ಹೀಗೊಂದು ಸೇವೆ ಪ್ರಚಾರವಿಲ್ಲದ ಪ್ರವಚನ

ವಿಶೇಷ ಲೇಖನ

ಹೀಗೊಂದು ಸೇವೆ ಪ್ರಚಾರವಿಲ್ಲದ ಪ್ರವಚನ

ಹೀಗೊಂದು ಸೇವೆ ಪ್ರಚಾರವಿಲ್ಲದ ಪ್ರವಚನ

ಮೈ ನಡುಗಿಸುವ ಚಳಿ ಆದರೂ ಬೇಗ ಆಸ್ಪತ್ರೆಗೆ ಹೋಗಬೇಕು ಸ್ವಲ್ಪ ತಡವಾದರೆ ಆಸ್ಪತ್ರೆಯ ಕಿವ್ ನಲ್ಲಿ ನಿಂತು ಚೀಟಿ ಮಾಡಿಸುವ ಪರಿಸ್ಥಿತಿ ಚಿಕ್ಕವನಿದ್ದಾಗ ಓಣಿಯಲ್ಲಿ ನಲ್ಲಿ ನೀರು ಬಿಟ್ಟಾಗ ಸರತಿ ಸಾಲಲ್ಲಿ ನಿಂತು ಜಗಳವಾಡುತ್ತಾ ನೀರು ಹಿಡಿದ ಘಟನೆಗಳು ನೆನಪಿಗೆ ಬರುತ್ತವೆ ಆಗೇನೋ ಸರಿ ಆದರೆ ಈಗ ನನ್ನಿಂದ ಸಾಧ್ಯವಿಲ್ಲ  ಹಾಗಾಗಿ ಆ ಕಿರಿ ಕಿರಿಯನ್ನು ತಪ್ಪಿಸಿಕೊಳ್ಳಲು ಮೈ ಕೊರೆಯುವ ಚಳಿಯಲ್ಲೂ ನನ್ನ ಚೀತಾ ವನ್ನು ಮೈ ತೊಳೆದು ಪಳ ಪಳ ಹೊಳೆಯುವಂತೆ ಮಾಡಿ ಸ್ನಾನ ಪೂಜೆ ಮುಗಿಸಿ ಮಡದಿಯೊಂದಿಗೆ ಹುಳಿ ಬುತ್ತಿಯನ್ನು ಕೆಂಪ್ಚಟ್ನಿಯೊಂದಿಗೆ ಸವಿದೆ.

ಆಸ್ಪತ್ರೆಯ ಕಾರ್ಯವೇನೋ ಮುಗಿಯಿತು ಬಹುಬೇಗ ಹೋದದ್ದರಿಂದ ಮತ್ತೆ ಹೊಟ್ಟೆ ಗುರ್ ಗುರ್ ಶಬ್ಧ ಮಾಡಲು ಶುರುಮಾಡಿತು ಅದಕ್ಕೀಗ ಏನಾದರೂ ಹಾಕಲೇ ಬೇಕು ಅಂತ ಕಣ್ಣಾಡಿಸುತ್ತಲೇ ಹಾವೇರಿ ಸರ್ಕಲ್ ಬಳಿ ಕಂಡದ್ದು ದಾವಣಗೆರೆ ಬೆಣ್ಣೆ ದೋಸೆ ಹೋಟೆಲ್ ಆಹಾ ಆಹಾ ಗಂಡನ ಮನೆಯಲ್ಲಿ ತವರಿನ ಬುತ್ತಿ ಊಟದ ಗಂಟು ಕಂಡಷ್ಟೇ ಖುಷಿಯಾಯಿತು ಚೀತಾದ ಬ್ರೇಕ್ ಜೋರಿಗಿ ತುಳಿದೇ ಬಿಟ್ಟೆ ಅದು ಕುಯ್ ಶಬ್ಧ ಮಾಡುತ್ತ ರಸ್ತೆಯ ಪಕ್ಕ ನಿಂತೇ ಬಿಟ್ಟಿತು. ಒಳಗೆ ಕೂತು ಎರಡು ಸಿಂಗಲ್ ಬೆಣ್ಣೆ ದೋಸೆ ಆರ್ಡರ್ ಮಾಡಿ ಚಪ್ಪರಿಸಿ ತಿಂದು ಮತ್ತೆ ಒಂದು ಸಿಂಗಲ್ ಕಟ್ ಬೆಣ್ಣೆ ದೋಸೆಯನ್ನೂ ಗಬಕ್ ನೆ ಬಾಯಿಗೆ ಹಾಕಿ ಚೀಲವನ್ನು ತುಂಬಿದೆವು ಉದರವೇನೋ ಖುಷಿಯಾಯಿತು ಈಗ ನಾಲಿಗೆಯ ಸರದಿ ಅದಕ್ಕೆ ಜಿಡ್ಡು ಸ್ವಲ್ಪ ಹೆಚ್ಚಾಗಿಯೇ ಆಯ್ತು ಕಡಕ್ ಕೆ ಟಿ ಬೇಕೆನಿಸಿತು ಅದನ್ನೂ ತರಿಸಿ ಸ್ವಲ್ಪ ಸ್ವಲ್ಪ ಸವಿದೆವು.

