಿ ಕಾಡಿದ

ಅಪ್ಪನೆಂದರೆ ಹೀಗೇ ಭದ್ರಗೋಡೆ
ಅಚಲತೆಯ ಬೆಟ್ಟ ಸ್ವಾಭಿಮಾನದ ಬಯಲು
ಉತ್ತಷ್ಟು ಫಸಲು ನೀಡಿದ ಹೊಲ
ಉಡಿಯ ತುಂಬ ಪರಿಮಳವಾಗಿ ಅಪ್ಪ ಬಹುವಾಗಿ ಕಾಡಿದ


9 thoughts on “ಡಾ. ಪುಷ್ಪಾ ಶಲವಡಿಮಠ,ಕವಿತೆ-ಅಪ್ಪ ಕಾಡಿದ

    1. ತುಂಬಾ ಸುಂದರವಾಗಿದೆ.
      ಅವ್ವ ಹೆತ್ತವಳಾದರೆ
      ಅಪ್ಪ ಸಂರಕ್ಷಸುವಾತ

      ಅಪ್ಪ ಸಿಟ್ಟಿನ ಸಿಪಾಯಿ
      ಹೃದಯದಲ್ಲಿ ಸಿಹಿ ಪಪ್ಪಾಯಿ

    2. ಅಪ್ಪನ್ನ ವರ್ಣಿಸಲು ಎಷ್ಟು ಸುಂದರ ಪದಗಳು. ನಿಮ್ಮಕವನ ಎಷ್ಟುಚಂದ. ನನ್ನಪ್ಪನ ನೆನಪು ಮತ್ತೊಮ್ಮೆ ಬೆಚ್ಚಗಾಯಿತು.

  1. ಅಪ್ಪಂದಿರು ಹಾಗೇ
    ಕಾಡುತ್ತಲೇ ಇರುತ್ತಾರೆ
    It’s a beautiful poem Dr Pushpa
    Well conveyed

  2. ಅಪ್ಪ ಎಂದರೇನೇ ಹಾಗೇಯೆ……
    ಯಾವಾಗಲೂ ಪ್ರೀತಿಯ ಬುತ್ತಿಯಿಂದ ತುತ್ತು ಮಾಡಿ ಉಣ್ಣಿಸುವ
    ಅತ್ತರೆ ಮುದ್ದಿಸುವ….
    ರಚ್ಚ ಹಿಡಿದರೆ ಗಧರಿಸುವ
    ಹೀಗೆ…

  3. ಅಪ್ಪ ಅಂದ್ರನೇ ಹಾಗೆ
    ಅಸಾದೃಶ್ಯ ಕೈಗೆಟುಕದ ಭಾವಾಗಸ
    ಪದಗಳ ಬಂಧನಕೆ ಸಿಗದವನು.

  4. ಅಭಿನಂದನೆಗಳು ಮೇಡಂ. ಚೆನ್ನಾಗಿ ಕವನ ಬರೆದಿದ್ದೀರಿ. ಧನ್ಯವಾದಗಳು.

  5. ಅಪ್ಪನ ಕೈಬೆರಳು
    ಹಿಡಿದರೆ
    ಜಗತ್ತೇ ಕಿರುಬೆರಳಲಿ….
    ಅಪ್ಪ ಅಂದರೆ
    ಘನತೆ…
    ಅಪ್ಪ ಅಂದರೆ ಔದಾರ್ಯ
    ಅಪ್ಪ ಎಂದರೆ
    ಶಿಸ್ತಿನ ಸಿಪಾಯಿ….
    ಅಪ್ಪ ಒಬ್ಬನಿದ್ದರೆ
    ಅರ್ಧ ರಾಜ್ಯವೇ ಅಂಗೈಲಿ
    ಪದಗಳಿಗೆ ನಿಲುಕದ
    ಮಹಾನುಭಾವ ಅಪ್ಪ
    SS Alexander

Leave a Reply

Back To Top