ಅಂಕಣ ಸಂಗಾತಿ

ಚಾಂದಿನಿ

ಚಂದ್ರಾವತಿ ಬಡ್ಡಡ್ಕ ಅವರ ರಸಭರಿತ ಅನುಭವಗಳ ಕತೆ

ಪ್ರವಾಸ ಸಿದ್ಧತೆಯ ಪ್ರಯಾಸ

ಸೆಪ್ಟೆಂಬರ್ ತಿಂಗಳಲ್ಲಿ ಮೌಂಟ್ ಅಬುಗೆ ಹೋಗುವ ಪ್ರಸ್ತಾಪ ಇದೆ ಬರ್ತೀರಾ ಅಂತ ಅಕ್ಕ ಕೇಳಿದ್ರು. ತಿರ್ಗಾಡುವುದೆಂದರೆ ನನಗೆ ಪರಮ ಸಂತೋಷ. ಹಾಗಾಗಿ ಯಾರಾದರೂ ಎಲ್ಲಾದರೂ ಟೂರ್ ಪ್ರೋಗ್ರಾಂ ಹಾಕ್ಕೊಂಡಾಗ ಒಂದು ಸೀಟು ಉಳಿದಿದ್ದರೆ, ಅಥವಾ ಬರುತ್ತೇನೆಂದು ಕೊನೆ ಗಳಿಗೆಯಲ್ಲಿ ಯಾರಾದರೂ ಕೈ ಕೊಟ್ಟರೆ ನನಗೊಂದು ಆಹ್ವಾನ ಇರುತ್ತದೆ. ಹಾಗಾಗಿ ಅಕ್ಕ ಕೇಳಿದಾಗ ಹಿಂದೆ ಮುಂದೆ ನೋಡದೆ ಓಕೆ ಅಂದೆ. ಕೆಲವುದಿನಗಳ ಬಳಿಕ ಯಾರು ಕರ್ಕೊಂಡೋಗುವುದು ಯಾವಾಗ ಹೊರಡುವುದು ಎಷ್ಟು ಜನ ಎಂದೆಲ್ಲ ವಿವರಣೆ ಕೇಳಿ ಪ್ರಾಯೋಗಿಕವಾಗಿ ಮಾನಸಿಕವಾಗಿ ಹೊರಡಲು ಸಿದ್ಧಳಾದೆ.

ನಾನು ಎಲ್ಲೇ ಹೋಗುವುದಿದ್ದರೆ, ನಮ್ಮ ಮನೆ ಓನರ್ ಚಿಕ್ಕಮ್ಮನನ್ನು ಒಂದು ಮಾತು ಕೇಳುವುದು ವಾಡಿಕೆ. ಅವರೂ ಎಲ್ಲಾದರೂ ಹೋಗುವಾಗ ನನಗೊಂದು ಸೀಟಿಗೆ ಟವೆಲ್ ಹಾಕಿಟ್ಟಿರುತ್ತಾರೆ. ಹಾಗಾಗಿ ಹತ್ತು ದಿನದ ಟೂರ್ ಹೋಗ್ವಾನ ಚಿಕ್ಕಮ್ಮಾಂತ ಕೇಳಿದೆ. ಒಮ್ಮೆಗೆ ಪೋಯೀಂತ ಹೇಳಿದರೂ, ಮತ್ತೆ ಸಡನ್ನಾಗಿ ಚಿಕ್ಕಪ್ಪನತ್ರ ಒಂದು ಮಾತು ಕೇಳಿ ಹೇಳ್ತೇನೆ ಅಂತ ಹೇಳಿದರು. ಮತ್ತು ಚಿಕ್ಕಪ್ಪನನ್ನೂ ಟೂರ್ ಹೋಗುವಾ ಅಂತ ಮನ ಒಲಿಸಲು ಆರಂಭಿಸಿದರು. ಮರುದಿನ ನನ್ನನ್ನು ಕಂಡಾಗ ಚಿಕ್ಕಪ್ಪ ಬರುದಿಲ್ಲ ಅಂತೆ ನಾನು ಬರ್ತೇನೆ ಅಂತ ಹೇಳಿದರಾದರೂ, ಇವರನ್ನು ಒಬ್ಬರನ್ನೇ ಬಿಟ್ಟು ಅಷ್ಟುದಿನ ಹೇಗೆ ಹೋಗುವುದು ಎಂಬ ಚಿಂತೆಯಿಂದ ತಮ್ಮ ಪತಿಯ ಓಲೈಕೆ ಮುಂದುವರಿಸಿದರು.

