ರೋಹಿಣಿ ಯಾದವಾಡ-ಕಳಚಿ ಬಿಡುವೊಮ್ಮೆ

ಕಾವ್ಯ ಸಂಗಾತಿ

ಕಳಚಿ ಬಿಡುವೊಮ್ಮೆ

ರೋಹಿಣಿ ಯಾದವಾಡ

ತೋರುವೆ ಏಕೆ ಗೋಮುಖದಡಿ
ಸಲ್ಲದ ಮುಖವಾಡ ಕಳಚಿ ಬಿಡೋಮ್ಮೆ
ಕುತಂತ್ರದಡಿ ತಂತ್ರಗಳ ಹೆಣೆದು
ತುಳಿದು ವಿಜೃಂಭಿಸುವೆ ಏಕೆ? ಕಳಚಿ ಬಿಡೋಮ್ಮೆ

ಪರದೆಯ ಮುಂದೆ ಜನ ಮೆಚ್ಚುವಂತಿದ್ದು
ತೆರೆಯ ಹಿಂದಿನ ಕಪಟ ಸೂತ್ರಧಾರಿಯೆ
ಕಪಿಮುಷ್ಠಿಯ ಎಳೆಗಳ ಬಿಟ್ಟು
ಅಂತರಂಗದ ಸಾಕ್ಷಿಗೆ ಕಳಚಿ ಬಿಡೋಮ್ಮೆ

ಹೆಣ್ಗರುಳಿನಂತೆ ಕರಗಿ ನಟಿಸುವ
ವಿಕೃತ ಮನಸ್ಸು ತಾಳಿ ಮೆರೆಯುವ
ಬದುಕು ಹಸನುಗೊಳಿಸುವ ನೆಪದಲಿ
ದುಸ್ತರಗೊಳಿಸುವ ಚಾಳಿಬಿಟ್ಟು ಕಳಚಿ ಬಿಡೋಮ್ಮೆ

ಸಮಜಮುಖಿ ಸೇವೆಗೈಯುವವರಿಗೆ
ಸರ್ವಕ್ಷೇತ್ರದಿ ಶಕುನಿ ದಾಳವ ಬಿಡದೆ
ನಿನ್ನ ಬಾಳು ನಿನ್ನ ತಟ್ಟೆಯ ಅನ್ನವಂತೆ
ಅನ್ಯರ ತಟ್ಟೆಯದ ಎತ್ತಿತೋರದೆ ಕಳಚಿ ಬಿಡೋಮ್ಮೆ

ತುಳಿದಷ್ಟು ಪುಟಿದೆಳುವ ಕಾಲವಿದು
ಅಡಗಿಸಿದಷ್ಟು ಬಿಚ್ಚಿಕೊಳ್ಳುವ ಛಲವಿರಲು
ಗೋಮುಖದಡಿ ವ್ಯಾಘ್ರ ಮುಖವೊಂದಿದೆ
ಎಂಬುದು ಬಯಲಾಗುವಷ್ಟರಲೇ ಕಳಚಿ ಬಿಡೋಮ್ಮೆ.


Leave a Reply

Back To Top