ತಿಂಗಳ ಕವಿಕಾವ್ಯ ಪರಿಚಯ ಸುಜಾತಾ ರವೀಶ್
ಸುಜಾತಾ ರವೀಶ್
ದೀಪ_ಪತಂಗ
ಮನೆಯ ಭದ್ರತೆ ಮಹತ್ವ
ಏನೆಂದು ಅರಿವಾಗುವಷ್ಟರಲ್ಲಿ
ಹೊಸಿಲು ದಾಟಿ ಬಂದಾಗಿತ್ತು
ಗೋಮುಖ ವ್ಯಾಘ್ರಗಳುಂಟು
ಎಂದು ಅರಿವಾಗುವುದಕ್ಕೆ
ಸಹಾಯ ಯಾಚಿಸಬೇಕಿತ್ತು
ಹೊಳೆವುದೆಲ್ಲ ಚಿನ್ನವಲ್ಲ
ಎಂದು ತಿಳಿಯುವಷ್ಟರಲ್ಲಿ
ಬದುಕೇ ಮಣ್ಣಾಗಿತ್ತು
ಹೊಟ್ಟೆಪಾಡು ಸಾಗಿಸಲು
ಕತ್ತಲೆಯಲ್ಲಿ ಮೌನವಾಗಿ
ಸೆರಗು ಹಾಸಬೇಕಿತ್ತು
ದೀಪಕ್ಕೆ ಮುತ್ತಿದ ಪತಂಗ
ತಾನೆಂದು ಗೊತ್ತಾಗುವುದರಲ್ಲಿ
ಮೈ ಪೂರಾ ಸುಟ್ಟಾಗಿತ್ತು
ಹಿಡಿದದ್ದು ತಪ್ಪುದಾರಿ
ಮರಳಲು ಸಾಧ್ಯವಿಲ್ಲ
ಕಾಲವೇ ಮಿಂಚಿ ಹೋಗಿತ್ತು
******
ನಿತ್ಯದ ಹಾಡು
ಕಚೇರಿಯ ರಾಜಕಾರಣ
ಕೆಲಸದ ಕಸಿವಿಸಿ
ಚಿಟ್ಟೆನಿಸುವ ತಲೆನೋವು
ಏನೋ ಒಂದು ಬೇಯಿಸಿಟ್ಟರೆ
“ಥೂ..ಉಪ್ಪುಮಯ ಪಲ್ಯ
ನನ್ನ ಬೇಗ ಮೇಲೆ ಕಳಿಸಿ ಬಿಡ್ತೀಯಾ “
ಕಟ್ಟಿಕೊಂಡಾಗಿನಿಂದ ಸುರಿಸಿದ ಕಣ್ಣೀರು
ಉಪ್ಪಾಗಿ ಕ್ಷಾರವಾಗಿದೆ ಇವಳ ಸ್ವಗತ
ಮಾತಿಗೇನು ಕಮ್ಮಿ ಇಲ್ಲ
ಖಾರಕ್ಕೆ ಮೆಣಸಿನ ಕಾಯೇ ಬೇಕಿಲ್ಲ
ಚುಚ್ಚಿ ನೋಯಿಸುವ ಉವಾಚ
ಒಟ್ನಲ್ಲಿ ನೆಮ್ಮದಿ ಹಾಳು ಬೇಸರ
ಬಿಕ್ಕಿನ ಜತೆ ಹಸಿವನೂ ನುಂಗಿ ಮಲಗಿದಳು
ಎಲ್ಲಾ ಮರೆತ ಅವನಿಗೇನೋ ಲಹರಿ
ಕೊಂಚ ಕೊಸರಾಟ ಮಿಡುಕಾಟ ಉಸಿರಾಟ
ಗಾದೆಯ ನಿಜ ಮಾಡಿದ ಸಾರ್ಥಕ್ಯ
ಎದೆಗೊರಗಿದ ಅವಳಿಗೊಂತರಾ ಸಮಾಧಾನ
———————————————–
ಸುಜಾತಾ ರವೀಶ್ ಪರಿಚಯ
ಹೆಸರು : ಸುಜಾತಾ ಎನ್
ಕಾವ್ಯನಾಮ : ಸುಜಾತಾ ರವೀಶ್
ತಂದೆ ದಿ. ಎನ್ ನರಹರಿರಾವ್ ನಿವೃತ್ತ ರೈಲ್ವೆ ಉದ್ಯೋಗಿ ಹಾಗೂ ತಾಯಿ ದಿ. ಶಕುಂತಲಾ ಎನ್ ರಾವ್ ಗೃಹಿಣಿ.