ಬ್ರಹ್ಮಕುಮಾರಿ ಸಂಘಟನೆಯ ಪ್ರಧಾನ ಕೇಂದ್ರ ಮೌಂಟ್‌ಅಬುನಲ್ಲಿ ನಡೆಯುವ ಕೃಷಿ ಸಮ್ಮೇಳನಕ್ಕೆ ಸುಳ್ಯದ ಕೇಂದ್ರದವರು ಕೃಷಿಕರನ್ನು ಕರೆದೊಯ್ಯಲು ಮುಂದಾಗಿದ್ದರು. ಅದರೊಂದಿಗೆ ಗುಜರಾತ್ ಹಾಗೂ ರಾಜಸ್ಥಾನದ ಸುತ್ತುಮುತ್ತಲ ಪ್ರೇಕ್ಷಣೀಯ ಸ್ಥಳಗಳಿಗೆ ಕರೆದೊಯ್ಯುವ ಯೋಜನೆಯನ್ನೂ ಹಾಕಿಕೊಂಡಿದ್ದರು. ಮೊದಲ ಐದು ದಿನಗಳು ಸುತ್ತಾಟವೆಂದೂ ಕೊನೆಯ ಐದು ದಿನಗಳು ಮೌಂಟ್ಅಬು ಆಶ್ರಮದಲ್ಲಿ ನಡೆಯುವ ಕೃಷಿ ಸಮ್ಮೇಳನದಲ್ಲಿ ಭಾಗವಹಿಸಿ, ಅಲ್ಲಿ ಸ್ಥಳೀಯ ಸ್ಥಳಗಳಿಗೆ ಭೇಟಿ ನೀಡಿ ಬರುವುದು ಎಂಬುದು ಟೂರ್ ಪ್ಲಾನ್ ಆಗಿತ್ತು. ಅದಕ್ಕೆ ತಕ್ಕಂತೆ ನಮ್ಮ ಪೂರ್ವತಯ್ಯಾರಿಗಳನ್ನು ಮಾಡಿಕೊಳ್ಳಬೇಕಿತ್ತು.

ಈ ಮಧ್ಯೆ ಚಿಕ್ಕಮ್ಮ, ಚಿಕ್ಕಪ್ಪನನ್ನು ಟೂರ್‌ಗೆ ಬನ್ನೀ ಅಂತ ಒತ್ತಾಯ ಮಾಡುವುದನ್ನು ಎಡೆಬಿಡದೆ ಮುಂದುವರಿಸಿದ್ದರು ಮತ್ತು ಅದರಲ್ಲಿ ಭಾಗಶಃ ಸಫಲರೂ ಆಗಿದ್ದರು. ಮುಂಗಡ ಹಣ ಪಾವತಿಗೆ ಕೊನೆಯ ದಿನಾಂಕಕ್ಕಾಗುವಾಗ ಚಿಕ್ಕಮ್ಮ ತನ್ನ ಮನಒಲಿಕಾ ಕಾರ್ಯದಲ್ಲಿ ಯಶಸ್ವಿಯಾಗಿದ್ದು ಚಿಕ್ಕಪ್ಪನ ಮನಪರಿವರ್ತನೆಯಾಗಿ ಅವರಿಗೂ ಮುಂಗಡ ಪಾವತಿಸಿಯೂ ಆಯ್ತು.