ಉದರ ಪೋಷಣೆ ಸಂತೃಪ್ತಿಯಿಂದ ಜರುಗಿರಲು ನಮ್ಮ ಚೀತಾ ಹೊಟ್ಟೆಗೂ ಸ್ವಲ್ಪ ಹಾಕಿ ತಿಳುವಳ್ಳಿಯ ಕಡೆ ಹೊರಟೆವು ಬೈ ಪಾಸ್ ಬಳಿ ನಾಲ್ಕು ಕಾಖಿ ಪೇದೆಗಳ ತಂಡ ಹಸಿವಿನಿಂದ ಆರ್ಭಟಿಸುತ್ತಿದ್ದರು ನಾನು ಸೀಟ್ ಬೆಲ್ಟ್ ಹಾಕಿರಲಿಲ್ಲ ಮಾಸ್ಕ್ ಕೂಡ ಇರಲಿಲ್ಲ ಜೋಬು ಮುಟ್ಟಿಕೊಂಡೆ ಮಧ್ಯಾಹ್ನದ ಭೋಜನಕ್ಕೆಂದು ₹ 200 ಬಿಟ್ಟರೆ ಮತ್ತೇನು ಇರಲಿಲ್ಲ ಇವರ ಕೈಗೆ ಸಿಕ್ಕರೆ ನನ್ನನ್ನೇ ತಿಂದು ಮುಗಿಸುವುದು ಖಾತರಿಯಾದ್ದರಿಂದ ಚೀತಾ ವೇಗವನ್ನು ಕಡಿಮೆಗೊಳಿಸಿತು ಯು ಟರ್ನ್ ಆಗೇ ಬಿಟ್ಟಿತು ತಿಮ್ಮಪ್ಪ ನಾಯ್ಕನು ಕನಕದಾಸನಾದ ಪುಣ್ಯ ಸ್ಥಳವಾದ ಕಾಗಿನೆಲೆಯತ್ತ ಚೀತಾ ಓಡತೊಡಗಿತು ನಾವು ಅದರಮೇಲೆ ಆರಾಮಾಗಿ ಮಾತಾಡುತ್ತ ಹೊರಗಿನ ಪರಿಸರ ವೀಕ್ಷಿಸುತ್ತ ಕುಳಿತೆವು ಚೀತಾದ ಸ್ಟೇರಿಂಗ್ ನನ್ನ ಬಳಿಯೇ ಇತ್ತು ಹಾಗಾಗಿ ತಮ್ಮ ಹರೀಶ ಊರಿಗೆ ಬರುವೆ ಎಂದಿದ್ದ ಎಲ್ಲಿರಬಹುದು ಎಂದು ಕೇಳು ಅಂತ ಸ್ವಾತಿಗೆ ಹೇಳಿದೆ. ಅವಳು ಮೈದುನನಿಗೆ ಫೋನಾಯಿಸಿದಾಗ ಅವನು ಮಾಸೂರಿನ ಬಳಿ ಇರುವೆ ಬಸ್ ಗೆ ಕಾಯುತ್ತಿರುವೆ ಎಂದ ಹಾಗಾಗಿ ಹಿರೇಕೆರೂರಿಗೆ ಬರಲು ಹೇಳು ನಾವು ಅಲ್ಲೇ ನಿನ್ನನ್ನು ಪಿಕ್ ಅಪ್ ಮಾಡುತ್ತೇವೆ ಎಂದು ಹೇಳಿ ಚೀತಾದ ದಿಕ್ಕನ್ನು ಹಂಸಭಾವಿ ಮಾರ್ಗವಾಗಿ ಹಿರೇಕೆರೂರಿನ ಕಡೆ ತಿರುಗಿಸಿದೆ.

