ಕಾವ್ಯ ಸಂಗಾತಿ
ಯೋಧ
ಅರುಣಾ ಶ್ರೀನಿವಾಸ
ದೇಶ ರಕ್ಷಿಸುವ ಕಾಯಕಕ್ಕೆ
ಮುಲಾಜಿಲ್ಲದೆ
ಹುರುಪಿನಿಂದ ತೊಡಗಿಕೊಂಡವನು…
ಆಹಾರ ನಿದ್ರೆಗಳ ಕೊರತೆಯಿದ್ದರೂ
ಇರದಂತೆ ಏಕಚಿತ್ತದಲಿ
ಸೂರಿಲ್ಲದ ಸೂರಿನಲಿ
ಬಿಸಿಲು ಚಳಿ
ಕಲ್ಲು ಮಣ್ಣೆನ್ನದೆ
ಎಲ್ಲವನೂ ಸಂಭಾಳಿಸುವ
ಅವನ ಅಗಾಧ ಶಕ್ತಿಯನು
ಎಣಿಸುವಾಗಲೆಲ್ಲಾ
ಎದೆಯೊಳಗೆ
ಮಿಂಚು ಹೊಡೆದ ಅನುಭವ…
ಅವನ ಮೈಯ ಬೆವರಲ್ಲಿ
ರಕ್ತದ ಕೆಚ್ಚೆದೆಯ ವಾಸನೆ
ಘಾಟು ಬೀರಿ ಜಯಬೇರಿ
ಬಾರಿಸುತ್ತದೆ….
ರೋಮ ರೋಮಗಳಲ್ಲೂ
ದೇಶ ಪ್ರೇಮದ ಉದ್ಗಾರ…
ಇರುವ ಪುಟ್ಟೊಂದು
ಎದೆಗೂಡಿನಲ್ಲಿ
ತನ್ನದೇ ಸಂಸಾರದ
ಪ್ರೀತಿ ದೀಪವೊಂದು
ಲೋಕದ ಕಣ್ಣಿಗೆ ಅಗೋಚರವಾಗಿ
ದಿನವೂ ತೂಗಾಡುತ್ತಿರುತ್ತದೆ…
ಅಲ್ಲೂ ಒಂದಷ್ಟು
ಬೆಚ್ಚನೆಯ ಕನಸುಗಳಿರುತ್ತವೆ
ಸಿಹಿ ಅಪ್ಪುಗೆಗಳ ಸವಿ ಮಾತಿರುತ್ತದೆ..
ಅವನನ್ನೇ ನಂಬಿ ನಿಟ್ಟುಸಿರುಗಳನ್ನು
ಎಣಿಸುತ್ತಿರುವ ಜೀವಗಳಿರುತ್ತವೆ…
ಇದ್ಯಾವುದನ್ನೂ ಲೆಕ್ಕಿಸದೆ
ಶತ್ರು ಸೈನಿಕನ ಗುಂಡು ಅವನ
ಎದೆ ಸೀಳಿರುವ ಹೊತ್ತಿಗೆ…
ಹುತಾತ್ಮನಾದವನ ನೆನಪಲ್ಲಿ
ದೇಶ ಗೆಲುವು ಸಂಭ್ರಮಿಸುತ್ತಿರುತ್ತದೆ….
ಆಗ ಗಲ್ಲಿ ಗಲ್ಲಿಗಳಲ್ಲೂ
ಪಟಾಕಿಯದೇ ಸದ್ದು…
ಯುದ್ಧದಲ್ಲಿ ಸೆಣಸಾಡುವ ಯೋಧನ ಕಿವಿಯೊಳಗೋ…
ಗುಂಡುಗಳದೇ ಸದ್ದು…
ಅವನನ್ನೇ ನಂಬಿದ
ಮನೆಯೊಳಗಿನ ಜೀವಗಳ
ಕನಸುಗಳು ಮಾತ್ರ
ಈ ಎಲ್ಲಾ ಸದ್ದುಗಳಿಗೆ ತತ್ತರಗೊಂಡು,
ಛಿದ್ರಛಿದ್ರವಾಗಿರುವ
ಕನಸುಗಳನ್ನು ಆಯುತ್ತಿರುತ್ತದೆ
ಜೋಡಿಸಲು ಹೆಣಗಾಡುತ್ತಿರುತ್ತದೆ.
One thought on “ಅರುಣಾ ಶ್ರೀನಿವಾಸ ಕವಿತೆ-ಯೋಧ”