ಇಲ್ಲಿಂದ ಬಳಿಕ ಒಂದು ತಿಂಗಳ ಗ್ಯಾಪೇ ಇದ್ದರೂ ಹೋದಲ್ಲಿ ಬಂದಲ್ಲಿ ಸಿಕ್ಕಲ್ಲಿ ಮಾತುಕತೆಯ ವೇಳೆ ಮೌಂಟ್‌ಅಬು ಪ್ರವಾಸದ ಬಗ್ಗೆ ಒಂದೆರಡು ಮಾತುಗಳು ಇದ್ದವು. ಕೊನೆಯಲ್ಲಿ “ನೋಡುವ ಇನ್ನೂ ದಿನ ಉಂಟಲ್ಲ” ಎಂಬಲ್ಲಿಗೆ ಮಾತು ಮುಗಿಯುತ್ತಿತ್ತು. ನೋಡನೋಡುತ್ತಿದ್ದಂತೆ ದಿನಗಳು ಕಳೆದವು. ಪ್ರವಾಸದ ದಿನಗಳು ಸಮೀಪಿಸಿದವು. ಇನ್ನೇನು ಒಂದು ಹತ್ತದಿನೈದು ದಿನಗಳು ಬಾಕಿ ಇದ್ದಾವೆ ಅಂದಾಗ ಸಂಘಟಕರು ಒಂದು ಮೀಟಿಂಗ್ ಕರೆದರು. ಪ್ರವಾಸದ ಬಗ್ಗೆ ಹೋಗುವ ಜಾಗಗಳ ಬಗ್ಗೆ ತಿಳಿಸಿ ಟೂರ್ ಸಲಹೆ ಸೂಚನೆಗಳನ್ನು ನೀಡಿದರು. ಅದರಲ್ಲಿ ಐದೈದು ದಿನಕ್ಕೆ ಆಗುವಂತೆ ಬೇರೆಬೇರೆ ಬ್ಯಾಗುಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಹೇಳಿದ್ದರು. ಮೌಂಟ್ ಅಬು ತಲುಪುವ ತನಕ ಗುಜರಾತ್‌ನ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ತೆರಳುವ ವೇಳೆಗೆ ಬೇಕಿರುವ ಬಟ್ಟೆ ಮತ್ತಿತರ ವಸ್ತುಗಳು ಹಾಗೂ  ಮೌಂಟ್‌ಅಬು ತಲುಪಿದ ಮೇಲೆ ಬೇಕಾಗಿರುವ ವಸ್ತುಗಳದ್ದು ಇನ್ನೊಂದು ಬ್ಯಾಗು. ಇದನ್ನು ಪದೇಪದೇ ತೆಗೆಯುವಂತಿಲ್ಲ ಮತ್ತು ಅದು ಬಸ್ಸಿನ ಡಿಕ್ಕಿಯಲ್ಲಿ ಭದ್ರವಾಗಿರುತ್ತದೆ. ಇಲ್ಲಿಂದ ಶುರುವಾಯ್ತು ನಮ್ಮ ಪ್ರವಾಸದ ಪ್ರಯಾಸಕರವಾದ ಪೂರ್ವ ಸಿದ್ಧತೆಗಳು.

ಪ್ರವಾಸಕ್ಕೆ ಒಂದು ಹತ್ತು ದಿನ ಬಾಕಿ ಇದ್ದಿರಬಹುದು. ಅದೇನಕ್ಕೋ ಫೋನಿಸಿದ್ದ ಕುಸುಮಕ್ಕ ತಮ್ಮೆಲ್ಲ ಬಟ್ಟೆಗಳಿಗೆ ಇಸ್ತ್ರಿ ಹಾಕಿ  ಬ್ಯಾಗಿನಲ್ಲಿ ಮಡಿಚಿಟ್ಟು ಆಯಿತೆಂದೂ, ಇನ್ನೇನಿದ್ದರೂ ಸಣ್ಣ ಪುಟ್ಟ ವಸ್ತುಗಳನ್ನು ಜೋಡಿಸಿಕೊಂಡರೆ ಸಾಕು ಎಂದರು. ಇವರಿಗೇನು ಅಷ್ಟು ಅರ್ಜೆಂಟು, ಇನ್ನೂ ಹತ್ತು ದಿನವಿದೆ ಎಂದು ಮನಸ್ಸು ಹೇಳಿದರೂ, ಸಣ್ಣಮಟ್ಟಿನ ಒಂದು ಟೆನ್ಷನ್ ಆರಂಭವಾಯಿತು. ಈ ಕುಸುಮಕ್ಕ ಚಿಕಮನಿಗೆ ಪೋನ್ ಮಾಡಿದಾಗಲೂ ಇಸ್ತ್ರಿ ಸಂಪೂರ್ಣಗೊಂಡ ವಿಷಯ ತಿಳಿಸಿದ್ದಾರೆ. ಅವರು ಅದನ್ನು ಮಾತಾಡುವಾಗೆಲ್ಲ ಹೇಳಿ ನನ್ನ ಸ್ಲೈಟ್ ಟೆನ್ಷನ್ ಮೀಡಿಯಂ ಟೆನ್ಷನ್ನಾಯಿತು. ಅದಕ್ಕೆ ಸರಿ ಎಂಬಂತೆ ನನಗೆ ಬಿಡುವೇ ಇಲ್ಲದಂತೆ ಕೆಲಸದ ಮೇಲೆ ಕೆಲಸವಿದ್ದು ನಾನ್ಯಾವಾಗ ತಯ್ಯಾರಿ ಮಾಡೋದು ಎಂಬುದಾಗಿ ಟೆನ್ಷನ್ ಮತ್ತಷ್ಟು ಬಿಗಡಾಯಿಸಿತು.