ಹಂಸಭಾವಿಯಿಂದ ಹಿರೇಕೆರೂರಿಗೆ ಹದಿನಾಲ್ಕು ಕಿ ಮೀ ಅದನ್ನು ಸಾಗುವುದು ಹರಸಾಹಸವಾಗಿತ್ತು ಕೆಸರಿನ ಗದ್ದೆಯ ಓಟದಂತಾಗುತ್ತಿತ್ತು . ಆದರೆ ಈಗ ಪ್ರಯಾಣ ಹಿಂದಿನಂತಿರಲಿಲ್ಲ ನಮ್ಮ ಚೀತಾ ವೇಗವಾಗಿ ಸುಲಲಿತವಾಗಿ ಸರಾಗವಾಗಿ ಚಲಿಸಿತು ಹೂವಿನ ಹಾಸಿಗೆಯ ಮೇಲೆ ಮಲಗಿದಂತಿತ್ತು ಪ್ರಯಾಣ. ಹೋದ ಮಾರ್ಗದಲ್ಲೇ ತಮ್ಮನನ್ನು ಕರೆದುಕೊಂಡು ಊಟ ಮಾಡೋಣವೆಂದರೆ ಮಡದಿ ಸ್ವಾತಿ ಮತ್ತು ತಮ್ಮ ಹರೀಶ ಹಿರೇಕೆರೂರಿಗೆ ಹಳಬರು ಅವರಿಗೆ ಹೊಸ ರುಚಿ ಬೇಕಿತ್ತು ಹಾಗಾಗಿ ಚೀತಾ ಬಂದ ಮರ್ಗದಲ್ಲಿಯೇ ಮತ್ತೆ ಹಂಸಭಾವಿಗೆ ನಮ್ಮನ್ನು ಕರೆದೊಯ್ಯಿತು.

ಅಲ್ಲಿ ಒಂದು ಒಳ್ಳೆಯ ಸಸ್ಯಾಹಾರಿ ಢಾಬಾ ಅಥವಾ ಖಾನವಾಳಿಯನ್ನು ಅರಸುತ್ತಿದ್ದಿವು. ರಸ್ತೆಯ ಪಕ್ಕದಲ್ಲೇ ಒಂದು ಸಣ್ಣ ಪೆಟ್ಟಿಗೆ ಅಂಗಡಿಯನ್ನು ಇಟ್ಟುಕೊಂಡು ಒಳಗೆ ಜಾಗವಿಲ್ಲದೇ ಹೊರಗೆ ಬಿಸಿಲಿನಲ್ಲಿ ಸುಕ್ಕಡರಿದ ದೇಹ ಹೊದ್ದು ಕೂತ ಮಾರುದ್ದದ ಗಡ್ಡಧಾರಿಯನ್ನು ವಿಚಾರಿಸಿದಾಗ ಹಣೆಯ ಮೇಲೆ ಕೈ ಯಿಟ್ಟು  ಬಲಗೈ ನಡುಗಿಸುತ್ತ ತುಸು ದೂರದ ಆಲದ ಮರವನ್ನು ತೋರಿ ಆ ಮರದ ಕೆಳಗಿದೆ ನೋಡಿ ನಿಮಗೆ ಬೇಕಾದ ಖಾನವಳಿ ಅಲ್ಲದೆ ಎಂದು ಸೋತು ಬಿದ್ದ ಜಟಾಯುವಂತೆ ದಾರಿ ತೋರಿದ.

