ಕಾವ್ಯ ಸಂಗಾತಿ
ಅರುಣಾ ಶ್ರೀನಿವಾಸ
ಶಾಲೆಗೆ ಹೋಗುವ ಹುಡುಗಿ
ಕನಸುಗಳನ್ನೆಲ್ಲ
ಜೋಪಾನವಾಗಿ
ಹಾಗೆಯೇ ಚೀಲದೊಳಗೆ ತುಂಬಿ
ಹಿಂದಿರುಗಿಯೂ ನೋಡದೆ
ಸಡಗರದಿಂದ ಶಾಲೆಯೊಳಗೆ
ಓಡಿಹೋಗುವ ಹುಡುಗಿಯನ್ನು
ನೋಡುವುದೇ ಒಂದು ಸೊಗಸು…
ಎದೆಯ ಕಾವ್ಯಗಳು
ಅಲ್ಲೇ ಎದೆಯೊಳಗೆ ಹರಳುಗಟ್ಟಿ
ಆರ್ದ್ರವಾಗಿರುತ್ತವೆ..
ಅವಳು ಒಳಹೊಕ್ಕು
ಕಣ್ಣಂಚಿನಿಂದ ಮರೆಯಾಗುವವರೆಗೂ
ಚಿಗರೆಯಂತೆ ಕುಣಿದು
ಓಡುವಾಗ ನೆಲದಲ್ಲಿ
ರಂಗೋಲಿ ಅರಳುತ್ತದೆ…
ಏನು ಸಂಭ್ರಮವೋ ಅವಳಿಗೆ
ಶಾಲೆಯೆಂದರೆ….
ಪುಟ್ಟ ಎದೆಯೊಳಗೆ
ಹಿಡಿಸದಷ್ಟು ಕನಸುಗಳನ್ನು ತುಂಬಿ
ನಕ್ಷತ್ರ ಲೋಕಕ್ಕೆ ಏಣಿ ಇಡುತ್ತಾಳೆ…
ಒಮ್ಮೊಮ್ಮೆ ಅವಳ ಎದೆಯೊಳಗೆ
ಇಣುಕಿ ನೋಡಬೇಕೆಂಬ
ಹೆಬ್ಬಯಕೆಯಾದರೂ….
ಯಾಕೋ ಇನ್ನಿಲ್ಲದ ಭಯ ಕಾಡುತ್ತದೆ….
ಬರುವ ನಾಳೆಗಳಿಗೆ
ಅವಳ ಕನಸುಗಳನ್ನು
ಬೆಳೆಸುವ ಶಕ್ತಿಯಿದೆಯೋ ಇಲ್ಲವೋ…?
ಹೆಣ್ಣವಳು…
ಹುಚ್ಚು ಕನಸುಗಳೇತಕ್ಕೆ
ಶ್ಶ್…! ಎಂದು ತಾತ್ಸಾರದಲಿ
ಮಾತಾಡಿ ಬಿಡುವ ಮಂದಿಗಳ
ನಡುವೆ…
ಅವಳ ಕಣ್ಣುಗಳ ಹೊಳಪನ್ನು
ಕಾಪಾಡಿಕೊಳ್ಳುವುದೇ
ಒಂದು ಹರಸಾಹಸ…
ಶಾಲೆ ಬಿಟ್ಟು ಮನೆಯತ್ತ
ಓಟ ನೆಟ್ಟಾಗ..
ಸೂರ್ಯ ಮುನಿದು ಮಲಗಿದರೂ
ಅವಳ ಸಂಭ್ರಮ ದಣಿವಿನೊಡನೆ
ರಾಜಿ ಮಾಡಿಕೊಳ್ಳುವುದಿಲ್ಲ…
ಹೇಗಾದರೂ ಜತನದಿಂದ
ಕಾಪಾಡಿಕೊಳ್ಳಬೇಕು
ಹಾಗೆಯೇ ಅವಳ ಕನಸುಗಳನ್ನು…
ಅವಳ ನಾಳೆಗಳಿಗಾಗಿ….
ಓ ದೇವಾ…
ನನಗೊಂದಿಷ್ಟು ಮನೋಬಲ ನೀಡು..
ಕಾವಲುಗಾರ ನಾನಾಗಬೇಕಿದೆ.
ಹುಟ್ಟಿದ ಬೆಳಕೊಂದು
ಹೊಂಬಣ್ಣಕೆ ತಿರುಗುವವರೆಗೂ…
ಸುಂದರ ಕವಿತೆ