ಇಬ್ಬರು ಸೋದರಿಯರು ಛಾಯಾ ಮತ್ತು ವೈಶಾಲಿ.
ಪತಿ ಪಿ ರವೀಶ್. ಸ್ವಂತ ಉದ್ಯೋಗ
ಸ್ಥಳ : ಮೈಸೂರು
ಹುಟ್ಟಿದ ದಿನಾಂಕ : ೧೮.೦೪.೧೯೬೬
ವಿದ್ಯಾಭ್ಯಾಸ : ಎಂ ಕಾಂ
ವೃತ್ತಿ : ಭಾರತೀಯ ಜೀವ ವಿಮಾ ನಿಗಮದಲ್ಲಿ ಉನ್ನತ ದರ್ಜೆ ಸಹಾಯಕಿ
ಮೈಸೂರು ಶಾಖೆ ೫
ಪ್ರವೃತ್ತಿ : ಕನ್ನಡ ಸಾಹಿತ್ಯ ಓದುವಿಕೆ ಇತ್ತೀಚೆಗೆ ಬರವಣಿಗೆ .
ಬರವಣಿಗೆಯಲ್ಲಿನ ಕೆಲ ಮೈಲಿಗಲ್ಲುಗಳು:
ಶಿವಮೊಗ್ಗೆಯ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿಎಸ್ಸಿ ಕನ್ನಡ ಪಠ್ಯ ಪುಸ್ತಕಕ್ಕೆ “ಮುಖವಾಡಗಳು” ಕವನ ಆಯ್ಕೆಯಾಗಿ ಪ್ರಕಟಗೊಂಡಿದೆ.
ಸ್ವತಂತ್ರ ಕವನ ಸಂಕಲನ ಅಂತರಂಗದ ಆಲಾಪ ಮತ್ತು ಮನವೀಣೆಯ ಮೀಟು ಪ್ರಕಟವಾಗಿವೆ .
ಇನ್ನೆರಡು ಕವನಸಂಕಲನಗಳು ಹಾಗೂ ಲಲಿತ ಪ್ರಬಂಧಗಳ ಮತ್ತು ಪುಸ್ತಕ ವಿಮರ್ಶೆಗಳ ಸಂಕಲನ ಪ್ರಕಟಣೆಯ ಹಂತದಲ್ಲಿವೆ.
ಸಾಹಿತ್ಯ ಪರಿಷತ್ ಪತ್ರಿಕೆಯಲ್ಲಿ ಪ್ರಬಂಧಗಳು ಪ್ರಕಟವಾಗಿವೆ. ಇನ್ನೂ ಕೆಲವು ಸಂಪಾದಿತ ಕೃತಿಗಳಲ್ಲಿ ಪ್ರಬಂಧಗಳು ಪ್ರಕಟವಾಗಿವೆ .
ಮುಕ್ತಕ ಪರಿಷತ್ತಿನ ಸಂಪಾದಿತ ಪ್ರಕಟಣೆಗಳ ೨ ಪುಸ್ತಕಗಳಲ್ಲಿ ೨೦೦ ಕ್ಕೂ ಹೆಚ್ಚು ಮುಕ್ತಕಗಳು ಪ್ರಕಟವಾಗಿವೆ.