ನಮ್ಮ ಚೀತಾ ಮಹಾಲಕ್ಷ್ಮೀ ಸಸ್ಯಾಹಾರಿ ಖಾನಾವಳಿ ಊಟ ಸಿದ್ಧವಿದೆ ಎಂಬ ಬೋರ್ಡ್ ನೋಡಿದೊಡೆ ರಸ್ತೆಯ ಪಕ್ಕಕ್ಕೆ ನಿಂತು ನಮ್ಮನ್ನೂ ಕೆಳಗಿಳಿಸಿತು. ಸ್ವಲ್ಪ ಹೊತ್ತು ಚೀತಾ ಗೆ ಬೈ ಹೇಳಿ ಆಲದ ಮರದ ಕೆಳಗೆ ಪುಟ್ಟ ಮನೆಯಂತಿರುವ ಸುಂದರವಾಗಿ ಅಲಂಕೃತವಾದ ಖಾನಾವಳಿಗೆ ಚಪ್ಪಲಿ ಹಾಕಿಕೊಂಡು ಒಳ ಪ್ರವೇಶಿಸಲು ಹೃದಯ ಒಪ್ಪಲಿಲ್ಲ . ಪಾದರಕ್ಷೆಗಳನ್ನು ಖಾನಾವಳಿಯ ಹೊರಗೇ ಬಿಟ್ಟು ಒಳ ನಡೆದವು. ಒಳ ಪ್ರವೇಶಿಸುತ್ತಿದ್ದಂತೆಯೇ ಮನೆಯ ವಾತಾವಾರಣ ಆತ್ಮೀಯ ಸ್ವಾಗತವೂ ಸಿಕ್ಕಿತು ಖಾನಾವಳಿಯ ಮಾಲಿಕರು, ಅಡುಗೆಯವರು ಹಾಗೂ ಸೇವಕರೂ ಆದ ಗಂಡ ಹೆಂಡತಿಗಳಾಡಿದ ನುಡಿಗಳೇ ಮೃಷ್ಟಾನ್ನ ಭೋಜನದಂತಿತ್ತು. ಅದರಲ್ಲೂ ಆ ಮಹಿಳೆಯನ್ನು ನೋಡುತ್ತಿದ್ದರೆ ಅಮ್ಮನ ಪ್ರೀತಿಯನ್ನು ಎದೆಯಲ್ಲಿ ತುಂಬಿಕೊಂಡು ಮಮಕಾರವನ್ನು ಕಣ್ಣುಗಳಲ್ಲಿ ಹರಿಸುವ ಮುಂಗಾರು ಮಳೆ ಚಲನಚಿತ್ರದಲ್ಲಿ  ಪೂಜಾಗಾಂಧಿಯ ಅಮ್ಮನ ಪಾತ್ರ ವಹಿಸಿದವರಂತೆಯೇ ಇದ್ದರೂ ಅದು ಕೂಡ ನಮ್ಮ ಮನ ಸೆಳೆಯಿತು.

ಮೆನು ಕಾರ್ಡ್ ಕೊಡುವುದು ಅಲ್ಲಿಯ ಪದ್ಧತಿಯಾಗಿರಲಿಲ್ಲ ಗೋಡೆಯ ಮೇಲೆ ದೊಡ್ಡಕ್ಷರಗಳಲ್ಲಿ ಚಪಾತಿಗಿಷ್ಟು ರೈಸ್ ಗಿಷ್ಟು ಚಪಾತಿ ಅಥಾವ ರೊಟ್ಟಿ ಊಟಕ್ಕಿಷ್ಟು ಅಂತ ಬರೆದದ್ದು ನೋಡಿ ಮೂರು ರೊಟ್ಟಿ ಊಟ ಆರ್ಡರ್ ಮಾಡುತ್ತಲೇ ಈರುಳ್ಳಿ, ಕೋಸಂಬರಿ, ಎರಡು ತರಹದ ಪಲ್ಯೆ, ಉಪ್ಪಿನಕಾಯಿ ಹಾಗೂ ಮೊಸರನ್ನು ತಟ್ಟೆಯಲ್ಲಿ ಕಣ್ಣಿಗಾನಂದವಾಗುವಂತೆ ಅಲಂಕರಿಸಿ ತಂದು ಕೊಟ್ಟರು .