ಕೊನೆಗೂ ಇನ್ನು ಎರಡೇ ದಿನ ಎಂದಾಗ ವಿಧಿ ಇಲ್ಲದೆ ನಾನೂ ಪ್ಯಾಕಿಂಗ್ ಆರಂಭಿಸಿದೆ. ಈ ಐದೈದು ದಿನಕ್ಕೆ ಅಗತ್ಯ ವಸ್ತುಗಳು ಮತ್ತು ಬಟ್ಟೆಗಳನ್ನು ತುಂಬಿಸುವುದೇ ಒಂದು ಸವಾಲು ಎಂಬಂತಾಯಿತು. ಈ ಬಟ್ಟೆಯನ್ನು ಈ ಬ್ಯಾಗಿಗೆ ಹಾಕಲೋ ಆ ಬ್ಯಾಗಿಗೆ ಹಾಕಲೋ. ಈ ವಸ್ತು ಅಲ್ಲಿಗೆ ಸಾಕೋ ಇಲ್ಲಿಗೆ ಬೇಕೋ. ಯಾವ ಬ್ಯಾಗಿನಲ್ಲಿ ಯಾವುದು ತುಂಬಲಿ. ಬಟ್ಟೆಗಳು ಐದೈದು ದಿನಕ್ಕೆ ಪಾಲಾದ ಬಳಿಕ ಮಿಕ್ಕುಳಿದ ಸ್ವೆಟರ್, ಟವೆಲ್ ವಗೈರೆ ವಸ್ತುಗಳಿಗೆ ಇನ್ನೊಂದು ಬ್ಯಾಗ್ ಹಿಡ್ಕೊಳ್ಳೋದ. ಈ ಬ್ಯಾಗನ್ನು ಆ ಬ್ಯಾಗೊಳಗೆ ತುಂಬಿಟ್ಟು, ರೈಲು ಇಳಿದು ನಮ್ಮ ತಿರುಗಾಟದ ಬಸ್ಸಿಗೆ ಹತ್ತುವ ವೇಳೆಗೆ ಪಾಲು ಮಾಡೂದಾ? ಒಂದಾ ಎರಡಾ ಗೊಂದಲಗಳು.

