ಕಾವ್ಯ ಸಂಗಾತಿ
ಮನಸ ಕೆಣಕುತ್ತಿದೆ ಗೋವಿನ ಹಾಡು
ಟಿ.ದಾದಾಪೀರ್
ನಿನ್ನೆ ನಡೆದ
ರೈತ ದಿನಾಚರಣೆಗೆ
ನಿನಗೊಂದು ವ್ಯಾಟ್ಸಪ್ ಮೆಸೇಜ್ ಕಳಿಸಬೇಕೆಂದಿದ್ದೆ
ಅದೇ
ರೈತ ಮತ್ತು ನೇಗಿಲುಗಳ ಹೊತ್ತು ಎತ್ತು ಭೂಮಿ ಹೂಳುವ
ಚಿತ್ರ ಮತ್ತು
ಶುಭಾಶಯದ ಒಂದು ಲೈನ್
ನಾನೇನು ರೈತಳಲ್ಲ ಎನಬೇಡ
ಬೆಳೆ ಬಿತ್ತವರು ಮಾತ್ರ ರೈತರಲ್ಲ
ಗೆಳತಿ
ಎದೆಯಲಿ ಕನಸ ಬಿತ್ತುವರು
ರೈತರೇ
ಅನ್ನದಾತ, ಭಾಗ್ಯವಿಧಾತ
ನೇಗಿಲ ಯೋಗಿ , ಜೈ ಕಿಸಾನ್
ಎತ್ತುಗಳ ಜೊತೆ ನಿಂತ ಬಡಕಲು ದೇಹದ ರೈತನಿಗೆ ಎಷ್ಟೊಂದು
ಭೂಷಣಗಳ ಜೈಕಾರ ನೀನು ಕೇಳಿದ್ದಿಯಾ ಅಲ್ಲವೇ ?
ಚಮ೯ಗಂಟಿಕ್ಕಿ
ಮೇವು ಉಣ್ಣದ ,
ಕೂರದ,
ಮಲಗದ
ನಿತ್ರಾಣ ಜಾನುವಾರಿನ
‘ಅಂಬಾ ‘ ಎಂಬ
ನೋವಿನ ಆಲಾಪ ಮಾತ್ರ
ಕೇಳುತ್ತಲೆ ಇಲ್ಲ
ಎದೆಯ ಭಾಷೆ ಅಥ೯ವಾಗದ ನಮಗೆ
ಮೂಕ ಜಾನುವಾರುಗಳ ತಾಕಲಾಟ
ಹೇಗೆ ತಿಳಿವುದು
ಅಲ್ಲವೇ
ಹಾಲು ಕುಡಿದ ನನಗೂ, ನಿನಗೂ
ಕೆಚ್ಚಲು ಹಿಂಡಿದ ನೋವು
ತಾಕದಾಗಿದೆ
ಗಿಣ್ಣು, ಬೆಣ್ಣೆಗಳ
ತಿಂದ ದೇಹ ಕೃತಜ್ಞತೆಯ
ಮರೆತೆ ಬಿಟ್ಟಿತೇ ?
ನಿನಗೊಮ್ಮೆ ನಾನು ಕ್ಲಾಸಲ್ಲಿ ಕಲಿತ ಗೋವಿನ ಹಾಡು
ಪದ್ಯ ಹೇಳಬೇಕೆಂದಿರುವೆ
ಹುಲಿಗೆ ಕೊಟ್ಟ ಮಾತಿಗೆ ತಪ್ಪಿ ನಡೆಯದ ಗೋವಿನ ನಿಯತ್ತು
ನೀನೊಮ್ಮೆ ಕೇಳಬೇಕು
ಜಗತ್ತು ಕೇಳಿ ಮರೆತಿದೆ
ನೀನು ಮಾತ್ರ ನೆನಪಿಡಬಲ್ಲೆ ..!
ಇರಲಿ ಬಿಡು ಮಾನವ ಸಂಭಂದಗಳೆ
ಮರೆತು ಹೋಗುತ್ತಿವೆ
ಮಾತಿನ ಭಾವನೆಯ ತಿಳಿಯದಂತಾಗಿರುವ ಜನಕ್ಕಿರುವ
‘ಹೃದಯಗಂಟು ರೋಗ’
ಪಾಪ ಗೋವಿಗೇನು ಗೊತ್ತು
ರಾಸು ಉಳಿಯಬೇಕಿವೆ
ಬೆರಣಿ ಇಲ್ಲದೆ ಉರಿಯದ ಒಲೆಗಳು, ಬೇಯದ ರೊಟ್ಟಿ
ಶರಣರ ನೊಸಲಿಗಿ ವಿಭೂತಿಯಾಗದ ಸಗಣಿ
ಎದೆಹಾಲಿಲ್ಲದ ಮಕ್ಕಳ ಗೋಳಾಟ
ಇನ್ಮುಂದೆ….!
‘ನೀನಾರಿಗಾದೆಯೋ ಎಲೆಮಾನವ’
ಮನಸ
ಕೆಣಕುತ್ತಿದೆ
ನೋಡು
ರೋಗಗ್ರಸ್ತ ಗೋವಿನ ಹಾಡು