ಭೋಜನವೂ ಸಹ ಮನೆಯೂಟದಂತೆಯೇ ನಿರರ್ಗಳವಾಗಿ ಸಾಗಿತು ಕಾರಣ ಅವರ ಮಾತುಕತೆ ತುಂಬಾ ಆತ್ಮೀಯವಾಗಿತ್ತು. ಊಟವೇನೋ ಮುಗಿಯಿತು ಕೊನೆಗೆ ಮೊಸರಿನೊಂದಿಗೆ ತುಸು ಸಕ್ಕರೆಯನ್ನು ಬೆರೆಸಿ ತಿನ್ನುತ್ತಿದ್ದಾಗ ಆಹಾ ಆಹಾ ಆಹಾ ಜಠರ , ಕರುಳಿನ ಪ್ರತಿಯೊಂದು ಭಾಗವೂ ಸಂತೃಪ್ತಿಯಾನುಭವದಲ್ಲಿ ಮಿಂದೇಳಿದಂತಾಯಿತು.

ಉದರ ಸಂತೃಪ್ತಿಯಿಂದಾಗಿ ಪರ್ಸ್ ನಿಂದ 200 ರೂಪಾಯಿ ತಗೆದು ಕೊಟ್ಟೆ ಅವರು ಕೇವಲ 140 ಕೊಡಿ ಸರ್ ಸಾಕು ನಿಮ್ಮ ಯಜಮಾನಿಯವರದ್ದು ಬೇಡ ಅಂದರು. ಏಕ್ರೀ ಮೂರು ಊಟಕ್ಕೆ ಎಷ್ಟು ಆಗುತ್ತೋ ಅಷ್ಟು ತಗೋಳಿ ಎಂದರೆ ಅವರು ಹೇಳಿದ್ದು ಇಲ್ಲ ಸರ್ ಕಳೆದ ಹದಿನೆಂಟು ವರ್ಷಗಳಿಂದ ನಡೆಸಿಕೊಂಡು ಬಂದ ಆಚರಣೆ ಇದು ಗರ್ಭಿಣಿಯರಿಗೆ ನಮ್ಮ ಖಾನಾವಳಿಯಲ್ಲಿ ಉಚಿತ ಸೇವೆ ಎಂದರು ಆಗ ನನ್ನ ಉದರವಷ್ಟೇ ತುಂಬಿರಲಿಲ್ಲ ಮನ ಹೃದಯಗಳೂ ತುಂಬಿ ಹರಿಯುತ್ತಿದ್ದವು.

ಅಲ್ಲೇ ಸ್ವಲ್ಪ ಹೊತ್ತು ಕೂತು ಅವರ ಬಳಿ ಮಾತನಾಡುವ ಆಸೆಯಾಯಿತು ಅವರು ನಡೆದು ಬಂದ ಹಾದಿಯನ್ನೆಲ್ಲಾ ಕೇಳಿದೆ ಅವರು ಹದಿನೆಂಟು ವರ್ಷಗಳ ವೃತ್ತಾಂತವನ್ನೆಲ್ಲಾ ಉಣಬಡಿಸಿದರು. ಇಂತಹಾ ಆಡಂಬರ ಪ್ರಚಾರದ ಒಳಗುಟ್ಟುಗಳನ್ನು ಹೊತ್ತು ಸೇವೆ ಮಾಡುವ ಜನರ ಮಧ್ಯೆ ಹೀಗೆ ಆಡಂಬರವಿಲ್ಲದೆ ಪ್ರಚಾರವಿಲ್ಲದೆ ಅಂಗವಿಕಲರಿಗೆ , ಗರ್ಭಿಣಿಯರಿಗೆ ಉಚಿತವಾಗಿ ಈ ಸೇವೆ ಮಾಡುತ್ತಾ ಬಂದಿರುವ ಮತ್ತು ಮುಂದೆಯೂ ಪಾಲಿಸುವ ಹಾದಿಯಲ್ಲಿರುವ ಅವರ ಹೃದಯಕ್ಕೊಂದು ಮನದಲ್ಲೇ ಶರಣು ಶರಣು ಎಂದು ಹೊರನಡೆದೆ.