ಹಲವಾರು ಬ್ಲಾಗ್ ಗಳಲ್ಲಿ ಅಂಕಣದ ಬರಹಗಳು ಕವನಗಳು ಗಜಲ್ ಗಳು ಪ್ರಕಟವಾಗಿವೆ . ಹಾಲಿ ಭಾವಸಂಗಮ ಟೆಲಿಗ್ರಾಂ ಬಳಗ ಹಾಗೂ ಸಂಗಾತಿ ಬ್ಲಾಗ್ ಮತ್ತು ಶ್ರಾವಣ ಬ್ಲಾಗ್ಗಳಲ್ಲಿ ಅಂಕಣ ಬರೆಯುತ್ತಿದ್ದೇನೆ. ಕೊಪ್ಪಳದ ವಿನಯವಾಣಿ ಪತ್ರಿಕೆಯಲ್ಲಿ ಗುರುವಾರದ ವಿಶೇಷ ಸಂಚಿಕೆ ಮಹಿಳಾ ಧ್ವನಿಯಲ್ಲಿ ನನ್ನ ಅನುರಣನ ಅಂಕಣ ಪ್ರಕಟವಾಗುತ್ತಿದೆ.
ಅವಧಿ, ನಸುಕು, ಅವ್ವ ಪುಸ್ತಕಾಲಯ, ಸಂಗಾತಿ, ಸುರಹೊನ್ನೆ, ಶ್ರಾವಣ ಈ ಬ್ಲಾಗ್ ಗಳಲ್ಲಿ ಹಾಗೂ ಪ್ರತಿಲಿಪಿ ಮಾಮ್ಸ್ ಪ್ರೆಸ್ಸೋ ಆಪ್ಗಳಲ್ಲಿ ನಿಯಮಿತವಾಗಿ
ಬರವಣಿಗೆ.
ಸಂಪಾದಿತ ೯ ಕವನ ಸಂಕಲನಗಳಲ್ಲಿ
ಕವನಗಳು ಪ್ರಕಟ.
ಶತ ರತ್ನ ಸಂಪಾದಿತ ಚುಟುಕು ಸಂಕಲನ ದಲ್ಲಿ 4 ಚುಟುಕುಗಳು ಪ್ರಕಟವಾಗಿವೆ.
೮ ಸಂಪಾದಿತ ಕಥಾಸಂಕಲನಗಳಲ್ಲಿ ಕಥೆಗಳು ಪ್ರಕಟವಾಗಿವೆ .
ಮುಖ ಹೊತ್ತಿಗೆ ಹಾಗೂ ವಾಟ್ಸಾಪ್ ಗುಂಪುಗಳಲ್ಲಿ ನ ಸ್ಪರ್ಧೆಗಳಲ್ಲಿ ಸಂದಿರುವ ಪ್ರಶಸ್ತಿ ಪತ್ರಗಳು ಸಾಕಷ್ಟು ಸಂಖ್ಯೆಯಲ್ಲಿವೆ.
ಮಕ್ಕಳ ಕಥೆ ಹಾಗೂ ಕವನಗಳು ಸಂಪಾದಿತ ಕೃತಿಗಳಲ್ಲಿ ಪ್ರಕಟ .
ನಾಡಿನ ಹಲವಾರು ಖ್ಯಾತ ನಿಯತಕಾಲಿಕೆಗಳಾದ
ಸಂಯುಕ್ತ ಕರ್ನಾಟಕ, ಜನಮಿಡಿತ, ಪ್ರತಿನಿಧಿ, ಪ್ರಜಾಪರ್ವ, ಸಿಂಹ ಧ್ವನಿ, ಕ್ರಾಂತಿಧ್ವನಿ, ಪ್ರಥಮ ಹೆಜ್ಜೆ, ಯಾದಗಿರಿ ಟೈಮ್ಸ್ ಪತ್ರಿಕೆಗಳಲ್ಲಿ ಕವನ, ಗಝಲ್, ಲೇಖನ, ಪ್ರಬಂಧಗಳು ಬೆಳಕು ಕಂಡಿವೆ.