ಸಾಮಾನ್ಯಕೆ ಎಲ್ಲೆ ಹೋಗುವಾಗಲೂ ಹೇಗೇ ಹೊರಡುವಾಗಲೂ ನನ್ನ ಮತ್ತು ಚಿಕಮನ ನಡುವೆ ಒಂದು ಯೂನಿಫಾರ್ಮಿಟಿ ಇರುತ್ತದೆ. ನಿಮ್ಮ ಬ್ಯಾಗ್ ನೋಡುವಾ ಎಂದು ನಾನೂ, ನನ್ನ ಬ್ಯಾಗ್ ನೋಡುವಾ ಎಂದು ಅವರೂ ಮೇಲೆ ಕೆಳಗೆ ಓಡಾಡಿದ್ದಾಯ್ತು. ಎಲ್ಲ ಕೈಯಲ್ಲಿ ನೇತಾಡ್ಸೋ ಬ್ಯಾಗ್ ಇದ್ದರೆ ರೈಲ್ವೇ ಸ್ಟೇಶನ್‌ಗಳಲ್ಲಿ ಓವರ್ ಬ್ರಿಜ್ಜ್‌ ಹತ್ತಿ ಇಳಿವಾಗ ಕಷ್ಟ ಆಗ್ತದೆ, ಒಂದೊಂದು ಬ್ಯಾಕ್‌ಪ್ಯಾಕ್ ಹಿಡ್ಕೊಳ್ಳುವಾ, ಜರ್ನಿಗೆ ಅಗತ್ಯ ಇರುದನ್ನೆಲ್ಲ ಅದರಲ್ಲಿ ತುಂಬಬಹುದು ಎಂಬ ನನ್ನ ಸಜೆಶನ್‌ಗೆ ಚಿಕ್ಕಪ್ಪ ತಮ್ಮ ಹೈಸ್ಕೂಲ್ ಓದುವ ಮೊಮ್ಮಗನ ಹಳೆ ಬ್ಯಾಕ್‌ಪ್ಯಾಕ್‌ಗಳನ್ನು ತಂದರು. ನನಗಿದು ನಿನಗದು ಎಂಬುದಾಗಿ ಆರಿಸಿಕೊಂಡು ಪ್ರವಾಸ ವಸ್ತುಗಳನ್ನು ತುರುಕಲಾರಂಭಿಸಿದೆವು.

ಬೆಡ್‌ಶೀಟ್ ಬೇಕಾ ಎಷ್ಟು ಬೇಕು ಎಂಬುದು ದೊಡ್ಡ ಚಿಂತೆ ಆಯ್ತು. ಹೋದಲೆಲ್ಲ ತಂಗುವಲ್ಲಿ ಎಲ್ಲ ವ್ಯವಸ್ಥೆ ಇರುತ್ತದೆಯಾದರೂ ರೈಲಿನಲ್ಲಿ ಬೇಕಲ್ಲವೇ? ಏಸಿ ಕೋಚ್ ಬೇರೆ. ಟ್ರೈನಲ್ಲಿ ಕೊಡ್ತಾರೇಂತ ನನ್ನ ಅನುಭವ ಹೇಳಿದೆ. ಛೀ… ಎಷ್ಟು ಜನ ಬಳಸಿದ್ದೋ ಏನೋ, ನಾನು ಹಿಡ್ಕೊಳ್ತೇನೇಂತ ಚಿಕ್ಕಮ್ಮ ಇದ್ದುದರಲ್ಲಿ ದಪ್ಪದ ಬೆಡ್‌ಶೀಟ್ ಸ್ಪ್ರೆಡ್ಡ್ ಬ್ಯಾಗಿಗೆ ತುರುಕಿದರು. ನಾನು ಏ ಹಾಗೇನಿಲ್ಲ ಎಲ್ಲ ಲಾಂಡ್ರಿ ವಾಶ್ ಆಗಿರ್ತದೆ ಕ್ಲೀನ್ ಇರ್ತದೆ ಅಂದ್ರೂ ಅವರಿಗೆ ಪಸಂದ ಕಂಡಿಲ್ಲ. ತೆಳ್ಳಗಿನ ದುಪ್ಪಟ್ಟವನ್ನೇ ಮಲ್ಟಿ ಪರ್ಪಸ್ ಸ್ಪ್ರೆಡ್ಡ್, ಶೀಟ್ ಎಲ್ಲ ಆಗಿ ಬಳಸುವುದೆಂದು ನಾನು ನಿರ್ಧರಿಸಿದೆ.