ಚೀತಾ ಜೊತೆ ಮತ್ತೆ ನಮ್ಮ ಸವಾರಿ ತಿಳುವಳ್ಳಿಯ ಕಡೆ ಸಾಗಿತು ಆದರೆ ದಾರಿಗುಂಟಾ ಅವರ ಸೇವೆಯ ಭಾವ ಮಲ್ಲಿಗೆಯ ಪರಿಮಳದಂತೆ ಹರಡುತ್ತಲೇ ಇತ್ತು. ಕಾಲ ಮಾಸಿ ನೆನಪಿನಂಗಳದಲ್ಲಿ ಮಾತು ಕತೆ ಮರೆತರೂ ಸಹಾ ಹೃದಯದಲ್ಲಿ ಮಲ್ಲಿಗೆ ಹೂವುಗಳು ಹಾಗೇ ಮಾಸದೆ ಉಳಿದವು . ಒಂದು ಸುತ್ತಾಟ ಇಷ್ಟೆಲ್ಲಾ ನೆನಪಿನ ಕಥೆಗಳನ್ನು ಕ್ಷಣಗಳನ್ನು ನಮ್ಮೊಳಗೆ ಮೂಡಿಸುತ್ತೆ ಅಲ್ವಾ . ಆ ಹೆಣ್ಣಿಗೆ ಇನ್ನೊಂದು ಹೆಣ್ಣಿನೊಳಗೆ ಅರಳುತ್ತಿರುವ ಮೊಗ್ಗಿನ ಪರಿಮಳ ಹೇಗೆ ಗ್ರಹಿಕೆಗೆ ಸಿಕ್ಕಿತು. ಪ್ರಶ್ನೆಗಳು ಮುಗಿಲಿನೆತ್ತರಕ್ಕೆ ಹೃದಯದಲ್ಲಿ ಮೂಡುತ್ತಿದ್ದವು ಹಾಗೇ ಒಂದು ದಿನದ ನಂತರ ಕರೆ ಮಾಡಿ ಮೇಡಂ ನೀವು ಮುಂಗಾರು ಮಳೆ ಚಲನಚಿತ್ರದಲ್ಲಿ ಪೂಜಾ ಗಾಂಧಿ ಯವರ ತಾಯಿ ಪಾತ್ರ ಮಾಡಿದ್ದಾರಲ್ವಾ ತೇಟ್ ಅವರಂತೆಯೇ ಇದ್ದೀರಿ ನಿಮ್ಮಿಬ್ಬರನ್ನೂ ಜೊತೆಗೆ ನಿಲ್ಲಿಸಿದರೆ ಅಕ್ಕ ತಂಗಿಯ ತರಹವೇ ಕಾಣುತ್ತೀರಿ ಎಂದೆ. ಆ ನಟಿ ತುಸು ನಕ್ಕು ಅವರು ನನ್ನ ಸ್ವಂತ ಅಕ್ಕ ಸರ್ ಅಂದ್ರು. ಮನದಂಗಳದಲ್ಲೊಂದು ಮಿಂಚು ಮೂಡಿತು ಮತ್ತೆ ವಾಸ್ತವದ ಬದುಕಿನ ಅನಾವರಣವಾಯಿತು. ಇದೇ ಸಹಜ ಜೀವನ ಇದೇ ವಾಸ್ತವ ಇದೇ ಬದುಕ ಬಂಡಿ ನಡೆಸುವ ಹರಿ ಗೋಲು ಹೀಗೆ ಹೃದಯಂಗಳದಲ್ಲಿ ಕಥೆ ಮುಗಿದರೂ ಮಾತುಕತೆ ಮುಂದುವರೆಯುತ್ತಲೇ ಇತ್ತು ………….

 ವಿಜ್ಞಾಪನೆ

ಈ ಕಥೆಯನ್ನು ಓದಿದ ಸರ್ವರೂ ಹಂಸಭಾವಿಯ ಕಡೆ ಹಾದಾಗೆಲ್ಲಾ ಒಮ್ಮೆ ಮಹಾಲಕ್ಷ್ಮೀ ಖಾನಾವಳಿ ಗೆ ಭೇಟಿಕೊಟ್ಟು ಬನ್ನಿ ಅವರ ಸೇವೆಯಲ್ಲಿ ತಮ್ಮದು ಒಂದು ಭಾಗವಿರಲಿ.


 ಯೋಗೇಂದ್ರಾಚಾರ್ ಎ ಎನ್

Leave a Reply

Back To Top