ಮುಖಹೊತ್ತಿಗೆಯ ಖ್ಯಾತ ಸಾಹಿತ್ಯಿಕ ಗುಂಪು ಸಾಹಿತ್ಯೋತ್ಸವದ ನಿರ್ವಾಹಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭಾವಸಂಗಮ ಮತ್ತು ಅಕ್ಷರದೀಪ ವಾಟ್ಸಪ್ ಬಳಗಗಳಲ್ಲಿ ನಿರ್ವಾಹಕಿಯಾಗಿದ್ದಾರೆ.
ಮತ್ತೆ ಕೆಲವು ಮುಖಹೊತ್ತಿಗೆ ಹಾಗೂ ವಾಟ್ಸಾಪ್ ಬಳಗಗಳಲ್ಲಿ ಸ್ಪರ್ಧೆಗಳನ್ನು ನಿರ್ವಹಿಸಿ ನಿರ್ಣಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಹಲವಾರು ಕವಿಗೋಷ್ಠಿಗಳು ಹಾಗೂ ಆನ್ಲೈನ್ ಕವಿ/ಗಝಲ್ ಗೋಷ್ಠಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ, ಕವನ ಸ್ಪರ್ಧೆಯ ತೀರ್ಪುಗಾರರಾಗಿ
ಕ್ಲಬ್ ಹೌಸ್ ನ ಚರ್ರ್ಚಾಗೋಷ್ಠಿಗಳಲ್ಲಿ ಭಾಗವಹಿಸುವಿಕೆ.
ಲೇಖಿಕಾ ಸಾಹಿತ್ಯ ಬಳಗ ಮುಖಹೊತ್ತಿಗೆ ಗುಂಪಿನಲ್ಲಿ ಸುಧಾಮೂರ್ತಿ, ದಮಯಂತಿ
ನಾರೇಗಲ್ ಕಮಲಾ ಹಂಪನಾ ಹೆಚ್ ಎಸ್ ಪಾರ್ವತಿ ಮಿಂತಾದವರ ಕೃತಿಗಳ ಬಗ್ಗೆ ಪ್ರಬಂಧಗಳನ್ನು ಮಂಡಿಸಿದ್ದಾರೆ.
ಬಸವ ಟಿವಿಯ ಸಾಹಿತ್ಯ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ.
ಸಾಹಿತ್ಯದ ನಾನಾ ಪ್ರಕಾರಗಳಾದ ಕವನ’ ಹನಿಗವನ’ ಚುಟುಕು’ ರುಬಾಯಿ,
ವಚನ, ಮುಕ್ತಕ, ಗಝಲ್, ಹಾಯ್ಕು, ಟಂಕಾ, ಅಬಾಭಿ, ಫಿಬನೋಚಿ, ಸಿಂಖೇನ್, ಸಾಂಗತ್ಯ, ಸುನೀತ,ತನಗ, ಷಟ್ಪದಿಗಳು ಎಲ್ಲದರಲ್ಲೂ ಸ್ವಲ್ಪ ಮಟ್ಟಿಗಿನ ಕೃಷಿ ಸಾಧಿಸಿದ್ದಾರೆ. ಲಲಿತ ಪ್ರಬಂಧಗಳು, ಪುಸ್ತಕ ಪರಿಚಯ, ನ್ಯಾನೋ ಕಥೆ, ಸಣ್ಣಕಥೆ ಇವುಗಳು ಸಹ ಇವರ ಮೆಚ್ಚಿನ ಪ್ರಕಾರಗಳು.
ಪ್ರಶಸ್ತಿ ಮತ್ತು ಗೌರವಗಳು:
*ಮೈಸೂರು ಆಕಾಶವಾಣಿ ಕೇಂದ್ರದವರು
೧೫.೦೯.೨೦೨೧ ರಂದು ಮಹಿಳಾ ರಂಗ ಕಾರ್ಯಕ್ರಮದಲ್ಲಿ ನನ್ನ ಸಂದರ್ಶನ ನಡೆಸಿದ್ದಾರೆ.