ಅದು ಬೇಕಾ ಇದು ಬೇಡವಾ, ದಿನಕ್ಕೊಂದು ಸೀರೆಯಾ, ಅಥವಾ ಎಲ್ಲಾದರೂ ಛಾನ್ಸ್ ಸಿಕ್ಕಲ್ಲಿ ಒಗೆದು ಮರು ಬಳಕೆ ಮಾಡುದಾ…. ಎಷ್ಟೆಲ್ಲ ಗೊಂದಲಗಳು. ದಿನಕ್ಕೊಂದರಂತೆ ಎಲ್ಲ ತುಂಬಿದರೆ ಬ್ಯಾಗ್ ಇನ್ನೆರಡು ಬೇಕು ಎಂಬಂತಾಗಿ ತುಂಬಿದ್ದನ್ನೆಲ್ಲ ತೆಗೆದು ಹಾಕಲಾಯಿತು. “ಅದು ಯಾರು ಬೇಕಿದ್ದರೂ ನಗಲಿ ಏನು ಬೇಕಿದ್ದರೂ ಹೇಳಲಿ ನಾನು ಒಂದು ಸೀರೆಯನ್ನು ಎರಡೆರಡು ಬಾರಿ ಉಡೋದೇ” ಅಂತ ಚಿಕ್ಕಮ್ಮ ಅವರ ಪ್ಯಾಕಿಂಗನ್ನು ಸಿಂಪ್ಲಿಫೈ ಮಾಡಿದರು. ಚಿಕ್ಕಪ್ಪ ತನ್ನ ವಸ್ತುಗಳನ್ನು ಬೇರೆ ತುಂಬಿ, ಶೇವ್ ಮಾಡಲು ಕನ್ನಡಿಯಿಂದ ತೊಡಗಿ, ತಲೆಗೂದಲು ಕಮ್ಮಿ ಇದ್ದರೂ ತಲೆಗೆ ಹಾಕಲು ಎಣ್ಣೆ ಸೇರಿದಂತೆ ಅದು ಇದು ಅಂತ ಅವರ ಬಟ್ಟೆಗಳಿಗಿಂತ ಇತರ ವಸ್ತುಗಳೇ ಕಂಗೊಳಿಸತೊಡಗಿದವು. ಈ ಮಧ್ಯೆ ಈ ತಿಂಡಿಗಳನ್ನು ಹೇಗೆ ಹಿಡ್ಕೊಳ್ಳೋದು ಅಂತ ಇನ್ನೊಂದು ತಲೆಬಿಸಿ.

