ಕಾವ್ಯ ಸಂಗಾತಿ
ರಾಹುಲ ಮರಳಿ-
ಗಜಲ್
ತುತ್ತು ಅನ್ನಕ್ಕಾಗಿ ನೆತ್ತರವ ಹರಿಸುವನು ನೇಗಿಲಯೋಗಿ
ತನ್ನ ಜೀವವ ಮುಡಿಪಿಟ್ಟು ದುಡಿಯುವನು ನೇಗಿಲಯೋಗಿ
ನೇಸರನ ಕಿರಣ ಆಚೆ ಹೊಮ್ಮುವ ಮೊದಲು ಹೊರಡುತ್ತಾನೆ
ನೇಗಿಲವ ಕಟ್ಟಿ ಹೊಲದಲಿ ಊಳುವನು ನೇಗಿಲಯೋಗಿ
ಧನಿಕನ ದುರಾಸೆಗೆ ಮುಗ್ಧ ರೈತ ಬಲಿಯಾಗುತಿಹನು
ಹಗಲಿರುಳೆನ್ನದೆ ಜಗದ ಆಹಾರಕ್ಕಾಗಿ ಬಿತ್ತುವನು ನೇಗಿಲಯೋಗಿ
ರೈತನ ಹೆಸರಲಿ ಪೇಟೆಯಲಿ ದುಡಿವರು ಕೋಟಿ
ಹಿಡಿ ಹಿಟ್ಟು ತಿನ್ನದೆ ಕಷ್ಟ ಪಡುವನು ನೇಗಿಲಯೋಗಿ
ನೂರಾರು ಕೀಟಗಳು ಬೆಳೆಯ ಹಾಳು ಮಾಡುತಿವೆ
ಕಣ್ಣ ರೆಪ್ಪೆ ಆರದಂತೆ ಬಿಕ್ಕಿಬಿಕ್ಕಿ ಅತ್ತವನು ನೇಗಿಲಯೋಗಿ
ಸರ್ಕಾರ ಇನ್ನಾದರೂ ಕಣ್ಣು ತೆರೆಯಬೇಕಿದೆ ‘ಜೀವಕವಿ’
ಬೆಳೆಗೆ ತಕ್ಕ ಬೆಲೆ ಕೊಟ್ಟರೆ ತುಸು ನಗುವನು ನೇಗಿಲಯೋಗಿ