ಕೆ.ಶಶಿಕಾಂತ-ರೈತ

ಕಾವ್ಯ ಸಂಗಾತಿ

ರೈತ

ಕೆ.ಶಶಿಕಾಂತ

ಬಿಸಿಲುರಿಯಲಿ, ಮಳೆ ಸುರಿಯಲಿ
ಮನೆ-ನೆರಳನು ನೆನೆಯದೇ
ಹಗಲು ರಾತ್ರಿ ಏನೇ ಇರಲಿ
ಹೊಲವೇ ಇವಗೆ ಬಾಳುವೆ…..

ಎತ್ತು ಎರಡು ಹೂಡಿಕೊಂಡು
ಅವ್ವ ಕಟ್ಟಿದ ಬುತ್ತಿ ಉಂಡು
ರಂಟೆ ಕುಂಟೆ ಬಿಡದೇ ಹೊಡೆದು
ಹೊಲವನೆಲ್ಲ ಹಸನು ಮಾಡಿ
ಬಿತ್ತಿ ಬೆಳೆದು ಜಗಕೆ ಉಣಿಸಿ
ಹಸಿವನಳಿವ ಪರಮಯೋಗಿ…..

ಚಿನ್ನ ಬೆಳ್ಳಿ ಬಯಸಲಿಲ್ಲ
ಹೊಸ ಬಟ್ಟೆಯ ಉಡಲೇ ಇಲ್ಲ
ಹಸಿವು ಕಂಡರೆ ಸಹಿಸುವವನಲ್ಲ
ದುಡಿಯದೇ ಬೇಕೆಂಬುವನೂ ಅಲ್ಲ
ಹೊಟ್ಟೆ ಕಿಚ್ಚು ಪಡುವವನಲ್ಲ
ಆದರೂ ಇವನ ಸುಲಿಗೆಗೆ
ಕೊನೆಯೇ ಇಲ್ಲ.

ದುಡಿದ ಕೂಲಿ ಇಲ್ಲವೆಂದು
ದಿನವೂ ಕೊರಗಿ,ಅತ್ತು ನೊಂದು
ಆದರೂ ಉಳುಮೆ ಬಿಡೆನು ಎನುವ
ಧೀರ ಸೈನಿಕ
ಮಳೆಯ ಮುನಿಸು,ಬೆಳೆಯ ಕನಸು
ಸಿಗುತಲಿಲ್ಲ ಸಂತಸ.
ಇವನ ಕತ್ತು ಕೊಯ್ಯುತಿಹುದು
ಸಾಲದ ಗರಗಸ.

ಈತನ ಮಗನೇ
ಆಳುವ ದೊರೆಯು,
ಹಣದ ಧಣಿಯು
ಕೀರ್ತಿ ಸಿರಿಯು
ಇವನನೇ ಸುಲಿವ
ಗುಳ್ಳೆ ನರಿಯು
ಸೂಟ-ಬೂಟಿನ ಅಧಿಕಾರಿ
ಕಾವಿ ತೊಟ್ಟ ಮಾಯಾ ವಿಕಾರಿ
ಇವರಿಗೆಲ್ಲ ಬಹಳ ರುಚಿಯು
ಅನ್ನದೊಂದಿಗೆ ಇವನ ಜೀವವೂ…

ಆದರೂ ಕೇಳಿ ಮಕ್ಕಳೆ
ನಮ್ಮಯ ನಾಡಿಗೆ
ಹೆಮ್ಮೆಯ ಹೆಸರು
‘ರೈತನ ರಾಜ್ಯ’ವು


Leave a Reply

Back To Top