ಇದನ್ನೆಲ್ಲ ಕಂಡು ನಾನು ಓಡಿಬಂದು ನನ್ನ ಟ್ರಾಲಿಯನ್ನು ಮೇಲಿಂದ ಕೆಳಗಿಳಿಸಿ ದೂಳು ಗೀಳು ಹೊಡೆದು ತುಂಬಲಾರಂಭಿಸಿದೆ. ಈ ಟ್ರಾಲಿ ನೋಡಲು ಮಾತ್ರ, ಅದರಲ್ಲಿ ಹಿಡಿಸುವುದು ಅಷ್ಟಕ್ಕಷ್ಟೇ ಅಂದದ್ದಿಕ್ಕೆ ಚಿಕಮ್ಮ ಹೌದೌದು, ಅದ್ಕೇ ನಾನು ಸಾದಾ ಬ್ಯಾಗು ತುಂಬಿದೆ ಅಂತ ಒಗ್ಗರಣೆ ಹಾಕಿದರು. ಎಳೆದುಕೊಂಡು ಹೋಗಲು ಸುಲಭ ಅಂತ ನಾನು ಟ್ರಾಲಿಗೆ ಮೊರೆ ಹೋದೆ. ಹದಿಮೂರು ದಿನಕ್ಕಾಗುವ ಬಟ್ಟೆಮತ್ತು ಅದರ ಪಕ್ಕಾವಾದ್ಯಗಳಂತಿರುವ ಇತರ ಸಹ ಉಡುಪುಗಳನ್ನು ತುಂಬಿದೆ. ಒಂದು ಪ್ಯಾಂಟಿಗೆ ಎರಡು ಟಾಪ್ ಹಾಕುವಾಂತ ಒಮ್ಮೆ ನಿರ್ಧರಿಸಿ, ಬೇಡ ಗಲೀಜು, ಹೊರಟು ಹೋದಾಗ ಫ್ರೆಶ್ಶ್ ಇರೋದಿಲ್ಲ ಅಂತ ಇನ್ನೊಮ್ಮೆ. ಅನಿಸಿದರೂ ಫರ್‌ಫ್ಯೂಮ್ ಮೈನ್ ಆಗಿ ಇಟ್ಟುಕೊಳ್ಳುವಾಂತ ಮೊದಲು ಅದನ್ನು ತುರುಕಿದೆ ಬ್ಯಾಗಿಗೆ. ಬಟ್ಟೆಗಳನ್ನು ತುಂಬಿಸಿದರೆ ಬ್ಯಾಗಿನಲ್ಲಿ ಹಿಡಿಸುತ್ತಿಲ್ಲ. ಸಾಯ್ಲಾಚೇಂತ ತುಂಬಿದ್ದರಲ್ಲಿ ಅಳೆದು ಸುರಿದೂ ತೂಗಿ ಕೆಲವು ಬಟ್ಟೆ ತೆಗೆದು ಬ್ಯಾಗಿನಲ್ಲಿ ಉಸಿರಾಡಲು ಜಾಗ ಮಾಡಿದೆ. ಇದ್ದದ್ದನ್ನು ಎಜೆಸ್ಟ್ ಮಾಡುವಾಂತ ಮಾನಸಿಕ ತಯ್ಯಾರಿ ನಡೆಸಿದೆ. (ಕೊನೆಗೆ ಟೂರು ಎರಡು ದಿನ ವಿಸ್ತರಣೆ ಆಗಿ ತೆಗೆದಿರಿಸಿದ್ದನ್ನು ಹೇಗಾದರೂ ತುಂಬಿಕೊಳ್ಳಬೇಕಿತ್ತು ಅಂತ ಮನಸ್ಸು ಹೇಳಿತು.) ಅಂತೂ ಮೂರ್ಮೂರು ಬ್ಯಾಗಿಗೆ ಸಿದ್ಧಪಡಿಸಿಕೊಂಡು ಹೊರಟೆವು. ನಾವು ತಂಗಿದಲ್ಲೆಲ್ಲಾ ಸಾಧ್ಯವಾದಲೆಲ್ಲ ಬಟ್ಟೆ ತೊಳೆದು ಸಿದ್ಧಪಡಿಸಿಕೊಂಡೆವು.

ಟೂರ್ ಹೋದಮೇಲೆ ಶಾಪಿಂಗ್ ಮಾಡುವುದು ಬೇಡವಾ? ಯಾರು ಹೊರುವುದು ಎಂದು ಹೇಳುತ್ತಲೇ ಅದು ಇದು ಮತ್ತೊಂದು ಇನ್ನೊಂದು ಅಂತ ಬರುವಾಗ ಬ್ಯಾಗೊಂದು ಹೆಚ್ಚಾಗಿದ್ದು ಶಾಪಿಂಗ್ ಎಡೆಯಲ್ಲಿ ಗೊತ್ತೇ ಆಗಲಿಲ್ಲ.

ಯಬ್ಬಾದೇವಾ ಸೀರೆಗಿಂತ ಸೆರಗು ದೊಡ್ಡದು ಅನ್ನುವ ಹಾಗಿ ಟೂರ್‌ಗಿಂತ ಸಿದ್ಧತೆ ದೊಡ್ಡದು!


ಚಂದ್ರಾವತಿ ಬಡ್ಡಡ್ಕ

ಚಂದ್ರಾವತಿ ಬಡ್ಡಡ್ಕ ಹಿರಿಯ ಪತ್ರಕರ್ತೆ, ಅಂಕಣಕಾರರು ಹಾಗೂ ವೃತ್ತಿಪರ ಅನುವಾದಕಿ

One thought on “

  1. ಒಂದೊಳ್ಳೆಯ ಲಲಿತ ಪ್ರಬಂಧ
    ನಿಮ್ಮ ಅರೆಭಾಷೆ ಯಷ್ಟೆ ಕನ್ನಡ ನು ಚಂದ

Leave a Reply

Back To Top