ಶಿವಮೊಗ್ಗೆಯ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿಎಸ್ಸಿ ಕನ್ನಡ ಪಠ್ಯ ಪುಸ್ತಕಕ್ಕೆ “ಮುಖವಾಡಗಳು” ಕವನ ಆಯ್ಕೆಯಾಗಿ ಪ್ರಕಟಗೊಂಡಿದೆ.
ಪ್ರತಿಷ್ಠಿತ ಬಸವ ಟಿವಿಯಲ್ಲಿ ಸಾಹಿತಿ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ .
ಪುಸ್ತಕ ವಿಮರ್ಶೆಯ ಸಂದರ್ಶನ ಪ್ರಸಾರವಾಗಿದೆ
ಪ್ರಥಮ ಸಂಕಲನ ಅಂತರಂಗದ ಆಲಾಪಕ್ಕೆ ಉಮಾಶಂಕರ ಪ್ರತಿಷ್ಠಾನದ ಉತ್ತಮ ಮುಖಪುಟ ಪ್ರಶಸ್ತಿ ದೊರಕಿದೆ
ರಾಜ್ಯ ಬರಹಗಾರರ ಸಂಘ ರಿಜಿಸ್ಟರ್ಡ್ ಇವರ ಸಂಸ್ಥೆಯಿಂದ “ಸಾಹಿತ್ಯ ಸಿಂಧು” ಪ್ರಶಸ್ತಿ ದೊರಕಿದೆ
*ಸಂಗಾತಿ ಬ್ಲಾಗ್ ಪತ್ರಿಕೆಯಲ್ಲಿ ಸಂದರ್ಶನ
*ಕಡಲವಾಣಿ ಪತ್ರಿಕೆಯಲ್ಲಿ ಸಂದರ್ಶನ ಪ್ರಕಟವಾಗಿದೆ .
*ಸಂಪೂರ್ಣ ಛಾನಲ್ ಗುಂಪಿನಿಂದ ಯೂಟ್ಯೂಬ್ ನಲ್ಲಿ ಸಂದರ್ಶನ.
- ಪ್ರತಿಲಿಪಿ ಬಳಕೆದಾರರ ಗುಂಪು ಇವರಿಂದ ಕ್ಲಬ್ ಹೌಸ್ ನಲ್ಲಿ “ವೀಕೆಂಡ್ ವಿತ್ ಪ್ರತಿಲಿಪಿ” ಪ್ರಥಮ ಮಾಲಿಕೆಯಲ್ಲಿ ೦೩.೦೭.೨೦೨೧ರಂದು ಸಂವಾದ ಮತ್ತು ಸಂದರ್ಶನ .
*ಭಾವಸಂಗಮ ಟೆಲಿಗ್ರಾಂ, ಮುಖಹೊತ್ತಿಗೆ ಹಾಗೂ ಯೂಟ್ಯೂಬ್ ಗುಂಪುಗಳಲ್ಲಿ ನೆಲದ ನಕ್ಷತ್ರಗಳು ಮಾಲಿಕೆ ಪ್ರಥಮ ಸಂಚಿಕೆಯಲ್ಲಿ
೦೫.೦೯.೨೦೨೧ರಂದು ಪರಿಚಯ .
ವೃತ್ತಿ ಪ್ರವೃತ್ತಿಗಳ ನಡುವೆ ಆರೋಗ್ಯಕರ ಸಮತೋಲನ ಕಾಪಾಡಿಕೊಂಡು ತಾಯಿ ಕನ್ನಡಾಂಬೆಗೆ ಮತ್ತಷ್ಟು ಸೇವೆ ಸಲ್ಲಿಸಬೇಕೆಂಬ ಅಸೆ ಲೇಖಕಿಯವರದು.